ADVERTISEMENT

ಬೆಂಗಳೂರು ನಗರಕ್ಕೆ ಜಲ ಸಂಕಟ ಭೀತಿ

ಕೈಕೊಟ್ಟ ಮುಂಗಾರು: ಬೆಂಗಳೂರಿಗೆ ಎದುರಾಗಲಿದೆ ನೀರಿನ ಅಭಾವ

ಗುರು ಪಿ.ಎಸ್‌
Published 28 ಜೂನ್ 2019, 20:10 IST
Last Updated 28 ಜೂನ್ 2019, 20:10 IST
   

ಬೆಂಗಳೂರು:ಕಾವೇರಿ ಜಲಾನಯನ ಪ್ರದೇಶಗಳಲ್ಲಿ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಷ್ಟು ಮಳೆಯಾಗದಿದ್ದರೆ, ನಗರದಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ನಾಲ್ಕು ಜಲಾಶಯಗಳಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆಯಿದೆ.

‘ನಗರಕ್ಕೆ ಜಲಮಂಡಳಿ ಪ್ರತಿನಿತ್ಯ 145 ಕೋಟಿ ಲೀಟರ್‌ನಷ್ಟು ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಅಂದರೆ, ತಿಂಗಳಿಗೆ 1.5 ಟಿಎಂಸಿ ಅಡಿಯಿಂದ 2 ಟಿಎಂಸಿ ಅಡಿ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯ, ಕಬಿನಿಯಲ್ಲಿ 2.15 ಟಿಎಂಸಿ ಅಡಿ ಮತ್ತು ಕೆಆರ್‌ಎಸ್‌ನಲ್ಲಿ 6.5 ಟಿಎಂಸಿ ಅಡಿಯಷ್ಟು ನೀರಿದೆ. ಇವುಗಳಿಂದ ಸಿಗುವ ನೀರು ಮತ್ತು ನಮ್ಮಲ್ಲಿನ ಸಂಗ್ರಹ ನೋಡಿದರೆ, ಜುಲೈ ವರೆಗೆ ನೀರು ಪೂರೈಸಲು ಯಾವುದೇ ತೊಂದರೆಯಿಲ್ಲ. ನಂತರವೂ ನಿರೀಕ್ಷಿತ ಮಳೆಯಾಗದಿದ್ದರೆ ನೀರಿನ ಅಭಾವ ಉಂಟಾಗುತ್ತದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ (ನಿರ್ವಹಣೆ) ಬಿ.ಸಿ. ಗಂಗಾಧರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಧಾನಿಯ ನೀರಿನ ಬೇಡಿಕೆ ಪೂರೈಸಲು ಜಲಾಶಯವನ್ನೇ ಅವಲಂಬಿಸಿದ್ದೇವೆ. ಇದಕ್ಕೆ ಪರ್ಯಾಯ ಮಾರ್ಗ
ವಿಲ್ಲ. ನೀರಿನ ಸಂಗ್ರಹವೇ ಇರದಿದ್ದರೆ ಪೂರೈಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ಶೇ 200ರಷ್ಟು ದಂಡಕ್ಕೆ ಪ್ರಸ್ತಾವ:‘2009ರ ಆಗಸ್ಟ್‌ ನಂತರ ನಿರ್ಮಾಣವಾದ 1,200 ಚದರ ಅಡಿಗೂ ಹೆಚ್ಚು ವಿಸ್ತೀರ್ಣದ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ. ಆದರೆ, ಬಹಳಷ್ಟು ಜನ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿಲ್ಲ. ಈವರೆಗೆ 1.17 ಲಕ್ಷ ಕಟ್ಟಡಗಳಲ್ಲಿ ಈ ವ್ಯವಸ್ಥೆ ಅಳವಡಿಸಿಕೊಂಡಿದ್ದರೆ, ಉಳಿದ 64 ಸಾವಿರ ಕಟ್ಟಡಗಳ ಮಾಲೀಕರು ದಂಡ ಕಟ್ಟುತ್ತಿದ್ದಾರೆ. ಈವರೆಗೆ ₹3.05 ಕೋಟಿ ದಂಡ ವಸೂಲಿ ಮಾಡಲಾಗಿದೆ’ ಎಂದು ಗಂಗಾಧರ ತಿಳಿಸಿದರು.

‘ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದ ಕಟ್ಟಡ ಮಾಲೀಕರಿಗೆ ಆರಂಭದಲ್ಲಿ ನೀರಿನ ಶುಲ್ಕದ ಶೇ 50ರಷ್ಟು, ಉಲ್ಲಂಘನೆ ಮುಂದುವರಿದರೆ ಶೇ 100ರಷ್ಟು ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ, ಶೇ 200ರಷ್ಟು ದಂಡ ವಿಧಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

ಮಾನವ ನಿರ್ಮಿತ ಸಮಸ್ಯೆ:‘ನಗರದಲ್ಲಿ ಮಳೆ ಬೀಳುವ ಪ್ರಮಾಣ ಜಾಸ್ತಿಯೇ ಇದೆ. ಮಳೆ ನೀರು ಸಂಗ್ರಹಕ್ಕೆ ಭೌಗೋಳಿಕವಾಗಿಯೇ ನಮ್ಮಲ್ಲಿ ಪೂರಕ ವ್ಯವಸ್ಥೆ ಇದೆ. ಆದರೆ, ನೀರು ಸಂಗ್ರಹಿಸುವ ಅಥವಾ ಇಂಗಿಸುವ ಕೆಲಸವಾಗುತ್ತಿಲ್ಲ. ನೀರಿನ ಕೊರತೆಗೆ ಮಾನವ ನಿರ್ಮಿತ ಸಮಸ್ಯೆಗಳೇ ಕಾರಣ’ ಎಂದು ‘ಸಿಟಿಜನ್‌ ಫಾರ್‌ ಬೆಂಗಳೂರು’ ಸಂಸ್ಥೆಯ ಶ್ರೀನಿವಾಸ ಅಲಿವಿಲ್ಲಿ ವಿಶ್ಲೇಷಿಸಿದರು.

‘ಕೆರೆ ಅಥವಾ ಕೊಳವೆ ಬಾವಿಗಳ ಮರುಪೂರಣ ಕೆಲಸವಾಗಬೇಕಿದೆ. ನಗರದಲ್ಲಿ 1,245 ಉದ್ಯಾನಗಳಿವೆ. ಈ ಉದ್ಯಾನಗಳಲ್ಲಿ ಮಳೆ ನೀರು ಸಂಗ್ರಹಿಸುವಂತಹ ಪುಟ್ಟ ಬಾವಿ ಅಥವಾ ಕೊಳ ನಿರ್ಮಾಣ ಮಾಡಿದರೆ, ಸಾಕಷ್ಟು ನೀರು ಇಂಗುತ್ತದೆ. ಪ್ರಕೃತಿಗೆ ಹಾನಿ ಮಾಡು
ವಂತಹ ಮೆಟ್ರೊ, ಎಲಿವೇಟೆಡ್‌ ಕಾರಿಡಾರ್‌ಗಳಿಗೆ ಸಾವಿರಾರು ಕೋಟಿ ನೀಡಲಾಗುತ್ತಿದೆ. ಉದ್ಯಾನದಲ್ಲಿ ಮಳೆ
ನೀರು ಸಂಗ್ರಹಿಸುವ ವ್ಯವಸ್ಥೆಗೂ ಅಷ್ಟೇ ದುಡ್ಡು ನೀಡಿದರೆ ಜಲ ಸಮಸ್ಯೆ ನೀಗುತ್ತದೆ’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.