ADVERTISEMENT

ಬಿಬಿಎಂಪಿ: ಎಂಜಿನಿಯರಿಂಗ್ ವಿಭಾಗಕ್ಕೆ ಯಾರಾಗಲಿದ್ದಾರೆ ಮುಖ್ಯಸ್ಥ?

ಬಿಬಿಎಂಪಿಯಿಂದ ಮೂವರ ಹೆಸರು ಶಿಫಾರಸು

​ಪ್ರಜಾವಾಣಿ ವಾರ್ತೆ
Published 17 ಮೇ 2022, 21:03 IST
Last Updated 17 ಮೇ 2022, 21:03 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿಯ ಪ್ರಧಾನ ಎಂಜಿನಿಯರ್‌ ಎಸ್‌.ಪ್ರಭಾಕರ್‌ ಅವರು ಈ ವರ್ಷದ ಏಪ್ರಿಲ್‌ನಲ್ಲಿ ವಯೋನಿವೃತ್ತಿ ಹೊಂದಿದ್ದು, ಈ ಹುದ್ದೆ ಖಾಲಿ ಇದೆ. ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರ ಈ ಹುದ್ದೆಗಾಗಿ ಪಾಲಿಕೆಯ ಮೂವರು ಮುಖ್ಯ ಎಂಜಿನಿಯರ್‌ಗಳ ಮಧ್ಯೆ ಪೈಪೋಟಿ ಇದೆ.

ಹುದ್ದೆಗೆ ಅರ್ಹ ವ್ಯಕ್ತಿಯ ನೇಮಕಕ್ಕೆ ನಗರಾಭಿವೃದ್ಧಿ ಇಲಾಖೆಯು ಪ್ರಕ್ರಿಯೆ ಆರಂಭಿಸಿದೆ. ಬಿಬಿಎಂಪಿಯು ಈ ಹುದ್ದೆಗೆ ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್‌ ಪಿ. ವಿಶ್ವನಾಥ್‌, ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ ರಂಗನಾಥ್‌ ಹಾಗೂ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಈ ಮೂವರಲ್ಲಿ ಪ್ರಹ್ಲಾದ್‌ ಅವರ ಹೆಸರನ್ನು ನಗರಾಭಿವೃದ್ಧಿ ಇಲಾಖೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಅವರ ತೀರ್ಮಾನಕ್ಕೆ ಬಿಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

ಈ ಮೂವರಲ್ಲಿ ರಂಗನಾಥ್‌ ಹೆಚ್ಚು ಸೇವಾ ಹಿರಿತನ ಹೊಂದಿದ್ದಾರೆ. ನಗರಸಭೆಯಿಂದ ಬಿಬಿಎಂಪಿಗೆ ಬಂದ ಅವರಿಗೆ ಇನ್ನೂ ಮೂರು ವರ್ಷಗಳ ಸೇವಾವಧಿ ಬಾಕಿ ಇದೆ. ಆದೆ, ಅವರ ವಿರುದ್ಧದ ಕೆಲ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಶಿಫಾರಸುಗೊಂಡ ಇನ್ನಿಬ್ಬರಲ್ಲಿ ಪಿ.ವಿಶ್ವನಾಥ್‌ ಹೆಚ್ಚಿನ ಸೇವಾ ಜ್ಯೇಷ್ಠತೆ ಹೊಂದಿದ್ದಾರೆ. ಅವರು ಎಸಿಬಿ ಅಥವಾ ಇಲಾಖಾ ವಿಚಾರಣೆ ಎದುರಿಸುತ್ತಿಲ್ಲ. ಯಾವುದೇ ಗುರುತರ ಆರೋಪಗಳೂ ಅವರ ಮೇಲಿಲ್ಲ. ಅವರಿಗೆ ಇನ್ನು ಒಂದು ವರ್ಷದ ಸೇವಾ ಅವಧಿ ಮಾತ್ರ ಬಾಕಿ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ADVERTISEMENT

‘ಈ ಹುದ್ದೆಯ ಆಕಾಂಕ್ಷಿಯಾಗಿರುವ ಪ್ರಹ್ಲಾದ್‌ ಅವರಿಗೆ ಇನ್ನೂ 11 ವರ್ಷಗಳ ಸೇವಾವಧಿ ಇದೆ. ವರಮಾನಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದ ಪ್ರಕರಣ ಇವರ ವಿರುದ್ಧ ದಾಖಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಎಸಿಬಿ ಬಿ–ವರದಿ ಸಲ್ಲಿಸಿತ್ತು. ತಮ್ಮ ವಿರುದ್ಧದ ಟಿಡಿಆರ್ ಅಕ್ರಮ ಪ್ರಕರಣವೂ ಸೇರಿ ಕೆಲವು ಪ್ರಕರಣಗಳಿಗೆ ತಡೆಯಾಜ್ಞೆ ಪಡೆದಿದ್ದಾರೆ’ ಎಂದು ಮೂಲಗಳು ಹೇಳಿವೆ.

ಬಿಬಿಎಂಪಿಯ ಈ ಪ್ರಮುಖ ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಕಳೆದ ವಾರ ಇಲಾಖಾ ಬಡ್ತಿ ಸಮಿತಿಯ ಸಭೆಯೂ ನಡೆದಿದೆ. ಎಂಟು ವಲಯಗಳು, ಯೋಜನೆ ಕೇಂದ್ರ, ರಸ್ತೆ ಮೂಲಸೌಕರ್ಯ, ರಾಜಕಾಲುವೆ ಹಾಗೂ ಕೆರೆ ವಿಭಾಗಗಳು ಸೇರಿ ಒಟ್ಟು 12 ಕಾಮಗಾರಿ ವಿಭಾಗಗಳು ಬಿಬಿಎಂಪಿ
ಯಲ್ಲಿವೆ. ಈ ಎಲ್ಲ ವಿಭಾಗಗಳ ಕಾಮಗಾರಿಗಳ ಮಾಹಿತಿಗಳನ್ನು ಪ್ರಧಾನ ಎಂಜಿನಿಯರ್‌ ಅವರ ಕಚೇರಿಯು ತಾಂತ್ರಿಕವಾಗಿ ಪರಿಶೀಲಿಸಿ, ನಿರ್ವಹಣೆ ಮಾಡುತ್ತದೆ.

ಯಾರಿಗೂ ಬೇಡವಾಗಿತ್ತು ಹುದ್ದೆ

ಟೆಂಡರ್‌ ಕಡತಗಳಿಗೆ ಈ ಹಿಂದೆ ಪ್ರಧಾನ ಎಂಜಿನಿಯರ್‌ ಅವರೂ ಟಿಪ್ಪಣಿ ಬರೆಯುತ್ತಿದ್ದರು. ಕ್ರಮೇಣ ಈ ಹೊಣೆಗಳನ್ನು ಹಿಂಪಡೆಯಲಾಗಿತ್ತು. ಆ ಬಳಿಕ ಪ್ರಮುಖ ತೀರ್ಮಾನಗಳೆಲ್ಲವೂ ಮುಖ್ಯ ಎಂಜಿನಿಯರ್‌ ಹಂತದಲ್ಲೇ ನಡೆಯುತ್ತಿದ್ದುದರಿಂದ ಈ ಹುದ್ದೆ ವಹಿಸಿಕೊಳ್ಳಲು ಎಂಜಿನಿಯರ್‌ಗಳು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿತ್ತು. ಟೆಂಡರ್‌ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಎಲ್ಲ ಕಡತಗಳು ಮತ್ತು ಮಾರ್ಪಾಡುಗಳಿಗೆ ಸಂಬಂಧಿಸಿದ ಕಡತಗಳ ಹೊಣೆಯನ್ನು ಪ್ರಧಾನ ಎಂಜಿನಿಯರ್‌ಗೆ 2021ರಲ್ಲಿ ಮತ್ತೆ ವಹಿಸಲಾಗಿತ್ತು. ತದನಂತರ ಈ ಹುದ್ದೆಗೆ ಪೈಪೋಟಿ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.