ADVERTISEMENT

‘ಶ್ರಮಿಕ್‌’ ರೈಲಿನಲ್ಲೇ ಮಗುವಿಗೆ ಜನ್ಮ

​ಪ್ರಜಾವಾಣಿ ವಾರ್ತೆ
Published 24 ಮೇ 2020, 18:34 IST
Last Updated 24 ಮೇ 2020, 18:34 IST
ಮಗುವಿನೊಂದಿಗೆ  ಸಂಗೀತಾ
ಮಗುವಿನೊಂದಿಗೆ  ಸಂಗೀತಾ   

ಬೆಂಗಳೂರು: ‘ಶ್ರಮಿಕ್’ ರೈಲಿನ ಮೂಲಕ ತಮ್ಮೂರಿಗೆ ಹೊರಟಿದ್ದ ಉತ್ತರ ಪ್ರದೇಶದ ಸಂಗೀತಾ ಎಂಬುವರು, ಮಾರ್ಗಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಹಾಗೂ ಮಗುವಿನ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಗರದ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್, ‘ತಾಯಿ– ಮಗು ಆರೋಗ್ಯವಾಗಿದ್ದಾರೆ’ ಎಂದು ಹೇಳಿದ್ದಾರೆ. ಗರ್ಭಿಣಿ ಹಾಗೂ ಅವರ ಪತಿಯನ್ನು ಸುರಕ್ಷಿತವಾಗಿ ರೈಲಿನಲ್ಲಿ ಕಳುಹಿಸಲು ವ್ಯವಸ್ಥೆ ಮಾಡಿಕೊಟ್ಟ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಹಾಗೂ ತಂಡದ ಕೆಲಸಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಟ್‌ಫೀಲ್ಡ್‌ ಬಳಿ ವಾಸವಾಗಿದ್ದ ಸಂಗೀತಾ ಹಾಗೂ ಪತಿ, ಕೂಲಿ ಕೆಲಸ‌ ಮಾಡುತ್ತಿದ್ದರು. ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯರು, ಗರ್ಭಿಣಿ ಪ್ರಯಾಣ ಮಾಡುವುದು ಸೂಕ್ತವಲ್ಲವೆಂದು ಅಭಿ‍ಪ್ರಾಯಪಟ್ಟಿದ್ದರು.

ADVERTISEMENT

ತಮ್ಮೂರಿಗೆ ಹೋಗಲೇ ಬೇಕೆಂದು ಸಂಗೀತಾ ನಿರ್ಧರಿಸಿದ್ದರು. ಡಿಸಿಪಿ ಅನುಚೇತ್ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದರು. ಸ್ಪಂದಿಸಿದ್ದ ಅನುಚೇತ್, ದಂಪತಿಗೆ ರೈಲಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿ ಊರಿಗೆ ಕಳುಹಿಸಿದ್ದರು.

ಮೇ 21ರಂದು ನಗರದಿಂದ ಉತ್ತರ ಪ್ರದೇಶದತ್ತ ಹೊರಟಿದ್ದ ಶ್ರಮಿಕ್ ರೈಲಿನಲ್ಲಿ ದಂಪತಿ ಇದ್ದರು. ಮಾರ್ಗಮಧ್ಯೆಯೇ ರೈಲಿನಲ್ಲಿ ಮಹಿಳೆಗೆ ಹೆರಿಗೆಯಾಗಿದೆ. ದಂಪತಿ ಹಾಗೂ ಮಗು ಮನೆಗೆ ಸುರಕ್ಷಿತವಾಗಿ ತಲುಪಿದ್ದಾರೆ. ಅಲ್ಲಿಂದಲ್ಲೇ ಮಗು ಜೊತೆಗಿನ ಫೋಟೊವನ್ನು ದಂಪತಿ ಕಳುಹಿಸಿದ್ದಾರೆ. ಪೊಲೀಸರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.