
ರಾಜರಾಜೇಶ್ವರಿನಗರ: ಲಗ್ಗೆರೆಯ ನರಸಿಂಹಸ್ವಾಮಿ ಬಡಾವಣೆಯಲ್ಲಿರುವ ಲಗ್ಗೆರೆ ನಾರಾಯಣಸ್ವಾಮಿ ಅವರ ಮನೆಯ ಆವರಣದಲ್ಲಿ ಆಶ್ರಯ ಮಹಿಳಾ ವೇದಿಕೆ ಮತ್ತು ಅರ್ಪಿತ ಸೇವಾ ಟ್ರಸ್ಟ್ ಆಯೋಜಿಸಿದ್ದ ಅಂಧರ ಉಚಿತ ಸಾಮೂಹಿಕ ವಿವಾಹದಲ್ಲಿ ಹಲವು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ವಧು-ವರರಿಗೆ ಸೀರೆ-ರವಿಕೆ, ಪಂಚೆ, ಷರ್ಟ್, ತಾಳಿ-ಕಾಲುಂಗುರ, ಹಾಸಿಗೆ, ದಿಂಬು, ಬೀರು, ಫ್ಯಾನ್, ಚೇರು, ಗ್ಯಾಸ್, ಸ್ಟೌ ಮತ್ತು ಒಂದು ತಿಂಗಳಿಗೆ ಆಗುವಷ್ಟು ದವಸ–ಧಾನ್ಯ ಸಹಿತ ಹಲವು ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ಜನಪದ ಗಾಯಕ ಕುಣಿಗಲ್ ರಾಮಚಂದ್ರ ಅವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ‘ಚಿನ್ನ, ಬೆಳ್ಳಿ ದುಬಾರಿಯಾಗಿದ್ದರೂ ಬಡವರು, ನೊಂದವರ ಸೇವೆ ಮಾಡುವ ಮೂಲಕ ಲಗ್ಗೆರೆ ನಾರಾಯಣಸ್ವಾಮಿ ಅವರ ಕುಟುಂಬ ಇತರರಿಗೆ ಮಾದರಿಯಾಗಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
‘ನಮ್ಮ ಹಿರಿಯರು ಮಾಡಿದ ದಾನ ಧರ್ಮವನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಸಮಾಜ ಸೇವೆ ಮಾಡುವ ಮೂಲಕ ನಾವು ಭಗವಂತನ ಸೇವೆ ಮಾಡುತ್ತಿರುವ ಮನೋಭಾವ ಬೆಳೆಸಿಕೊಂಡಿದ್ದೇವೆ’ ಎಂದು ಲಗ್ಗೆರೆ ನಾರಾಯಣಸ್ವಾಮಿ ಹೇಳಿದರು.
ಮುಖಂಡರಾದ ಬಿ.ಆರ್.ನಂಜುಂಡಪ್ಪ, ವೇಲುನಾಯ್ಕರ್, ಮಂಜುಳಾ ನಾರಾಯಣಸ್ವಾಮಿ, ಜಿ.ಮೋಹನ್‌ಕುಮಾರ್, ಮಂಜುಳಾ ಮಲ್ಲೇಶ್, ಕಾಂಚನಾ, ಅನುಸೂಯಮ್ಮ, ಲಕ್ಷ್ಮಿ, ಸುನಿತಾ, ಎಸ್.ಭೂಷಣ್, ಮಂಜುನಾಥ್ ಬಾಬು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಅಮರ್‌ನಾಥ್, ಲಯನ್ಸ್ ಕ್ಲಬ್ ಆಫ್ ಮಾರುತಿ ಸೇವಾ ನಗರ ಅಧ್ಯಕ್ಷ ಜೋಸೆಫ್, ಲಯನ್ಸ್ ಜಿಲ್ಲಾ ಗವರ್ನರ್ ಆಕಾಶ್ ಸುವರ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.