ಬೆಂಗಳೂರು: ನಗರ ಬೆಳೆಯುತ್ತಲೇ ಇದೆ. ಜನಸಂಖ್ಯೆ ಬೆಳವಣಿಗೆಯ ಜೊತೆಗೆ ವಾಹನಗಳ ಸಂಖ್ಯೆಯೂ ಲಂಗುಲಗಾಮಿಲ್ಲದೆ ಹೆಚ್ಚುತ್ತಿದೆ. ನಗರ ಭೂಸಾರಿಗೆ ನಿರ್ದೇಶನಾಲಯದ (ಡಲ್ಟ್) ಅಂಕಿ ಅಂಶಗಳ ಪ್ರಕಾರ, ಪ್ರಸ್ತುತ ನಗರದಲ್ಲಿ ವಾಹನಗಳ ಸಂಖ್ಯೆ 86.6 ಲಕ್ಷ. ಅಂದರೆ, ಪ್ರತಿ ಇಬ್ಬರು ವ್ಯಕ್ತಿಗಳಿಗೆ ಒಂದು ವಾಹನವಿದೆ. ಇಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಅನುಗುಣವಾಗಿ ಅವುಗಳ ನಿಲುಗಡೆಗೆ ಅಗತ್ಯ ಇರುವ ಸೌಕರ್ಯಗಳು ಬೆಳೆದಿವೆಯೇ? ಖಂಡಿತಾ ಇಲ್ಲ.
ನಗರದಲ್ಲಿ ವಾಹನಗಳ ಸಂಖ್ಯೆ 40 ಲಕ್ಷ ತಲುಪಲು 1950ರಿಂದ ಬರೋಬ್ಬರಿ 62 ವರ್ಷಗಳು ಬೇಕಾದವು. ಆದರೆ, ಆ ಬಳಿಕ ಏಳೇ ವರ್ಷಗಳಲ್ಲಿ ವಾಹನಗಳ ಸಂಖ್ಯೆ ದುಪ್ಪಟ್ಟಾಯಿತು. ಅವುಗಳ ನಿಲುಗಡೆಗೆ ಅಗತ್ಯ ಇರುವ ಜಾಗ ಈ ಹಿಂದಿಗಿಂತಲೂ ಈಗ ಕಡಿಮೆಯಾಗಿದೆ. ಹೊಸ ಮನೆಗಳನ್ನು ನಿರ್ಮಿಸುವವರಿಗೆ ವಾಹನ ನಿಲುಗಡೆ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ. ಬಾಡಿಗೆಗೆ ಕೊಡಲೆಂದೇ ಕಟ್ಟಡ ಕಟ್ಟುವವರು ಆ ಕಟ್ಟಡದಲ್ಲಿರುವ ಮನೆಗಳ ಸಂಖ್ಯೆಗೆ ಅನುಗುಣವಾಗಿ ಕಾರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಅದಕ್ಕೆಂದೇ ಬಿಬಿಎಂಪಿ ನಿರ್ಮಿಸಿದ ರಸ್ತೆ ಇದೆಯಲ್ಲಾ!
ದೇಶದ ನಗರಗಳಲ್ಲೇ ವಾಹನಗಳ ಸಂಖ್ಯೆ ಹೆಚ್ಚಳ ದರ ಜಾಸ್ತಿ ಇರುವುದು ಬೆಂಗಳೂರಿನಲ್ಲೇ. ಇಲ್ಲಿ ವಾಹನಗಳ ಸಂಖ್ಯೆ ಶೇ 15ರ ದರದಲ್ಲಿ ಹೆಚ್ಚಳ ಕಾಣುತ್ತಿದೆ. ಈಗ ನಗರದಲ್ಲಿರುವ ಶೇ 50ರಷ್ಟು ವಾಹನಗಳಿಗೆ ನೆಲದಲ್ಲೇ ಪಾರ್ಕಿಂಗ್ ವ್ಯವಸ್ಥೆ ಒದಗಿಸುವುದಾದರೆ 13 ಸಾವಿರ ಎಕರೆಗಳಷ್ಟು ಜಾಗದ ಅಗತ್ಯವಿದೆ ಎಂದು ಡಲ್ಟ್ ಅಂದಾಜಿಸಿದೆ. ವಾಹನ ಹೆಚ್ಚಳದ ಪ್ರಮಾಣ ಇದೇ ರೀತಿ ಮುಂದುವರಿದರೆ ಇನ್ನು 10 ವರ್ಷಗಳಲ್ಲಿ ಈಗಿನದಕ್ಕಿಂತ ನಾಲ್ಕು ಪಟ್ಟು ಹೆಚ್ಚು ವಾಹನಗಳು ನಗರವನ್ನು ಆಕ್ರಮಿಸಿಕೊಳ್ಳಲಿವೆ. ಈಗೇನೋ ಬಿಬಿಎಂಪಿ ರಸ್ತೆಗಳಲ್ಲಿ, ಖಾಲಿ ಜಾಗ ಸಿಕ್ಕಲ್ಲೆಲ್ಲಾ ವಾಹನ ನಿಲ್ಲಿಸಲಾಗುತ್ತಿದೆ. ಇನ್ನು 10 ವರ್ಷಗಳ ಬಳಿಕದ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ.
ಈಗಲೂ 30 ಅಡಿಗಳಿಗಿಂತ ಕಿರಿದಾದ ರಸ್ತೆಗಳಲ್ಲಿ ಇಕ್ಕೆಲಗಳಲ್ಲೂ ನಿಲ್ಲಿಸಿರುವ ವಾಹನಗಳ ನಡುವೆ ಕಾರು ನುಸುಳಿ ಮುಂದಕ್ಕೆ ಸಾಗಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಪ್ರಮುಖ ರಸ್ತೆಗಳಲ್ಲಿ ಪದೇ ಪದೇ ಉಂಟಾಗುವ ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ಚರ್ಚಿಸುತ್ತಿರುವ ಜನ ಇನ್ನು 10 ವರ್ಷಗಳ ಬಳಿಕ ನಿಲ್ಲಿಸಿದ್ದ ಕಾರನ್ನು ರಸ್ತೆಗೆ ತರಲಾಗದೇ ಪರದಾಡುವ ಬಗ್ಗೆಯೇ ಚರ್ಚಿಸಬೇಕಾಗಿ ಬರಬಹುದು.
ಇನ್ನೊಂದೆಡೆ, ಮನೆ ಮುಂದಿನ ರಸ್ತೆಗಳ ಜೊತೆಗೆ ನಗರದ ಪ್ರಮುಖ ಸಂಚಾರ ಮಾರ್ಗಗಳಲ್ಲೂ ಅಸ್ತವ್ಯಸ್ತವಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ವಾಣಿಜ್ಯ ಉದ್ದೇಶದ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಅಥವಾ ತಳ ಮಹಡಿಯನ್ನು ವಾಹನ ನಿಲುಗಡೆಗೆ ಮೀಸಲಿಡಬೇಕು ಎಂಬ ನಿಯಮವೇನೋ ಜಾರಿಯಲ್ಲಿದೆ. ಆದರೆ, ಅದರ ಪಾಲನೆ ಮರೀಚಿಕೆಯಾಗಿಯೇ ಉಳಿದಿದೆ.
ವಾಹನಗಳ ವ್ಯೂಹದಲ್ಲಿ ಸಿಲುಕಿ ನಗರದ ಜನರ ಬದುಕು ಸಿಕ್ಕುಗಟ್ಟಿದೆ. ಈ ಸಿಕ್ಕುಗಳನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ಎಂಬುದು ಯಕ್ಷ ಪ್ರಶ್ನೆ. ನಗರದ ವಾಹನಗಳ ಸಂಖ್ಯೆ ಹೆಚ್ಚಳದ ನಾಗಾಲೋಟಕ್ಕೆ ಕಡಿವಾಣ ಹಾಕಲು ಹಾಗೂ ಅವುಗಳ ನಿಲುಗಡೆಯ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲೆಂದೇ ಡಲ್ಟ್ ‘ವಾಹನ ನಿಲುಗಡೆ ನೀತಿ–2.0’ ರೂಪಿಸಿದೆ. ಈ ನೀತಿಯ ಕರಡನ್ನು ಡಲ್ಟ್ 2020ರ ಮಾರ್ಚ್‌ನಲ್ಲಿ ಸಾರ್ವಜನಿಕರ ಮುಂದಿಟ್ಟಿತ್ತು. ಇದಕ್ಕೆ ಸರ್ಕಾರೇತರ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಗಳು (ಆರ್‌ಡಬ್ಲ್ಯುಎ) ಹಾಗೂ ನಾಗರಿಕರಿಂದ 360 ಸಲಹೆಗಳು ಬಂದಿದ್ದವು. ಇವುಗಳನ್ನು ಪರಿಗಣಿಸಿದ ಡಲ್ಟ್ ಪಾರ್ಕಿಂಗ್ ನೀತಿಗೆ ಅಂತಿಮ ರೂಪ ನೀಡಿ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಿದೆ.ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ, ಸಾರ್ವಜನಿಕ ವಾಹನ ಬಳಕೆಗೆ ಉತ್ತೇಜನ ನೀಡುವ ಆಶಯ ಈ ಪಾರ್ಕಿಂಗ್ ನೀತಿಯದು. ಈ ನೀತಿ ಯಾವಾಗ ಜಾರಿಗೆ ಬರಲಿದೆ. ವಾಹನಗಳು ಆಯಕಟ್ಟಿನ ಜಾಗಗಳ ಇಕ್ಕಟ್ಟಿನ ರಸ್ತೆಗಳನ್ನೆಲ್ಲಾ ಝಂಡಾ ಊರುವುದರಿಂದ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟುಗಳು ಇದರಿಂದ ಬಗೆಹರಿಯಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪಾರ್ಕಿಂಗ್ ನೀತಿಯಲ್ಲೇನಿದೆ?
ಪ್ರತಿ ವಲಯಕ್ಕೆ ಪ್ರತ್ಯೇಕ ಪಾರ್ಕಿಂಗ್ ಯೋಜನೆ ರೂಪಿಸಲಾಗುತ್ತದೆ, ಇದರ ಅನುಷ್ಠಾನಕ್ಕೆ ಬಿಬಿಎಂಪಿಯ ಪ್ರತಿ ವಲಯಕ್ಕೊಂದು ಕಾರ್ಯಪಡೆಯನ್ನು ಹೊಂದಲಾಗುತ್ತದೆ.
ಮನೆ ಮುಂದಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದಕ್ಕೆ ನಿಗದಿತ ಶುಲ್ಕ ಪಾವತಿಸಿ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಹೊಸ ವಾಹನ ಖರೀದಿಗೆ ಮುನ್ನ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಹೊಂದಿರುವುದನ್ನು ಖಾತರಿ ಪಡಿಸುವುದು ಮುಂತಾದ ಪ್ರಮುಖ ಅಂಶಗಳನ್ನು ನೀತಿ ಒಳಗೊಂಡಿದೆ.
ಕಾರ್ಯಪಡೆಯ ಕಾರ್ಯವೇನು?
ಪ್ರದೇಶವಾರು ಪಾರ್ಕಿಂಗ್ ಬೇಡಿಕೆಗಳನ್ನು ಆಧರಿಸಿ, ಲಭ್ಯ ಸಂಪನ್ಮೂಲ ಬಳಸಿ ವಾಹನ ನಿಲುಗಡೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ವ್ಯವಸ್ಥೆ ರೂಪಿಸಿ ಜಾರಿಗೊಳಿಸುವ ಹೊಣೆ ವಲಯ ಕಾರ್ಯಪಡೆಗಳದು. ಪಾಲಿಕೆಯ ವಲಯ ಆಯುಕ್ತರು ಈ ಕಾರ್ಯಪಡೆಯ ಮುಖ್ಯಸ್ಥರು. ಆಯಾ ವಲಯದ ಸಂಚಾರ ಪೊಲೀಸ್ ಇಲಾಖೆಯ ಡಿಸಿಪಿ ಅಥವಾ ಎಸಿಪಿ ದರ್ಜೆಯ ಅಧಿಕಾರಿ ಮತ್ತು ಸಾರಿಗೆ ಇಲಾಖೆ ಅಧಿಕಾರಿ (ಆರ್‌ಟಿಒ/ ಎಆರ್‌ಟಿಒ)ಸದಸ್ಯರಾಗಿರುತ್ತಾರೆ. ಪಾರ್ಕಿಂಗ್ ವ್ಯವಸ್ಥೆಯನ್ನು ಆಗಾಗ ಪರಿಶೀಲಿಸಿ ಸೂಕ್ತ ಮಾರ್ಪಾಡುಗಳನ್ನು ಮಾಡುವ ಜವಾಬ್ದಾರಿಯೂ ಕಾರ್ಯಪಡೆಯದ್ದು. ಪ್ರತಿ 4 ಚ.ಕಿ.ಮೀ ಪ್ರದೇಶಕ್ಕೊಂದು ಪಾರ್ಕಿಂಗ್ ವಲಯ ಗುರುತಿಸಲಾಗುತ್ತದೆ.
ಉನ್ನತ ಸಮಿತಿ: ನಗರದ ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಯೋಜನೆ ರೂಪಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗತ್ತದೆ. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಸಂಚಾರ ಪೊಲೀಸ್ ಇಲಾಖೆ ಹೆಚ್ಚುವರಿ ಕಮಿಷನರ್ ಇದರಲ್ಲಿರುತ್ತಾರೆ. ಡಲ್ಟ್ ಆಯುಕ್ತರು ಈ ಸಮಿತಿಯ ಸಂಚಾಲಕ ಸದಸ್ಯ. ಪಾರ್ಕಿಂಗ್ ಶುಲ್ಕ ಪರಿಷ್ಕರಣೆ, ಸೇವೆ ನೀಡುವ ಏಜೆನ್ಸಿಗಳ ಜೊತೆ ಸಮನ್ವಯ ಈ ಸಮಿತಿಯ ಹೊಣೆ.
ಉನ್ನತ ಸಮಿತಿಯು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಅಥವಾ ಏಕೀಕೃತ ಮಹಾನಗರ ಸಾರಿಗೆ ಪ್ರಾಧಿಕಾರ (ಯುಎಂಟಿಎ) ರಚನೆಯಾಗುವವರೆಗೆ ಮಾತ್ರ ಉನ್ನತ ಸಮಿತಿ ಅಸ್ತಿತ್ವದಲ್ಲಿರಲಿದೆ. ನಂತರ ಆ ಪ್ರಾಧಿಕಾರವೇ ಉನ್ನತ ಸಮಿತಿಯ ಜವಾಬ್ದಾರಿ ನಿಭಾಯಿಸಲಿದೆ.
ಪಾರ್ಕಿಂಗ್ ನೀತಿಯ ಧ್ಯೇಯೋದ್ದೇಶಗಳು
* ಅಸ್ತವ್ಯಸ್ತ ಪಾರ್ಕಿಂಗ್ ಬದಲು ವಾಹನಗಳನ್ನು ಅಚ್ಚುಕಟ್ಟಾಗಿ ನಿಲುಗಡೆ ಮಾಡುವ ವ್ಯವಸ್ಥೆ ರೂಪಿಸುವುದು
* ವಾಹನಗಳನ್ನು ಎಲ್ಲೆಂದರಲ್ಲಿ ಉಚಿತವಾಗಿ ನಿಲ್ಲಿಸುವ ಪ್ರವೃತ್ತಿಗೆ ಕಡಿವಾಣ ಹಾಕಿ, ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆಯನ್ನು ಉತ್ತೇಜಿಸುವುದು
* ಪಾರ್ಕಿಂಗ್ ತಾಣಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪಿಪಿಪಿ/ ಖಾಸಗಿ ಸಹಭಾಗಿತ್ವ ಉತ್ತೇಜಿಸುವುದು
* ಪಾರ್ಕಿಂಗ್ ನಿಯಮಗಳ ಸಕ್ರಿಯ ನಿರ್ವಹಣೆ
ಮತ ಚಿಂತೆ– ನೀತಿ ಸಡಿಲ?
‘ಮನೆ ಮುಂದಿನ ರಸ್ತೆಯಲ್ಲಿ ವಾಹನ ನಿಲ್ಲಿಸುವುದಕ್ಕೆ ಶುಲ್ಕ ವಿಧಿಸುವುದು, ಮನೆಯಲ್ಲಿ ಜಾಗ ಇಲ್ಲದವರು ವಾಹನ ಖರೀದಿಸುವುದನ್ನು ನಿರ್ಬಂಧಿಸುವಂತಹ ಅಂಶಗಳು ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಹೊಡೆತ ನೀಡಬಹುದು ಎಂಬ ಆತಂಕ ಸರ್ಕಾರಕ್ಕಿದೆ. ಹಾಗಾಗಿ ಈ ನಿಬಂಧನೆಗಳನ್ನು ಸಡಿಲಗೊಳಿಸಲು ಸರ್ಕಾರ ಮುಂದಾಗಿದೆ’ ಎಂಬ ಆರೋಪ ಕೇಳಿಬಂದಿದೆ.
‘ಈಗಿನ ನೀತಿಯನ್ನು ಸಡಿಲಗೊಳಿಸಿದ್ದೇ ಆದರೆ, ಡಲ್ಟ್ ಸುಮಾರು ಒಂದು ವರ್ಷ ಕಸರತ್ತು ನಡೆಸಿ ರೂಪಿಸಿದ ನೀತಿಯ ಪ್ರಮುಖ ಆಶಯವೇ ಈಡೇರದು’ ಎನ್ನುತ್ತಾರೆ ನಗರದ ಸಾರಿಗೆ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿರುವ ಸಾಮಾಜಿಕ ಕಾರ್ಯಕರ್ತರು.
**
‘ಸುಸ್ಥಿರ ನಗರ ರೂಪಿಸುವತ್ತ ದಿಟ್ಟ ಹೆಜ್ಜೆ’
ಬೆಂಗಳೂರು ನಗರವು ದೇಶದಲ್ಲಿ ಇತರ ನಗರಗಳಿಗಿಂತ ಅತಿ ಹೆಚ್ಚು ನೋಂದಾಯಿತ ವಾಹನಗಳನ್ನು ಹೊಂದಿರುವ ಅಪಖ್ಯಾತಿ ಹೊಂದಿದೆ. ಈಗಾಗಲೇ ಸುಮಾರು 86 ಲಕ್ಷ ವಾಹನಗಳಿವೆ. ಆದರೆ ಅಷ್ಟೇ ಪ್ರಮಾಣದಲ್ಲಿ ರಸ್ತೆಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ. ಇಷ್ಟು ವಾಹನಗಳು ಇದ್ದರೂ, ಇವುಗಳಲ್ಲಿ ಸರಾಸರಿ ಶೇ 95ರಷ್ಟು ಹೊತ್ತು ನಿಂತೇ ಇರುತ್ತವೆ. ಅವು ನಿಲ್ಲುವುದು ಸಾರ್ವಜನಿಕ ಸ್ಥಳಗಳಲ್ಲಿ. ಹಾಗಾಗಿ ಇದೊಂದು ಸಾಮಾಜಿಕ ಸಮಸ್ಯೆ.
ನಗರಗಳ ಸುಸ್ಥಿರ ಅಭಿವೃದ್ಧಿಗೆ ಹಲಬಗೆಯ ನೀತಿಗಳನ್ನು ಮತ್ತು ಅವುಗಳಿಗೆ ತಕ್ಕ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಬೇಕು. ವಾಹನ ದಟ್ಟಣೆ ನಿರ್ವಹಣೆಗೆ ರಸ್ತೆ ವಿಸ್ತರಣೆ ಹಾಗೂ ಮೆಲ್ಸೇತುವೆ/ಕೆಳಸೇತುವೆಗಳನ್ನು ನಿರ್ಮಿಸುವುದೇನಿದ್ದರೂ ಅಲ್ಪಕಾಲದ ಪರಿಹಾರ. ದೀರ್ಘಕಾಲದ ಪರಿಹಾರಕ್ಕೆ ಇನ್ನೂ ಹೆಚ್ಚು ರಸ್ತೆ ಕಲ್ಪಿಸುವ ಬದಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಬೇಕಿದೆ. ಸ್ವಂತ ವಾಹನ ಬಳಕೆ ನಿಯಂತ್ರಿಸುವ ನೀತಿ ಅನಿವಾರ್ಯ.
ಈ ನಿಟ್ಟಿನಲ್ಲಿ ಹೊಸ ಪಾರ್ಕಿಂಗ್ ನೀತಿ 2.0 ಸುಸ್ಥಿರವಾದ ನಗರ ರೂಪಿಸಲು ದಿಟ್ಟ ಹೆಜ್ಜೆಯಾಗಿದೆ. ಇದರ ಮೊದಲ ಆವೃತ್ತಿ 2012ರಲ್ಲಿ ಸರ್ಕಾರದಿಂದ ಅನುಮೋದನೆ ಪಡೆದಿತ್ತು. ಇದಕ್ಕೆ ಪೂರಕವಾದ ಕೆಲಸ 2009-10 ಅಲ್ಲಿಯೇ ಪ್ರಾರಂಭವಾಗಿತ್ತು. ಆಡಳಿತ ವಲಯಗಳಲ್ಲಿ ಇದಕ್ಕೆ ಬೇಗ ಮನ್ನಣೆ ಸಿಕ್ಕಿದರೂ ರಾಜಕೀಯವಾಗಿ ಇಚ್ಛಾಶಕ್ತಿಯ ಬಲ ಸಿಗಲಿಲ್ಲ. ಅಲ್ಪಾವಧಿ ರಾಜಕೀಯ ಲಾಭಗಳನ್ನು ಬದಿಗಿಟ್ಟು ದೀರ್ಘಕಾಲದ ದೃಷ್ಟಿಯಿಂದ ಈ ಪಾರ್ಕಿಂಗ್ ನೀತಿಗೆ ರಾಜ್ಯ ಸರ್ಕಾರವು ಅನುಮೋದನೆ ನೀಡಿ ಅದರ ಅನುಷ್ಠಾನಕ್ಕೆ ಸೂಕ್ತ ಕ್ರಮಗೊಳ್ಳ ಬೇಕು.
–ಡಾ. ಸುಧೀರ ಎಚ್.ಎಸ್ ನಿರ್ದೇಶಕ, ಗುಬ್ಬಿ ಲ್ಯಾಬ್ಸ್
**
‘ಕಾರ್ಯಪಡೆಯಲ್ಲಿ ಜನರ ಸಹಭಾಗಿತ್ವ ಇರಲಿ’
ರಸ್ತೆಗಳ ಬದಲು ರಸ್ತೆಯೇತರ ಜಾಗಗಳಲ್ಲಿ ವಾಹನ ನಿಲುಗಡೆಗೆ ಉತ್ತೇಜನ ನೀಡುವ ನಿಲುವು ಸ್ವಾಗತಾರ್ಹ. ಇದರಿಂದ ವಾಹನಗಳಿಗೆ, ಸೈಕಲ್ ಸವಾರರಿಗೆ, ಬೀದಿ ವ್ಯಾಪಾರಿಗಳಿಗೂ ಸ್ಥಳಾವಕಾಶ ಕಲ್ಪಿಸುವುದು ಸುಲಭವಾಗಲಿದೆ. ಖಾಸಗಿ ವಾಹನ ಬಳಕೆ ಕಡಿವಾಣ ಹಾಕುವ ಉದ್ದೇಶ ಒಳ್ಳೆಯದು. ದುಬಾರಿ ಶುಲ್ಕ ವಿಧಿಸುವ ಕ್ರಮಗಳು ಪರಿಣಾಮ ಬೀರಲಿವೆ. ಆದರೆ, ದ್ವಿಚಕ್ರ ವಾಹನಗಳಿಗೆ ಶುಲ್ಕದಲ್ಲಿ ಸ್ವಲ್ಪ ರಿಯಾಯಿತಿ ತೋರಿಸಬಹುದು.
ಪ್ರದೇಶವಾರು ಪಾರ್ಕಿಂಗ್ ಕಾರ್ಯಪಡೆ ರಚಿಸುವಾಗ ಜನರ ಸಹಭಾಗಿತ್ವಕ್ಕೂ ಅವಕಾಶ ಸಿಗಬೇಕು. ಅದರಲ್ಲಿ ಬೀದಿ ವ್ಯಾಪಾರಿಗಳಿಗೂ ಅವಕಾಶ ಮಾಡಿಕೊಡಬೇಕು.
ಈ ಹಿಂದೆಯೂ ಪಾರ್ಕಿಂಗ್ ನೀತಿ ರೂಪಿಸಲಾಗಿತ್ತಾದರೂ ಚುನಾವಣೆಯಲ್ಲಿ ಹಿನ್ನಡೆಯಾಗುವ ಭಯದಿಂದಾಗಿ ರಾಜಕಾರಣಿಗಳು ಅವುಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಿಲ್ಲ. ಬಸ್ ನಿಲ್ಲಿಸುವುದಕ್ಕೂ ಜಾಗದ ಕೊರತೆ ಇದೆ. ಬೆಂಗಳೂರಿನಲ್ಲಿ 6 ಸಾವಿರ ಬಸ್‌ಗಳಷ್ಟೇ ಇವೆ. ಅವುಗಳ ಸಂಖ್ಯೆ ಕನಿಷ್ಠಪಕ್ಷ 10 ಸಾವಿರಕ್ಕಾದರೂ ಹೆಚ್ಚಿಸಬೇಕು. ಆಗ ಜನ ಸಹಜವಾಗಿಯೇ ಸಾರ್ವಜನಿಕ ಸಾರಿಗೆಯತ್ತ ಒಲವು ಬೆಳೆಸಿಕೊಳ್ಳಲಿದ್ದಾರೆ. ಬಸ್ ನಿಲುಗಡೆಗೆ ಹೆಚ್ಚಿನ ಸ್ಥಳ ಮೀಸಲಿಡುವ ಬಗ್ಗೆ ನೀತಿಯಲ್ಲಿ ಉಲ್ಲೇಖಿಸುವ ಅಗತ್ಯವಿದೆ.
–ವಿನಯ ಶ್ರೀನಿವಾಸ್, ಬಸ್ ಪ್ರಯಾಣಿಕರ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.