ADVERTISEMENT

ಮೆಣಸಿನಕಾಯಿ ಬೆಳೆಗೆ 2.75 ಟಿಎಂಸಿ ಅಡಿ ನೀರು ಹರಿಸಲು ತೀರ್ಮಾನ: ಡಿ.ಕೆ.ಶಿವಕುಮಾರ್

ಕೃಷ್ಣಾ ಮೇಲ್ದಂಡೆ ವ್ಯಾಪ್ತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 8:30 IST
Last Updated 7 ಜನವರಿ 2024, 8:30 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆ ಉಳಿಸಲು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ 2.75 ಟಿಎಂಸಿ ಅಡಿ ನೀರು ಹರಿಸಲು ತೀರ್ಮಾನಿಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಕ್ಷಣದಿಂದಲೇ ನೀರು ಬಿಡುಗಡೆ ಮಾಡಲಾಗುವುದು. 75 ಕಿ.ಮೀ. ನೀರು ಹರಿಯಬೇಕಿದೆ. 2–3 ದಿನಗಳಲ್ಲಿ ನೀರು ತಲುಪಬಹುದು’ ಎಂದರು.

‘ಕಲಬುರಗಿ, ರಾಯಚೂರು, ಬಾಗಲಕೋಟೆ, ಯಾದಗಿರಿ ಭಾಗದ ಜಿಲ್ಲಾ ಸಚಿವರು, ಎಲ್ಲ ಪಕ್ಷಗಳ ಶಾಸಕರು, ರೈತ ಮುಖಂಡರ ಜೊತೆ ಶನಿವಾರ ರಾತ್ರಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಜನಪ್ರತಿನಿಧಿಗಳು ವಾಸ್ತವ ಪರಿಸ್ಥಿತಿ ವಿವರಿಸಿ, ನೀರು ಬಿಡಲು ಒತ್ತಾಯಿಸಿದರು’ ಎಂದರು.

ADVERTISEMENT

‘ಬರ ಪರಿಸ್ಥಿತಿಯಲ್ಲಿ ಬೆಳೆ ಹಾಕಬೇಡಿ ಎಂದು ಮನವಿ ಮಾಡಿದ್ದರೂ ಕೆಲವು ರೈತರು ಭತ್ತದ ಬದಲು ಮೆಣಸಿನಕಾಯಿ ಬೆಳೆ ಹಾಕಿದ್ದಾರೆ. ಈ ಬೆಳೆ ನಾಶವಾದರೆ ₹ 2 ಸಾವಿರ ಕೋಟಿಯಷ್ಟು ನಷ್ಟವಾಗುವ ಸಾಧ್ಯತೆ ಇದೆ. ರೈತರ ರಕ್ಷಣೆ ಉದ್ದೇಶದಿಂದ ನೀರು ಬಿಡಲು ತೀರ್ಮಾನಿಸಲಾಗಿದೆ. ಮೆಣಸಿನಕಾಯಿ ಬೆಳೆಗಳಿಗೆ ಮಾತ್ರ ರೈತರು ಈ ನೀರನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ಇದಾದ ನಂತರ ಕೃಷಿ ಉದ್ದೇಶಕ್ಕೆ ನೀರು ಬಿಡುವುದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಜೊತೆ ಸಹಕಾರ ನೀಡಬೇಕು’ ಎಂದೂ ಮನವಿ ಮಾಡಿದರು.

‘ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟು ಸೇರಿ 47 ಟಿಎಂಸಿ ಅಡಿ ನೀರು ಲಭ್ಯ ಇದೆ. ಕುಡಿಯುವ ನೀರಿಗೆ 37 ಟಿಎಂಸಿ ಅಡಿ ನೀರು, ಇತರ ಉದ್ದೇಶಕ್ಕೆ 3 ಟಿಎಂಸಿ ಅಡಿ ನೀರು ಬೇಕು. ನೀರು ಹರಿಸುವ ವೇಳೆ 1.5 ಟಿಎಂಸಿ ಅಡಿ ನೀರು ನಷ್ಟವಾಗುತ್ತದೆ. ಈ ಭಾಗದವರ ಒತ್ತಡಕ್ಕೆ ಈಗ 2.75 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ. ಇನ್ನೂ ಆರು ತಿಂಗಳು ನೀರು ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಈ ಬಾರಿ ಕೊನೆಯದಾಗಿ ರೈತರ ಜಮೀನಿಗೆ ನೀರು ಹರಿಸುತ್ತಿದ್ದೇವೆ’ ಎಂದೂ ವಿವರಿಸಿದರು.

‘ನೀರು ಬಿಡುವಂತೆ ಎಲ್ಲ ಪಕ್ಷಗಳ ಶಾಸಕರು ಹಾಗೂ ಸಚಿವರುಗಳು ಒತ್ತಡ ಹಾಕಿದ್ದಾರೆ. ಎಲ್ಲರ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಂಡಿದ್ದೇವೆ’ ಎಂದರು.

‘ನೀರು ಬಳಕೆಯ ಜವಾಬ್ದಾರಿಯನ್ನು ಜನಪ್ರತಿನಿಧಿ ಹಾಗೂ ರೈತ ಸಂಘಟನೆಗಳಿಗೇ ನೀಡುತ್ತೇನೆ. ನಮ್ಮ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇವೆ. ಆದರೆ, ಅಧಿಕಾರಿಗಳು ರೈತರ ಜೊತೆ ಜಗಳ ಮಾಡಲು ಆಗುವುದಿಲ್ಲ. ಮಾಧ್ಯಮಗಳು ಕೂಡ ರೈತರ ಜವಾಬ್ದಾರಿ ಬಗ್ಗೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು. 

ಸಮಸ್ಯೆಗಳು ಎದುರಾದಾಗ ಅನುಕೂಲ ಆಗುವ ನದಿ ಜೋಡಣೆ ವಿಚಾರ ಪ್ರಸ್ತಾಪದ ಬಗ್ಗೆ ಕೇಳಿದಾಗ, ‘ಇದು ಕೇಂದ್ರ ಸರ್ಕಾರದ ಯೋಜನೆ. ಇದೊಂದು ದೊಡ್ಡ ಯೋಜನೆಯಾಗಿದ್ದು ಈಗ ವಿಷಯಾಂತರ ಮಾಡುವುದು ಬೇಡ. ನಾಳೆ, ನಾಡಿದ್ದು ಕೇಂದ್ರದ 31 ಸಂಸದರ ತಂಡ ಕಾವೇರಿ ವೀಕ್ಷಣೆಗೆ ಬರುತ್ತಿದೆ. ನಮ್ಮ ನೀರಾವರಿ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗುವುದು’ ಎಂದು ತಿಳಿಸಿದರು.

ಫೆಬ್ರುವರಿಯಲ್ಲಿ ಬಜೆಟ್ ಮಂಡನೆಯಾಗಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಅನುದಾನದ ಬಗ್ಗೆ ಕೇಳಿದಾಗ, ‘ಬಜೆಟ್ ವಿಚಾರವನ್ನು ಮುಖ್ಯಮಂತ್ರಿ ಬಳಿ ಚರ್ಚೆ ಮಾಡಿ. ಪ್ರಸ್ತಾವನೆ ಸಲ್ಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.