
ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಡಾ.ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾಶಂಕರ ಪ್ರಶಸ್ತಿಯನ್ನು ಸಂಗಮೇಶ ಸವದತ್ತಿಮಠ ಹಾಗೂ ವಿದ್ಯಾಶಂಕರ ಪುರಸ್ಕಾರವನ್ನು ಜಯಲಲಿತಾ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರು: ‘ಜನಪ್ರಿಯ ಸಾಹಿತ್ಯ ಬರವಣಿಗೆಗಳಿಗಿಂತ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಎಲೆಮರೆ ಕಾಯಿಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾಶಂಕರ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬರವಣಿಗೆಗಿಂತ ಸಂಶೋಧನೆ ಕೆಲಸ ಕಷ್ಟಕರವಾದದ್ದು. ಕ್ಷೇತ್ರ ಕಾರ್ಯ ಮಾಡದೇ ಇದ್ದರೆ ಹೊಸತನ್ನು ನೀಡಲು ಆಗುವುದಿಲ್ಲ. ಹಸ್ತ ಪ್ರತಿ ಸಂಗ್ರಹ, ಶಾಸನಗಳ ಸಂಶೋಧನೆಯಲ್ಲಿ ಸದ್ದಿಲ್ಲದೇ ಹಲವರು ತೊಡಗಿಸಿಕೊಂಡು ಕನ್ನಡ ಸಂಶೋಧನಾ ವಲಯವನ್ನು ಶ್ರೀಮಂತಗೊಳಿಸಿದ್ದಾರೆ. ಎ.ಆರ್.ಕೃಷ್ಣಶಾಸ್ತ್ರಿ, ಟಿ.ಎಸ್.ವೆಂಕಣ್ಣಯ್ಯ, ಆರ್.ಸಿ.ಹಿರೇಮಠ್ ಸಹಿತ ಹಲವರ ಶ್ರಮ ಇದರಲ್ಲಿ ಇದೆ’ ಎಂದು ಹೇಳಿದರು.
‘ಹೋರಾಟದ ಫಲವಾಗಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಿತು. ಇದರ ಹಿಂದೆ ಇದ್ದುದು ಸಂಶೋಧನಾ ಚಟುವಟಿಕೆಗಳೇ. ಇದರಿಂದಲೇ ಭಾಷೆಯ ಮಹತ್ವ ಅರಿವಾಯಿತು. ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಾಹಿತ್ಯ, ಮಹತ್ವ ತಿಳಿಸಿಕೊಡುವ ಕೆಲಸ ಭಾರತದ ಇತರೆ ಭಾಷೆಗಳಿಗಿಂತ ಕನ್ನಡದಲ್ಲಿ ಹೆಚ್ವು ಆಗುತ್ತಿರುವುದು ಶ್ಲಾಘನೀಯ’ ಎಂದರು.
‘ವೀರಶೈವ ಸಾಹಿತ್ಯ ಚರಿತ್ರೆಯನ್ನು ನಾಲ್ಕು ಸಂಪುಟಗಳ ಆರು ಭಾಗಗಳಲ್ಲಿ ಹೊರ ತರುವಲ್ಲಿ ವಿದ್ಯಾಶಂಕರ ಅವರ ಪ್ರಯತ್ನ ಹಿರಿದು. ಅವರು ನಿಧನರಾದ ನಂತರ ಒಂದು ಸಂಪುಟ ಹೊರತರಲು ನಮ್ಮಿಂದ ಆಗಿಲ್ಲ’ ಎಂದು ಪರಮಶಿವಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.