ADVERTISEMENT

ಮತ ಕಳವು ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಆರೋ‍ಪಿ ಸೆರೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 18:38 IST
Last Updated 14 ನವೆಂಬರ್ 2025, 18:38 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು(ಎಸ್‌ಐಟಿ) ಪಶ್ಚಿಮ ಬಂಗಾಳದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ADVERTISEMENT

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಬಾಪಿ ಆದ್ಯ(27) ಬಂಧಿತ.

ಆರೋಪಿಯನ್ನು ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿದೆ ಎಂದು ಮೂಲಗಳು ಹೇಳಿವೆ.

ಆರೋಪಿಯಿಂದ ಎರಡು ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ. ಕೆಲವು ದಾಖಲೆಗಳನ್ನೂ ವಶಕ್ಕೆ ಪಡೆಯಲಾಗಿದೆ. ಈತ ಪಶ್ಚಿಮ ಬಂಗಾಳದ ಹಳ್ಳಿಯಲ್ಲಿ ವಾಸ್ತವ್ಯ ಮಾಡಿ ₹10ಕ್ಕೆ ಒಂದು ಒಟಿಪಿ ಮಾರುತ್ತಿದ್ದ ಎಂಬುದು ತಿಳಿದುಬಂದಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಇದೇ ಪ್ರಕರಣದಲ್ಲಿ 15 ದಿನಗಳ ಹಿಂದೆ ಕಲಬುರಗಿಯಲ್ಲಿ ಕೆಲವು ಶಂಕಿತರನ್ನು ವಶಕ್ಕೆ ಪಡೆದು ಎಸ್‌ಐಟಿ ವಿಚಾರಣೆ ನಡೆಸಿತ್ತು. ಅವರು ನೀಡಿದ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. 

‘ಪೋರ್ಟಲ್ ಮೂಲಕವೇ ಆರೋಪಿಯು ಆನ್‌ಲೈನ್‌ ವಂಚಕರಿಗೆ ಒಟಿಪಿ ಮಾರಾಟ ಮಾಡುತ್ತಿದ್ದ. ಅದೇ ಮಾದರಿಯಲ್ಲಿ ಮತ ಕಳವು ತಂಡಕ್ಕೂ ಒಟಿಪಿ ಮಾರಾಟ ಮಾಡಿರುವುದು ಕಂಡುಬಂದಿದೆ. ಮೊಬೈಲ್ ಸಂಖ್ಯೆ ಬಳಸಿ ತನ್ನ ವೆಬ್‌ಸೈಟ್ ಮೂಲಕ ಒಟಿಪಿ ಮಾರಾಟ ಮಾಡಿದ್ದಾನೆ. ಆರೋಪಿಯ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ’ ಎಂದು ಮೂಲಗಳು ಹೇಳಿವೆ.

‘ಆರೋಪಿ ಆದ್ಯ ಮತಕಳವು ಮಾತ್ರವಲ್ಲದೆ ಇತರೆ ಸೈಬರ್ ವಂಚನೆ ಕೃತ್ಯಗಳಿಗೂ ಒಟಿಪಿ ಮಾರಾಟ ಮಾಡಿರುವುದು ಕಂಡುಬಂದಿದೆ. ವೆಬ್‌ಸೈಟ್‌ನ ಮೂಲ ಸರ್ವರ್ ವಿದೇಶದಲ್ಲಿರುವ ಬಗ್ಗೆ ಅನುಮಾನವಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಆಳಂದ ಕ್ಷೇತ್ರದ 6,018 ಮತಗಳ ರದ್ದತಿಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಕೆ ಆಗಿದ್ದವು. ಈ ಅರ್ಜಿಯನ್ನು ಸ್ಥಳೀಯರ ಹೆಸರಿನಲ್ಲಿ ಭರ್ತಿ ಮಾಡಿ ಕಾಲ್ ಸೆಂಟರ್‌ನ ಡೇಟಾ ಆಪರೇಟರ್‌ಗಳು ಸಲ್ಲಿಸಿದ್ದರು. ಕಾಲ್‌ ಸೆಂಟರ್‌ ನಡೆಸುತ್ತಿದ್ದ ಕಲಬುರಗಿಯ ತಂಡವೊಂದಕ್ಕೆ ಪ್ರತಿ ಅರ್ಜಿಗೆ ₹80 ಪ್ರಕಾರ ₹4.6 ಲಕ್ಷ ಪಾವತಿ ಆಗಿತ್ತು. ಇದರಲ್ಲಿ ಒಟಿಪಿ ಪಡೆಯಲು, ತಲಾ ಒಂದು ಒಟಿಪಿಗೆ ₹10 ಅನ್ನು ಆದ್ಯನ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.