ADVERTISEMENT

ಬಸವತತ್ವ ಉಸಿರಾಗಿಸಿಕೊಂಡ ಶಿವಾನಂದ ಸ್ವಾಮೀಜಿ

ಬಸವಕುಮಾರ ಶಿವಯೋಗಿಗಳ 45ನೇ ಸ್ಮರಣೋತ್ಸವದಲ್ಲಿ ಹಾರಕೂಡ ಚನ್ನವೀರ ಶಿವಾಚಾರ್ಯರ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 5:12 IST
Last Updated 26 ಜನವರಿ 2021, 5:12 IST
ಬಸವಕಲ್ಯಾಣಕ್ಕೆ ಸಮೀಪದ ತಾಲ್ಲೂಕು ಕೇಂದ್ರ ಹುಲಸೂರನಲ್ಲಿ ಸೋಮವಾರ ನಡೆದ ಬಸವಕುಮಾರ ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಶಿವಾನಂದ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಲಾಯಿತು
ಬಸವಕಲ್ಯಾಣಕ್ಕೆ ಸಮೀಪದ ತಾಲ್ಲೂಕು ಕೇಂದ್ರ ಹುಲಸೂರನಲ್ಲಿ ಸೋಮವಾರ ನಡೆದ ಬಸವಕುಮಾರ ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಶಿವಾನಂದ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಲಾಯಿತು   

ಬಸವಕಲ್ಯಾಣ: ‘ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಅವರಿಗೆ ಬಸವತತ್ವವೇ ಉಸಿರಾಗಿರುವ ಕಾರಣ ಅವರು ಎರಡು ಸಲ ಭಾರತದಾದ್ಯಂತ ಬಸವ ಸಂದೇಶ ಪಾದಯಾತ್ರೆ ಕೈಗೊಂಡರು’ ಎಂದು ಹಾರಕೂಡ ಚನ್ನವೀರ ಶಿವಾಚಾರ್ಯರು ಶ್ಲಾಘಿಸಿದರು.

ಇಲ್ಲಿಗೆ ಸಮೀಪದ ತಾಲ್ಲೂಕು ಕೇಂದ್ರ ಹುಲಸೂರನ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಬಸವಕುಮಾರ ಶಿವಯೋಗಿಗಳ 45ನೇ ಸ್ಮರಣೋತ್ಸವ ಹಾಗೂ ಶಿವಾನಂದ ಸ್ವಾಮೀಜಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತಮ ಕಾರ್ಯ ಕೈಗೊಳ್ಳುವವರಿಗೆ ಮಾತ್ರ ಅನೇಕ ವಿಘ್ನಗಳು ಎದುರಾಗುತ್ತವೆ. ಆದರೆ ಇದಕ್ಕೆ ಪ್ರತಿಯಾಗಿ ತಾಳಿಕೊಂಡು ಇದ್ದವರೇ ಉತ್ತಮರು. ಒಳ್ಳೆಯದನ್ನು ನೋಡಿ ಸಹಿಸದೆ ಉರಿಯುವವರು ಬೂದಿ ಆಗುತ್ತಾರೆ ಎಂಬುದನ್ನು ಎಲ್ಲರೂ ಮನಗಾಣಬೇಕು’ ಎಂದರು.

ADVERTISEMENT

ಬೈಲೂರು ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ‘ಬಸವಾದಿ ಶರಣರು ಸಮಾನತೆ ಸಾರಿದರು. ಕಾಯಕ, ದಾಸೋಹ ತತ್ವ ನೀಡಿದರು. ಅವರ ತತ್ವದ ಪಾಲನೆ ಆಗಲಿ’ ಎಂದರು.

ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್ ಮಾತನಾಡಿ, ‘ಬಸವತತ್ವದ ಪ್ರಚಾರ, ಪ್ರಸಾರ ಇನ್ನೂ ಆಗಬೇಕಾಗಿದ್ದು ಈ ನಿಟ್ಟಿನಲ್ಲಿ ಶಿವಾನಂದ ಸ್ವಾಮೀಜಿ ಉತ್ತಮ ಕಾರ್ಯ ಕೈಗೊಂಡಿದ್ದಾರೆ’ ಎಂದರು.

ಚಿತ್ರದುರ್ಗ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಮಾತನಾಡಿದರು. ಇಳಕಲ್ ಗುರುಮಹಾಂತ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ, ಬಸವರಾಜ ಧನ್ನೂರ, ವೈಜನಾಥ ಕಾಮಶೆಟ್ಟಿ, ಲತಾ ಹಾರಕೂಡೆ, ಆನಂದ ದೇವಪ್ಪ, ಶಿವರಾಜ ನರಶೆಟ್ಟಿ, ಶಶಿಕಾಂತ ದುರ್ಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಬೇಲೂರ ಚಿದ್ಘನಲಿಂಗ ಸ್ವಾಮೀಜಿ, ಸಾಯಗಾಂವ ಶಿವಾನಂದ ದೇವರು ಪಾಲ್ಗೊಂಡಿದ್ದರು.

ಬೆಳ್ಳಿ ಕಿರೀಟ ತೊಡಿಸಿ ಸನ್ಮಾನ

ಬಸವತತ್ವ ಪ್ರಚಾರಕ್ಕಾಗಿ ಭಾರತದಾದ್ಯಂತ 22 ಸಾವಿರ ಕಿ.ಮೀ ಪಾದಯಾತ್ರೆ ನಡೆಸಿದ ಮಠಾಧಿಪತಿ ಶಿವಾನಂದ ಸ್ವಾಮೀಜಿ ಅವರಿಗೆ ಹಾರಕೂಡ ಚನ್ನವೀರ ಶಿವಾಚಾರ್ಯರು ಬೆಳ್ಳಿ ಕಿರೀಟ ತೊಡಿಸಿದರು. ಸ್ವಾಮೀಜಿ ಅವರಿಗೆ ಭಕ್ತರೊಬ್ಬರು ಬಂಗಾರದ ಇಷ್ಟಲಿಂಗ ಕೂಡ ಕಾಣಿಕೆಯಾಗಿ ನೀಡಿದರು.

ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹೆಲಿಕಾಪ್ಟರ್‌ನಲ್ಲಿ ಕಾರ್ಯ ಕ್ರಮಕ್ಕೆ ಬಂದಿದ್ದರು. ವಾಪಸ್ಸಾಗುವಾಗ ಹೆಲಿಕಾಪ್ಟರ್‌ನಿಂದ ಸ್ವಾಮೀಜಿ ಹಾಗೂ ವಚನಸಾಹಿತ್ಯ ಹೊತ್ತು ನಿಂತಿದ್ದವರ ಮೇಲೆ ಪುಷ್ಪವೃಷ್ಟಿಗೈದರು.

‘ಬಸವತತ್ವಕ್ಕೆ ಬೇಲಿ, ಕಲ್ಯಾಣ ಬಂದ್’

‘ಜಾತಿ ಹೆಸರಲ್ಲಿ ಬಸವತತ್ವಕ್ಕೆ ಬೇಲಿ ಹಾಕಲಾಗಿದೆ. ಅಂದು ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದ ಕಲ್ಯಾಣ (ಬಸವ ಕಲ್ಯಾಣ) ಇಂದು ಬಂದ್ ಆಗಿದೆ’ ಎಂದು ಚಿತ್ರದುರ್ಗ ಶಿವಮೂರ್ತಿ ಮುರುಘಾ ರಾಜೇಂದ್ರ ಶರಣರು ವಿಷಾದ ವ್ಯಕ್ತಪಡಿಸಿದರು.

ಸಮೀಪದ ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಕುಮಾರ ಶಿವಯೋಗಿಗಳ 45ನೇ ಸ್ಮರಣೋತ್ಸವ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಬೇಲಿ ಹಾಕಿದರೆ ಬಸವತತ್ವ ಉಳಿಯುವುದಿಲ್ಲ. ಬೇಲಿ ಬೇಕೋ ಬಸವತತ್ವ ಬೇಕೋ ಎಂಬುದನ್ನು ನಿರ್ಧರಿಸಬೇಕಾಗಿದೆ. ನಾನೂ ಬಸವಕಲ್ಯಾಣದ ವಿಕಾಸಕ್ಕಾಗಿ ಬೆವರು ಸುರಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.