ADVERTISEMENT

ಬೆಂಗಳೂರು | ಸಾಮೂಹಿಕ ಅತ್ಯಾಚಾರ ಪ್ರಕರಣ: ಆರು ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 15:17 IST
Last Updated 23 ಅಕ್ಟೋಬರ್ 2025, 15:17 IST
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು  
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು     

ಬೆಂಗಳೂರು: ಪೊಲೀಸ್ ಬಾತ್ಮೀದಾರರು ಎಂದು ಹೇಳಿಕೊಂಡು ಬಾಡಿಗೆ ಮನೆಯೊಂದಕ್ಕೆ ನುಗ್ಗಿ ದರೋಡೆ ನಡೆಸಿ, ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಆರೋಪದಡಿ ಆರು ಮಂದಿಯನ್ನು ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

28 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ನವೀನ್‌, ಕಾರ್ತಿಕ್‌, ಸುಯೋಗ್‌, ಸೀನ ಹಾಗೂ ಜಂಗ್ಲಿ ಪೃಥ್ವಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಮುಖ ಆರೋಪಿ ಮಿಥುನ್‌ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆರು ವರ್ಷದ ಹಿಂದೆ ಸಂತ್ರಸ್ತೆ ಬೆಂಗಳೂರಿಗೆ ಬಂದಿದ್ದರು. ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ನೆಲಸಿದ್ದರು ಎಂದು ಮೂಲಗಳು ಹೇಳಿವೆ.

ಮಂಗಳವಾರ ರಾತ್ರಿ 7 ಗಂಟೆಯ ಸುಮಾರಿಗೆ ಸಂತ್ರಸ್ತೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದರು. ಮಕ್ಕಳು ಹಾಗೂ ಪತಿಯ ಸ್ನೇಹಿತನ ಜತೆಗೆ ಮನೆಯಲ್ಲಿ ಇದ್ದರು. ಅದೇ ಸಂದರ್ಭದಲ್ಲಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಏಳು ಮಂದಿ ಆರೋಪಿಗಳು, ತಾವು ಪೀಣ್ಯ ಠಾಣೆ ಪೊಲೀಸರ ಬಾತ್ಮೀದಾರರು ಎಂದು ಸಂತ್ರಸ್ತೆಯ ಬಳಿ ಹೇಳಿಕೊಂಡಿದ್ದರು. ಈ ಮನೆಯಲ್ಲಿ ವೇಶ್ಯಾವಾಟಿಕೆ ಹಾಗೂ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂಬುದಾಗಿ ಬೆದರಿಸಿದ್ದರು ಎಂದು ಮೂಲಗಳು ಹೇಳಿವೆ.

ಬ್ಯಾಟ್‌ನಿಂದ ಹಲ್ಲೆ: ಬಾಡಿಗೆ ಮನೆಯಲ್ಲಿ ಡ್ರಗ್ಸ್ ದಂಧೆ ಹಾಗೂ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಿರಲು ₹1 ಲಕ್ಷ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ನಂತರ, ಕ್ರಿಕೆಟ್ ಬ್ಯಾಟ್​ನಿಂದ ಹಲ್ಲೆ ‌ನಡೆಸಿದ್ದರು. ಸಂತ್ರಸ್ತೆಯ ಮಗ ಹಾಗೂ ಪತಿಯ ಸ್ನೇಹಿತನಿಗೆ ಹೊಡೆದು ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಬಳಿಕ ಪಕ್ಕದ ಮನೆಯೊಂದಕ್ಕೆ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ನಗದು, ಮೊಬೈಲ್‌ ದೋಚಿ ಪರಾರಿ: ಕೃತ್ಯ ಎಸಗಿದ ಬಳಿಕ ಆರೋಪಿಗಳು ಮನೆಯಲ್ಲಿದ್ದ ₹25 ಸಾವಿರ ನಗದು ಹಾಗೂ ಎರಡು ಮೊಬೈಲ್ ದೋಚಿ ಪರಾರಿ ಆಗಿದ್ದರು. ಸಂತ್ರಸ್ತೆ ಪುತ್ರ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಆರೋಪಿಗಳು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ಸಂತ್ರಸ್ತೆ ಹಾಗೂ ಹಲ್ಲೆಗೊಳಗಾಗಿದ್ದ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರು ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಗಳ ವಿರುದ್ಧ ಡಕಾಯಿತಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ

‘ನೆಲಮಂಗಲ ಡಿವೈಎಸ್‌ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಸಂತ್ರಸ್ತೆಗೆ ಫೋಟೊ ತೋರಿಸಿದಾಗ ಆರೋಪಿಗಳ ಹೆಸರು ಹೇಳುತ್ತಿದ್ದಾರೆ. ಅವರಿಗೆ ಪರಿಚಯ ಇದ್ದವರೇ ಕೃತ್ಯ ಎಸಗಿರುವಂತೆ ಕಂಡುಬರುತ್ತಿದೆ. ತನಿಖೆಯ ಬಳಿಕ ಆರೋಪಿಗಳ ಹಿನ್ನೆಲೆ ಗೊತ್ತಾಗಲಿದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.