ಬೆಂಗಳೂರು: ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ 10 ದಿನದೊಳಗೆ ಬೇಲಿ ಹಾಕಬೇಕು ಎಂದು ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಸೂಚಿಸಿದೆ.
ಅಧ್ಯಕ್ಷ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸಮಿತಿ ಸದಸ್ಯರು ಎಲೆ ಮಲ್ಲಪ ಶೆಟ್ಟಿ ಕೆರೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ 9.5 ಕಿ.ಮೀ. ಫೆನ್ಸಿಂಗ್ ಹಾಕಲಾಗಿದೆ. ಇನ್ನೂ 4.5 ಕಿ.ಮೀ. ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದರು. ಪೊಲೀಸರ ನೆರವು ಪಡೆದು, ಮಾರ್ಕಿಂಗ್ ಮಾಡಿ, ಬೇಲಿ ಹಾಕಬೇಕು ಎಂದು ಗಡುವು ವಿಧಿಸಿದರು.
‘ಕೆರೆಗೆ ಹೊಂದಿಕೊಂಡಂತಿರುವ ಖಾಸಗಿ ಲೇಔಟ್‌ನವರು ಕೆರೆ ಜಾಗವನ್ನೇ ರಸ್ತೆಯನ್ನಾಗಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಬೇಕು’ ಎಂದು ಬಿಡಿಎ ಮತ್ತು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಿದರು.
‘ವರ್ತೂರು ಕೆರೆಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಲಾಗಿದೆ. ಮಳೆ ನೀರು ಮಾತ್ರ ಹರಿಯುತ್ತಿದೆ. ಯಾವುದೇ ಒತ್ತುವರಿ ಇರುವುದಿಲ್ಲ. ಬಿಬಿಎಂಪಿಗೆ ಕೆರೆ ನಿರ್ವಹಣೆಯನ್ನು ವರ್ಗಾಯಿಸುವ ಬಗ್ಗೆ ಮಾತುಕತೆ ನಡೆದಿದೆ’ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.
ಕೆರೆಯ ಸುತ್ತಲಿನ ಸ್ವಚ್ಛತೆ ಕುರಿತಂತೆ ಬಿಡಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಮಿತಿ ಅಧ್ಯಕ್ಷರು, ಬಿಡಿಎ, ಬಿಬಿಎಂಪಿ, ಕಂದಾಯ ಹಾಗೂ ಕೆರೆಗಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಳಗೊಂಡ ಸಭೆಯನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಬೇಕು ಬಿಡಿಎ ಎಂಜಿನಿಯರಿಂಗ್ ಸದಸ್ಯ ಶಾಂತರಾಜಣ್ಣ ಅವರಿಗೆ ಸೂಚಿಸಿದರು.
‘ಸರ್ಕಾರದಿಂದ ಪ್ರತಿ ವರ್ಷ ನೂರಾರು ಕೋಟಿ ವೆಚ್ಚ ಮಾಡಿದರೂ ಬೆಂಗಳೂರಿನ ಕೆರೆಗಳ ಸ್ಥಿತಿ ಬದಲಾಗದಿರುವ ವ್ಯವಸ್ಥೆಗೆ ವರ್ತೂರು ಕೆರೆ ಹಿಡಿದ ಕನ್ನಡಿಯಾಗಿದೆ’ ಎಂದರು.
‘ಬೆಳ್ಳಂದೂರು ಕೆರೆ ಅಭಿವೃದ್ಧಿ ಕಾರ್ಯವನ್ನು ಬಿಡಿಎ ಮುಂದಿನ ವರ್ಷದೊಳಗೆ ಮುಗಿಸಬೇಕು. ತ್ಯಾಜ್ಯ ನೀರು ಹೋಗದಂತೆ, ಒತ್ತುವರಿಯಾಗದಂತೆ ಬಿಬಿಎಂಪಿ ಹಾಗೂ ಜಲಮಂಡಳಿ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಅಗರ ಕೆರೆಗೆ ಭೇಟಿ ನೀಡಿದ ಸಮಿತಿ ಸದಸ್ಯರು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಸಮಿತಿ ಸದಸ್ಯರಾದ ರವಿಸುಬ್ರಹ್ಮಣ್ಯ, ಹರೀಶ್ ಪೂಂಜ, ವೆಂಕಟಶಿವಾ ರೆಡ್ಡಿ, ಗೋವಿಂದರಾಜು ಮತ್ತು ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು.
ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ತರಾಟೆ
‘ವರ್ತೂರು ಬೆಳ್ಳಂದೂರು ಕೆರೆಗಳ ಸುತ್ತಮುತ್ತ ನೂರಾರು ಅಪಾರ್ಟ್‌ಮೆಂಟ್‌ಗಳಿದ್ದು ಅವರು ಬಳಸಿದ ನೀರು ಯಾವ ಪ್ರಮಾಣದಲ್ಲಿ ಸಂಸ್ಕರಿಸಲಾಗುತ್ತಿದೆ ಎಂಬ ದತ್ತಾಂಶವಿದೆಯೇ’ ಎಂಬ ವಿಧಾನಮಂಡಲದ ಸ್ಥಳೀಯ ಸಂಸ್ಥೆ ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಪ್ರಶ್ನೆಗೆ ಉತ್ತರ ನೀಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಬ್ಬಿಬ್ದಾದರು.
‘ಆರು ವರ್ಷಕ್ಕೊಮ್ಮೆ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳ (ಎಸ್‌ಟಿಪಿ) ಪರವಾನಗಿ ನವೀಕರಣ ಸಂದರ್ಭದಲ್ಲಿ ಪರಿಶೀಲನೆ ಮಾಡಲಾಗುತ್ತದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದರು.
‘ಕೆರೆಗಳಿಗೆ ಕೊಳಚೆ ನೀರು ಹೋಗಲು ಬೆಂಗಳೂರು ಜಲಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೇ ನೇರ ಹೊಣೆ. ಅಪಾರ್ಟ್‌ಮೆಂಟ್‌ಗಳಲ್ಲಿರುವ ಬಹುತೇಕ ಎಸ್‌ಟಿಪಿಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಹಿರಂಗ ಸತ್ಯ. ಆದರೆ ಈ ಎರಡೂ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆಗಳು ಮಲಿನವಾಗುತ್ತಿವೆ’ ಎಂದು ಸಮಿತಿ ಸದಸ್ಯ ರವಿ ಸುಬ್ರಹ್ಮಣ್ಯ ಅವರು ತರಾಟೆಗೆ ತೆಗೆದುಕೊಂಡರು.
‘ಆರು ತಿಂಗಳಿಗೆ ಒಮ್ಮೆಯಾದರೂ ಎಸ್‌ಟಿಪಿಯಿಂದ ಹೊರಬರುವ ನೀರಿನ ಗುಣಮಟ್ಟದ ಪರೀಕ್ಷೆಯಾಗಿ ಅದನ್ನು ಮೇಲ್ವಿಚಾರಣೆ ಮಾಡಬೇಕು’ ಎಂದು ಬೆಂಗಳೂರು ಜಲಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಅಪಾರ್ಟ್‌ಮೆಂಟ್ ಬಳಸಿದ ನೀರು ಯಾವ ಪ್ರಮಾಣದಲ್ಲಿ ಸಂಸ್ಕರಣೆಯಾಗುತ್ತಿದೆ? ಕೆರೆಗಳ ಸುತ್ತಲಿನ ಸ್ವಚ್ಛತೆಗೆ ಇಲಾಖೆಗಳು ಕೈಗೊಂಡ ಕ್ರಮಗಳೇನು? ನೂರಾರು ಕೋಟಿ ವೆಚ್ಚವಾದರೂ ಕೆರೆಗಳು ಸುಧಾರಿಸಿಲ್ಲ.-ಅಧಿಕಾರಿಗಳ ಕಾರ್ಯವೈಖರಿಗೆ ಸಮಿತಿ ಸದಸ್ಯರ ಅಸಮಾಧಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.