ಬೆಂಗಳೂರು ಕ್ಯಾಬ್ ಚಾಲಕನಿಗೆ ನಿದ್ದೆ.. ಮಲಗಲು ಹೇಳಿ ತಾನೇ ಡ್ರೈವ್ ಮಾಡಿದ ಟೆಕಿ!
ಬೆಂಗಳೂರು: ಅನೇಕ ಕ್ಯಾಬ್ ಚಾಲಕರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಚಾಲಕರು ಸರಿಯಾಗಿ ನಿದ್ದೆ ಮಾಡದೇ ಕೆಲವೊಮ್ಮೆ ಗ್ರಾಹಕರಿಂದ ದೂಷಿಸಿಕೊಳ್ಳುವುದೂ ಇದೆ.
ಆದರೆ, ಟೆಕಿಯೊಬ್ಬರು ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕ್ಯಾಬ್ ಬುಕ್ ಮಾಡಿಕೊಂಡು ಬರುವಾಗ ಚಾಲಕನಿಗೆ ನಿದ್ರೆ ಬಂದಿದ್ದನ್ನು ಗಮನಿಸಿ ಆತನಿಗೆ ಮಲಗಲು ಹೇಳಿ ತಾವೇ ಕಾರು ಚಲಾಯಿಸಿಕೊಂಡು ಬಂದಿದ್ದಾರೆ.
ಮಿಲಿಂದ್ ಚಂದವಾನಿ ಎನ್ನುವ ಟೆಕಿ ಅವರು ಘಟನೆಗೆ ಸಂಬಂಧಿಸಿದ ವಿಡಿಯೊವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಗಮನ ಸೆಳೆದಿದೆ.
‘ಕಳೆದ ರಾತ್ರಿ (ಡಿ.26) ನನಗೊಂದು ಅನಿರೀಕ್ಷಿತ ಘಟನೆ ಎದುರಾಯಿತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರದ ಕಡೆ ಬರುತ್ತಿರುವಾಗ ನಾನು ಬುಕ್ ಮಾಡಿದ್ದ ಕ್ಯಾಬ್ ಚಾಲಕ ಕಾರು ಚಲಾಯಿಸುವಾಗ ಪದೇ ಪದೇ ಕಣ್ಣು ಮುಚ್ಚುತ್ತಿದ್ದ. ನಿದ್ದೆ ಬರುತ್ತಿತ್ತು. ಸ್ವಲ್ಪ ಹೊತ್ತು ಟೀ ಕುಡಿದು, ಸಿಗರೇಟ್ ಸೇದಿ ಮತ್ತೆ ಕಾರು ಚಲಾಯಿಸಿದರೂ ಅವರಿಗೆ ಅದೇ ಅನುಭವ ಆಯಿತು. ಆದರೆ, ನಾನು ಕಾರು ಚಲಾಯಿಸುತ್ತೇನೆ, ನೀವು ಮಲಗಿ ಎಂದ ತಕ್ಷಣ ಅವರು ಏನೂ ಯೋಚಿಸದೇ ನನಗೆ ಕಾರಿನ ಕೀ ಕೊಟ್ಟರು’ ಎಂದು ಹೇಳಿಕೊಂಡಿದ್ದಾರೆ.
‘ನಾನು ಗೂಗಲ್ ಮ್ಯಾಪ್ ಸಹಾಯದೊಂದಿಗೆ ನನ್ನ ಗಮ್ಯ ಸ್ಥಾನವನ್ನು ತಲುಪಿದೆ. ಈ ವೇಳೆ ಅವರು ರಾತ್ರಿ ಪಾಳಿಯ ಒತ್ತಡ ತಡೆದುಕೊಳ್ಳಲಾಗುತ್ತಿಲ್ಲ. ನಾನು ಹಗಲು ಪಾಳಿಯನ್ನೇ ಮಾಡುತ್ತೇನೆ ಎಂದು ತಮ್ಮ ಕಾರಿನ ಮಾಲೀಕನ ಹತ್ತಿರ ಕೇಳಿಕೊಳ್ಳುತ್ತಿದ್ದನ್ನು ಗಮನಿಸಿದೆ. ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಕಾರಿನ ಕೀ ಕೊಟ್ಟಿದ್ದಕ್ಕೆ ನನಗೆ ಅಚ್ಚರಿಯಾಯಿತು’ ಎಂದಿದ್ದಾರೆ.
‘ಜೀವನದಲ್ಲಿ ಏನಾದರೂ ಅನಿರೀಕ್ಷಿತ ಘಟನೆಗಳು ಬರಬಹುದು. ರೆಡಿಯಾಗಿರಿ’ ಎಂದು ಅವರು ಬರೆದುಕೊಂಡಿದ್ದಾರೆ.
ಮಿಲಿಂದ್ ಚಂದವಾನಿ ಅವರು ಐಐಎಂನಿಂದ ಎಂಬಿಎ ಪದವೀಧರರಾಗಿದ್ದು ಚಾಂಪ್‌ಡೈರಿಸ್ ಎನ್ನುವ ಸಂಸ್ಥೆಯ ಸ್ಥಾಪಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.