ADVERTISEMENT

3.90 ಲಕ್ಷ ಆಸ್ತಿ ಮಾಲೀಕರಿಗೆ ಬಿಬಿಎಂಪಿಯಿಂದ ನೋಟಿಸ್‌

ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ತೆರಿಗೆ ಹಣ ಉಳಿಸಲು ತಪ್ಪು ಮಾಹಿತಿ * ಅನ್ಯಪ್ರದೇಶದ ಮಾರ್ಗ ಸೂಚಿ ದರದ ಪ್ರಕಾರ ತೆರಿಗೆ ಲೆಕ್ಕ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 21:25 IST
Last Updated 15 ಡಿಸೆಂಬರ್ 2020, 21:25 IST
ಮಂಜುನಾಥ ಪ್ರಸಾದ್‌
ಮಂಜುನಾಥ ಪ್ರಸಾದ್‌   

ಬೆಂಗಳೂರು: ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ತೆರಿಗೆ ಪಾವತಿಸುವಾಗ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಪಡದ ಸ್ಥಳದ ಮಾರ್ಗಸೂಚಿ ಮೌಲ್ಯವನ್ನು ಉಲ್ಲೇಖಿಸಿ ವಂಚನೆ ನಡೆಸುತ್ತಿರುವುದನ್ನು ಬಿಬಿಎಂಪಿ ಪತ್ತೆ ಹಚ್ಚಿದೆ. ಇಂತಹ ಕೃತ್ಯ ನಡೆಸಿರುವ 3.90 ಲಕ್ಷ ಪ್ರಕರಣಗಳನ್ನು ಬಿಬಿಎಂಪಿ ಗುರುತಿಸಿದ್ದು, ವ್ಯತ್ಯಾಸದ ಮೊತ್ತವನ್ನು ಶೀಘ್ರವೇ ಪಾವತಿಸುವಂತೆ ನೋಟೀಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದೆ.

‘ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಆಸ್ತಿಯ ಮಾರ್ಗಸೂಚಿ ಮೌಲ್ಯದ ಆಧಾರದಲ್ಲಿ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಮಾರ್ಗ ಸೂಚಿ ದರವನ್ನು ತುಂಬುವ ಆಯ್ಕೆಯನ್ನು ಆಸ್ತಿ ಮಾಲೀಕರೇ ನೀಡಲಾಗಿತ್ತು. ಇದನ್ನು ದುರುಪಯೋಗಪಡಿಸಿಕೊಂಡು ಕೆಲವರು ನೈಜ ಮಾರ್ಗಸೂಚಿ ಮೌಲ್ಯವನ್ನು ಮರೆಮಾಚುತ್ತಿದ್ದರು. ಕೆಲವರು ವಲಯಗಳ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದರು. ಹಾಗಾಗಿ ನಾವು ಅಂದಾಜು ಮಾಡಿದಷ್ಟು ತೆರಿಗೆ ಸಂಗ್ರಹವಾಗುತ್ತಿರಲಿಲ್ಲ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿದಾಗ 3.90 ಲಕ್ಷ ಮಂದಿ ಈ ರೀತಿ ವಂಚಿಸಿರುವುದು ಗೊತ್ತಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆಸ್ತಿ ತೆರಿಗೆಯ ಅಂತಿಮ ವಿವರವನ್ನು ಅನುಮೋದಿಸುವಾಗ ಬಿಬಿಎಂಪಿ ಕೆಲವು ಕಂದಾಯ ಅಧಿಕಾರಿಗಳೂ ಈ ಅಕ್ರಮದಲ್ಲಿ ಕೈಜೋಡಿಸಿದ್ದಾರೆ. ವಲಯಗಳಿಗೆ (ವಾಣಿಜ್ಯ, ವಸತಿ ಇತ್ಯಾದಿ) ಸಂಬಂಧಿಸಿದ ತಪ್ಪು ಮಾಹಿತಿ ನಮೂದಿಸುವಲ್ಲಿ ಅವರ ಕೈವಾಡವೂ ಇದೆ. ತೆರಿಗೆ ಕಡಿಮೆ ಮಾಡಿಸುವ ಉದ್ದೇಶದಿಂದಲೇ ಇಂತಹ ಕೃತ್ಯಗಳನ್ನು ನಡೆಸಿರುವ ಶಂಕೆ ಇದೆ’ ಎಂದರು.

ADVERTISEMENT

‘ತೆರಿಗೆ ಕುರಿತು ತಪ್ಪು ಮಾಹಿತಿ ನೀಡಿರುವ ಆಸ್ತಿ ಮಾಲೀಕರಿಗೆ ನಾವು ಈಗಾಗಲೇ ನೋಟಿಸ್‌ ನೀಡುತ್ತಿದ್ದೇವೆ. ಆಗಿರುವ ಲೋಪವನ್ನು ಅವರ ಗಮನಕ್ಕೆ ತರುತ್ತಿದ್ದೇವೆ. ಆಸ್ತಿ ತೆರಿಗೆಯನ್ನು2016ರಲ್ಲಿ ಪರಿಷ್ಕರಿಸಲಾಗಿತ್ತು. ಆಸ್ತಿ ಮಾಲೀಕರು ನೀಡಿರುವ ತಪ್ಪು ಮಾಹಿತಿಯಿಂದ ನಾಲ್ಕು ವರ್ಷಗಳಲ್ಲಿ ಬಿಬಿಎಂಪಿಗೆ ಎಷ್ಟು ತೆರಿಗೆ ನಷ್ಟವಾಗಿದೆ ಎಂಬುದನ್ನು ಕಂದಾಯ ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ. ವ್ಯತ್ಯಾಸದ ಮೊತ್ತದ ಬಗ್ಗೆಯೂ ಶೀಘ್ರವೇ ಆಸ್ತಿ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಲಿದ್ದೇವೆ. ಪ್ರತಿಕ್ರಿಯೆ ನೀಡಲು ಅಥವಾ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ಒದಗಿಸಲಿದ್ದೇವೆ. ಬಳಿಕ ಬಾಕಿ ಮೊತ್ತ ವಸೂಲಿಗೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಆಸ್ತಿ ಮಾಲೀಕರು ನೀಡಿರುವ ತಪ್ಪು ಮಾಹಿತಿಯಿಂದಾಗಿ ಪಾಲಿಕೆಗೆ ಒಟ್ಟು ಎಷ್ಟು ನಷ್ಟವಾಗಿದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲಾಗದು. ಪ್ರತಿಯೊಂದು ಪ್ರಕರಣದ ಬಗ್ಗೆ ಕೂಲಂಕಷವಾಗಿ ಲೆಕ್ಕ ಹಾಕಿದ ಬಳಿಕವಷ್ಟೇ ಈ ಬಗ್ಗೆ ಸಮಗ್ರ ವಿವರ ಗೊತ್ತಾಗಲಿದೆ’ ಎಂದರು.

‘ಮಾರ್ಗಸೂಚಿ ಮೌಲ್ಯ– ಆಯ್ಕೆ ಅವಕಾಶ ಮಾಲೀಕರಿಗಿಲ್ಲ’
ಇನ್ನು ಮುಂದೆ ಆಸ್ತಿ ತೆರಿಗೆ ಪಾವತಿಸುವಾಗ ಆಸ್ತಿ ಇರುವ ಜಾಗದ ಮಾರ್ಗಸೂಚಿ ಮೌಲ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಮಾಲೀಕರು ಮನಬಂದಂತೆ ತುಂಬುವುದಕ್ಕೆ ಅವಕಾಶ ಸಿಗದು. ಆಸ್ತಿ ತೆರಿಗೆ ಪಾವತಿ ಸಂಬಂಧ ಬಿಬಿಎಂಪಿಯೇ ಅಷ್ಟೂ ಆಸ್ತಿಗಳ ಮಾರ್ಗಸೂಚಿ ಮೌಲ್ಯಗಳನ್ನು ಮುದ್ರಾಂಕ ಮತ್ತು ನೋಂದಣಿ ಇಲಾಖೆ ನಿಗದಿಪಡಿಸುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ಮ್ಯಾಪಿಂಗ್‌ ಮಾಡಲಿದೆ.

‘ಬಿಬಿಎಂಪಿಯಜಿಐಎಸ್ ಸಕ್ರಿಯಗೊಳಿಸಿದ ಆಸ್ತಿ ತೆರಿಗೆ ಮಾಹಿತಿ ವ್ಯವಸ್ಥೆಯಲ್ಲಿ (ಜಿಇಪಿಟಿಐಎಸ್) ಪ್ರತಿ ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನೂ ಜೋಡಿಸಲಾಗುತ್ತಿದೆ. ಆಸ್ತಿ ತೆರಿಗೆ ಪಾವತಿಸುವವರು ತಮ್ಮ ಸ್ವತ್ತಿನ ಸಂಖ್ಯೆ (ಪಿಐಡಿ) ನಮೂದಿಸುತ್ತಿದ್ದಂತೆಯೇ ಅದರ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ತೆರಿಗೆಯ ಮೊತ್ತ ಕಾಣಿಸಿಕೊಳ್ಳಲಿದೆ. ಹಾಗಾಗಿ ಇನ್ನು ಮಾರ್ಗಸೂಚಿ ಮೌಲ್ಯಕ್ಕೆ ಸಂಬಂಧಿಸಿ ತಪ್ಪು ಮಾಹಿತಿ ನೀಡಲು ಆಸ್ಪದ ಇಲ್ಲ’ ಎಂದು ಮಂಜುನಾಥ ಪ್ರಸಾದ್‌ ಅವರು ತಿಳಿಸಿದರು.

‘ಪಿಐಡಿ ಸಂಖ್ಯೆ ಲಭ್ಯವಿಲ್ಲದ ಆಸ್ತಿಗಳಿಗೆ ಬಿಬಿಎಂಪಿ ನಕಾಶೆಯನ್ನು ಕ್ಲಿಕ್‌ ಮಾಡುವ ಮೂಲಕ ಅಲ್ಲಿನ ಮಾರ್ಗಸೂಚಿ ಮೌಲ್ಯ ನಮೂದಿಸಬಹುದು. ನಕಾಶೆಯಲ್ಲಿ ಮಾರ್ಗಸೂಚಿ ಮೌಲ್ಯದ ವಿವರಗಳನ್ನು ಪ್ರತ್ಯೇಕ ಬಣ್ಣಗಳಲ್ಲಿ ಗುರುತಿಸಲಾಗಿದೆ’ ಎಂದು ಅವರು ತಿಳಿಸಿದರು.

ಬಿಬಿಎಂಪಿ ನಕಾಶೆಗೆ ಮಾರ್ಗಸೂಚಿ ಮೌಲ್ಯಗಳ ವಿವರ ಜೋಡಿಸಲು ಪ್ರತಿ ವಲಯಕ್ಕೆ ₹ 4.9 ಲಕ್ಷದಂತೆ ಒಟ್ಟು ₹ 39 ಲಕ್ಷ ವೆಚ್ಚ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.