
ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಪರಿಚಯಿಸಿಕೊಂಡು, ಚಿನ್ನ ಖರೀದಿಸುವ ನೆಪದಲ್ಲಿ ಆಭರಣ ಅಂಗಡಿ ಮಾಲೀಕರಿಗೆ ವಂಚಿಸಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆ ನಿವಾಸಿ ಶ್ವೇತಾ ಗೌಡ ಬಂಧಿತ ಆರೋಪಿ. ಇವರಿಂದ ಚಿನ್ನ ಹಾಗೂ ಕಾರು ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ವರ್ತೂರು ಪ್ರಕಾಶ್ ಅವರಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್‌ನಲ್ಲಿನ ನವರತ್ನ ಜ್ಯುವೆಲ್ಲರ್ಸ್ ಮಾಲೀಕ ಸಂಜಯ್ ಬಾಫ್ನಾ ಅವರಿಂದ ಸುಮಾರು 2.945 ಕೆ.ಜಿ ಚಿನ್ನ ಪಡೆದು ವಂಚಿಸಿದ್ದ ಆರೋಪದಡಿ ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಸಂಜಯ್ ಬಾಫ್ನಾ ಅವರ ಮಳಿಗೆಗೆ ಬರುತ್ತಿದ್ದ ಮಹಿಳೆ, ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಪರಿಚಯಿಸಿಕೊಂಡಿದ್ದರು. ತಾನು 'ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದು, ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ' ಎಂದಿದ್ದರು. ಸಂಜಯ್ ಒಪ್ಪಿದ್ದರು. ಆಭರಣಗಳನ್ನು ಮನೆಯವರಿಗೆ ತೋರಿಸಿಕೊಂಡು ಬರುವುದಾಗಿ ಅನುಮತಿ ಪಡೆದು ಮಹಿಳೆ ತನ್ನ ಮನೆಗೆ ಒಯ್ದಿದ್ದರು.
‘ಆ.26ರಿಂದ ಡಿ. 8ರ ವರೆಗಿನ ಅವಧಿಯಲ್ಲಿ ಆರೋಪಿ ಹೇಳಿದ್ದ ವಿಳಾಸಕ್ಕೆ ಆಭರಣ ಅಂಗಡಿ ಸಿಬ್ಬಂದಿ ಸುಮಾರು ₹ 2.42 ಕೋಟಿ ಮೌಲ್ಯದ 2.945 ಕೆ.ಜಿ ಚಿನ್ನ, ವಜ್ರಾಭರಣಗಳನ್ನು ತಲುಪಿಸಿದ್ದರು. ‘ಚಿನ್ನ ಮರಳಿಸಿ ಇಲ್ಲವೇ, ಹಣ ಪಾವತಿಸಿ’ ಎಂದು ಕೇಳಿದಾಗ ಬೆದರಿಕೆ ಹಾಕಿದ್ದಾಳೆ’ ಎಂದು ಸಂಜಯ್ ಬಾಫ್ನಾ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪುಲಿಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ನೇತೃತ್ವದ ತಂಡ ತನಿಖೆ ಕೈಗೊಂಡಿತು. ಕೋಲಾರ ಜಿಲ್ಲೆಯ ಬಿಜೆಪಿ ಮುಖಂಡರ ಕಾರಿನಲ್ಲಿ ಆರೋಪಿ ಶ್ವೇತಾ ಗೌಡ ಮೈಸೂರಿಗೆ ತೆರಳಿದ ಸುಳಿವು ಸಿಕ್ಕಿತ್ತು. ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಶ್ವೇತಾ ಗೌಡ, ಈ ಮೊದಲು ಇದೇ ರೀತಿ ಚಿನ್ನದ ವ್ಯಾಪಾರಿಗೆ ಮೋಸ ಮಾಡಿದ್ದ ಆರೋಪದಡಿ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದರು.
ಡಾಲರ್ಸ್ ಕಾಲೊನಿಯಲ್ಲಿರುವ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಮನೆ ವಿಳಾಸ ನೀಡಿ ಆರೋಪಿ 2.945 ಕೆ.ಜಿ ಚಿನ್ನ ಪಡೆದಿದ್ದಳು. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪ್ರಕಾಶ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.