ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆ ನವರಂಗ ವೃತ್ತದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದೆ
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ರಾಜಾಜಿನಗರದ ನವರಂಗ ವೃತ್ತದಿಂದ ಒರಾಯನ್ ಮಾಲ್‌ವರೆಗಿನ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿದ್ದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅಗೆಯಲಾಗಿದೆ. ವಿವಿಧ ಜಿಲ್ಲೆಗಳಿಂದ ರಾಜಧಾನಿಗೆ ಪ್ರವೇಶಿಸುವ ವಾಹನಗಳು ಮೆಜೆಸ್ಟಿಕ್‌ಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಬೆಳಗಿನ ಜಾವ ಹಾಗೂ ರಾತ್ರಿ ಸಮಯದಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ. ರಸ್ತೆಯನ್ನು ಅಗೆದು ಹಾಕಿ ತಿಂಗಳು ಕಳೆದರೂ ಮುಚ್ಚಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಸಂಚಕಾರ ಬಂದಿದೆ.
ಈ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಆರಂಭವಾಗಿದೆ. ಇದಕ್ಕಾಗಿ ಬೆಸ್ಕಾಂನವರು ಭೂಗತ ಕೇಬಲ್ ಹಾಗೂ ಜಲಮಂಡಳಿಯವರು ಕೊಳವೆಗಳನ್ನು ಅಳವಡಿಸಲು ಒಂದು ಬದಿಯ ಪಾದಚಾರಿ ಮಾರ್ಗಗಳಲ್ಲಿ ಚರಂಡಿ ಮೇಲಿನ ಕಾಂಕ್ರೀಟ್ ಸ್ಲ್ಯಾಬ್‌ಗಳು ಹಾಗೂ ಪೇವರ್ಸ್‌ಗಳನ್ನು ತೆಗೆದಿದ್ದಾರೆ. ಕೆಲವು ಕಡೆ ಗುಂಡಿಗಳನ್ನು ತೆಗೆಯಲಾಗಿದೆ. ಗುಂಡಿ ಹಾಗೂ ಸ್ಲ್ಯಾಬ್‌ಗಳನ್ನು ತೆಗೆದಿರುವ ಜಾಗದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.
ಈ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನು ಲೆಕ್ಕಿಸದ ದ್ವಿಚಕ್ರ ವಾಹನ ಸವಾರರು, ಆಟೊ ಚಾಲಕರು ಇದೇ ರಸ್ತೆಯಲ್ಲಿ ಬರುತ್ತಾರೆ. ಸಂಚಾರ ದಟ್ಟಣೆಗೆ ಇದೇ ಮುಖ್ಯ ಕಾರಣ. ಬೆಳಿಗ್ಗೆ 4ರಿಂದ ಮಧ್ಯಾಹ್ನ 10 ಗಂಟೆ ಹಾಗೂ ಸಂಜೆ 5 ರಿಂದ ರಾತ್ರಿ 11 ಗಂಟೆಯ ಅವಧಿಯೊಳಗೆ ಈ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ ಎಂದು ಸಾರ್ವಜನಿಕರು ದೂರಿದರು.
‘ಕೆಲವು ಒಳ ರಸ್ತೆಗಳಿಂದ ಈ ರಸ್ತೆಯನ್ನು ಸಂಪರ್ಕಿಸುವ ಜಾಗದಲ್ಲಿ ಅಗೆದಿರುವುದರಿಂದ ಅಲ್ಲೆಲ್ಲ ವಾಹನಗಳು ಸುತ್ತಿಬಳಸಿ ಹೋಗಬೇಕಿದೆ. ಪ್ರಕಾಶನಗರ, ಗಾಯತ್ರಿನಗರ, ಸುಬ್ರಹ್ಮಣ್ಯ ನಗರದ ಜನರು ದೂಳಿನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗಿದೆ. ಪಾದಚಾರಿ ಮಾರ್ಗವನ್ನು ಅಗೆದು ಚರಂಡಿ ಕಾಮಗಾರಿ ಕೈಗೊಂಡಿದ್ದು, ಅಂಗಡಿಗೆ ಹೋಗಲು ಯಾವುದೇ ರೀತಿಯ ವ್ಯವಸ್ಥೆ ಮಾಡಿಲ್ಲ. ಇದರಿಂದ ಗ್ರಾಹಕರೇ ಬರುತ್ತಿಲ್ಲ. ವ್ಯಾಪಾರ–ವಹಿವಾಟಿಗೆ ಧಕ್ಕೆಯಾಗಿದೆ’ ಎಂದು ಸ್ಥಳೀಯ ಹೋಟೆಲ್, ಕಾಂಡಿಮೆಂಟ್ಸ್‌ನ ವ್ಯಾಪಾರಿಗಳು ಅಳಲು ತೋಡಿಕೊಂಡರು.
‘ಅಭಿವೃದ್ಧಿ ಹೆಸರಿನಲ್ಲಿ ಚೆನ್ನಾಗಿರುವ ರಸ್ತೆಯನ್ನು ಅಗೆದು ಹಾಕಿದ್ದಾರೆ. ಪ್ರಭಾವಿಗಳಿಗೆ ನೀರು ಒದಗಿಸಲು ಇರುವ ರಸ್ತೆಯನ್ನು ಅಗೆದು ಹಾಳು ಮಾಡಿದ್ದಾರೆ. ಒಂದು ತಿಂಗಳಿಗೂ ಅಧಿಕ ಸಮಯದಿಂದ ದೂಳು ತಿನ್ನುತ್ತಿದ್ದೇವೆ. ಅಂಗಡಿ, ಹೋಟೆಲ್, ಬೇಕರಿಗಳಿಗೆ ಹೋಗುವಂತಿಲ್ಲ. ಎಲ್ಲ ಕಡೆ ದೂಳು ತುಂಬಿದೆ. ಈಗ ಮಳೆ ಬರುತ್ತಿರುವುದರಿಂದ ದೂಳು ಕಡಿಮೆಯಾಗಿದೆ. ಆದರೆ, ಮಳೆ ಹೆಚ್ಚಾದರೆ ಕೆಸರಲ್ಲಿ ಕಾಲು ಇಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ದೂರಿದರು.
‘ಡಾ. ರಾಜ್‌ಕುಮಾರ್ ರಸ್ತೆಯ ನವರಂಗ ವೃತ್ತದಿಂದ ಒರಾಯನ್ ಮಾಲ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ ಒಳ ಚರಂಡಿ, ವಿದ್ಯುತ್ ಕೇಬಲ್ ಅಳವಡಿಕೆ, ಯುಟಿಲಿಟಿ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇದು ಮುಗಿದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತದೆ’ ಎಂದು ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ತಿಳಿಸಿದರು.
ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆ ನವರಂಗ ವೃತ್ತದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಾಗಿ ಪಾದಚಾರಿ ಮಾರ್ಗ ಅಗೆದು ಹಾಕಲಾಗಿದೆ. ವ್ಯಕ್ತಿಯೊಬ್ಬರು ತಮ್ಮ ಮಗನನ್ನು ಎತ್ತಿಕೊಂಡು ಚರಂಡಿಯನ್ನು ದಾಟಿಸಿದರು
ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಪೈಪ್‌ಗಳನ್ನು ಇಡಲಾಗಿದೆ
ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಈ ಮಾರ್ಗದ ಮೂಲಕವೇ ಬಸ್‌ಗಳು ಸಂಚರಿಸುತ್ತವೆ. ಒಂದು ತಿಂಗಳ ಹಿಂದೆ ರಸ್ತೆ ಅಗೆದು ಹಾಕಿರುವ ಪರಿಣಾಮ ಬಸ್‌ಗಳು ಬದಲಿ ಮಾರ್ಗದ ಮೂಲಕ ಸಂಚರಿಸುತ್ತಿವೆ. ಇದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ನಾಲ್ಕು ಜನ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಈಗ ನಾನು ಒಬ್ಬನೇ ಕೆಲಸ ಮಾಡುತ್ತಿದ್ದೇನೆ. ಅಂಗಡಿ ಬಾಡಿಗೆ ಕಟ್ಟುವುದಕ್ಕೂ ಸಾಧ್ಯವಾಗುತ್ತಿಲ್ಲ.
- ಚೇತನ್, ಕಾಂಡಿಮೆಂಟ್ಸ್ ಮಾಲೀಕರು
ಡಾ. ರಾಜ್‌ಕುಮಾರ್ ರಸ್ತೆಯನ್ನು ಅಗೆದು ಹಾಕಿರುವ ಪರಿಣಾಮ ಇಡೀ ಪ್ರದೇಶವೆಲ್ಲ ದೂಳುಮಯವಾಗಿದೆ. ಇದರಿಂದ ಗ್ರಾಹಕರು ನಮ್ಮ ಹೋಟೆಲ್‌ಗೆ ಬರುತ್ತಿಲ್ಲ. ಹೋಟೆಲ್‌ಗೆ ಹಾಕಿರುವ ಬಂಡವಾಳವೂ ಬರುತ್ತಿಲ್ಲ. ಆದಾಯವೂ ಇಲ್ಲದೇ ನಮ್ಮ ಸ್ಥಿತಿ ಅತಂತ್ರವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಗೆ ವೇಗ ನೀಡಬೇಕು.
-ನಾಗರಾಜ್, ಹೋಟೆಲ್ ಮಾಲೀಕರು
ಒಂದು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಹಾಕಲಾಗಿದೆ. ಈ ಭಾಗದಲ್ಲಿರುವ ಹೋಟೆಲ್ ಬೇಕರಿಗಳಿಗೆ ಸಾರ್ವಜನಿಕರು ಬರುತ್ತಿಲ್ಲ. ಪಾರ್ಕಿಂಗ್ ಮಾಡಲು ಜಾಗವಿಲ್ಲ. ಎಲ್ಲಿ ನೋಡಿದರೂ ಮಣ್ಣಿನ ರಾಶಿ ಅಗೆದಿರುವ ರಸ್ತೆಯೇ ಕಾಣುತ್ತಿದೆ. ನಮ್ಮ ಹೋಟೆಲ್‌ಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
-ಅರುಣಿ, ಹೋಟೆಲ್ ಮಾಲೀಕರು
ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.
-ದಯಾನಂದ್, ಹೋಟೆಲ್ ಉದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.