ADVERTISEMENT

ಬೀದರ್‌ | ಗಡಿಯಲ್ಲಿ ಹೆಡೆ ಬಿಚ್ಚಿದ ಕಳ್ಳಬಟ್ಟಿ ಮಾಫಿಯಾ

ಒಂದು ತಿಂಗಳಲ್ಲಿ 502 ಕಡೆ ಅಬಕಾರಿ ದಾಳಿ

ಚಂದ್ರಕಾಂತ ಮಸಾನಿ
Published 24 ಏಪ್ರಿಲ್ 2020, 19:30 IST
Last Updated 24 ಏಪ್ರಿಲ್ 2020, 19:30 IST
ಔರಾದ್‌ ತಾಲ್ಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಕಳ್ಳಬಟ್ಟಿ ಕೇಂದ್ರಗಳ ಪತ್ತೆಗೆ ಡ್ರೋನ್‌ ಬಳಸುತ್ತಿರುವ ಅಬಕಾರಿ ಇಲಾಖೆಯ ಸಿಬ್ಬಂದಿ
ಔರಾದ್‌ ತಾಲ್ಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಕಳ್ಳಬಟ್ಟಿ ಕೇಂದ್ರಗಳ ಪತ್ತೆಗೆ ಡ್ರೋನ್‌ ಬಳಸುತ್ತಿರುವ ಅಬಕಾರಿ ಇಲಾಖೆಯ ಸಿಬ್ಬಂದಿ   

ಬೀದರ್‌: ಲಾಕ್‌ಡೌನ್‌ನಿಂದಾಗಿ ಒಂದು ಕಡೆ ಮದ್ಯದ ಅಂಗಡಿಗಳು ಬಾಗಿಲು ಮುಚ್ಚಿದರೆ, ಇನ್ನೊಂದೆಡೆ 15 ದಿನಗಳಿಂದ ರುಚಿ ನೋಡುವಷ್ಟೂ ಮದ್ಯ ಸಿಗದೆ ಮದ್ಯಪ್ರಿಯರು ಚಡಪಡಿಸುತ್ತಿದ್ದಾರೆ. ಮದ್ಯಪ್ರಿಯರ ದೌರ್ಬಲ್ಯವನ್ನೇ ಬಂಡವಾಳ ಮಾಡಿ ಕೊಂಡು ಗಡಿ ಗ್ರಾಮಗಳಲ್ಲಿ ಕಳ್ಳಬಟ್ಟಿ ಮಾಫಿಯಾ ಸದ್ದಿಲ್ಲದಂತೆ ಹೆಡೆ ಬಿಚ್ಚಿಕೊಂಡಿದೆ.

ಜಿಲ್ಲೆಯ ಗುಡ್ಡಗಾಡು ಹಾಗೂ ಕುರಚಲು ಅರಣ್ಯ ಪ್ರದೇಶದಲ್ಲಿ ಬೆಲ್ಲದ ಕೊಳೆ ಬಳಸಿ ಕಳ್ಳಬಟ್ಟಿ ತಯಾರಿಸುವ ಕಾರ್ಯ ಎಗ್ಗಿಲ್ಲದೆ ನಡೆದಿದೆ. ಕೋವಿಡ್ 19 ಸೋಂಕು ಹರಡುವಿಕೆ ತಡೆಯಲು ಜಿಲ್ಲೆಯ ಗಡಿಗಳಲ್ಲಿ ತೆರೆಯಲಾದ ಚೆಕ್‌ಪೋಸ್ಟ್‌ ಹಾಗೂ ರೆಡ್‌ ಝೋನ್‌ಗಳಲ್ಲಿ ಪೊಲೀಸರು ಬಂದೋಬಸ್ತ್‌ನಲ್ಲಿ ಇದ್ದಾರೆ. ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಅಂತೆಯೇ
ಕಳ್ಳಬಟ್ಟಿ ಮಾಫಿಯಾ ಮತ್ತೆ ಸಕ್ರೀಯವಾಗಿದೆ.

ಹೊಲ ಗದ್ದೆಗಳಲ್ಲಿನ ಹುಲ್ಲು ಬಣಿವೆ, ತಿಪ್ಪೆಗುಂಡಿ, ಕಲ್ಲಿನ ರಾಶಿ, ಕಣಿವೆ ಪ್ರದೇಶ ಹಾಗೂ ಗಟಾರಗಳಲ್ಲಿ ಸಹ ಕಳ್ಳಬಟ್ಟಿ ಮುಚ್ಚಿಟ್ಟು ಮಾರಾಟ ಮಾಡಲಾಗುತ್ತಿದೆ. ತಾಂಡಾಗಳಲ್ಲಿ ತಯಾರಾದ ಕಳ್ಳಬಟ್ಟಿ ರಾತ್ರಿ ವೇಳೆಗೆ ಬೀದರ್‌ ವರೆಗೂ ತಲುಪುತ್ತಿದೆ. ಕೆಲವರು ನಿರ್ಗತಿಕರ ವೇಷದಲ್ಲಿ ಚಿದ್ರಿ ರಸ್ತೆ, ಮೈಲೂರು ಕ್ರಾಸ್‌ ಹಾಗೂ ನೌಬಾದ್‌ನಲ್ಲಿ ಕಳ್ಳಬಟ್ಟಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸಾರ್ವಜನಿಕರ ಸಹಕಾರದಿಂದ ಕೆಲವರನ್ನು ಗುರುತಿಸಿ ಅವರಿಗೆ ಸರಿ ದಾರಿ ತೋರಿಸಿದ್ದಾರೆ.

ADVERTISEMENT

‘ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ತಾಂಡಾಗಳು ಸೇರಿದಂತೆ 502 ಕಡೆ ದಾಳಿ ನಡೆಸಿ 1,061 ಲೀಟರ್ ಮದ್ಯ, 1,143 ಲೀಟರ್ ಬೀಯರ್, 240 ಲೀಟರ್ ಸೇಂದಿ, 3,200 ಲೀಟರ್ ಬೆಲ್ಲದ ಕೊಳೆ, 240 ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಂಡು 157 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 11 ದ್ವಿಚಕ್ರ ವಾಹನಗಳು ಸೇರಿ ಒಟ್ಟು ₹ 15.99 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ಹೇಳುತ್ತಾರೆ.

ಔರಾದ್‌ ತಾಲ್ಲೂಕಿನ ಯನಗುಂದ ತಾಂಡಾ, ಭಾಲ್ಕಿಯ ಧನ್ನೂರ ತಾಂಡಾ, ಬೀದರ್ ತಾಲ್ಲೂಕಿನ ಬಗದಲ್ (ಎ)ತಾಂಡಾ, ಮಮದಾಪುರ ತಾಂಡಾ, ದಾಸ ನಾಯಕ್ ತಾಂಡಾ, ದಾಡಗಿ ತಾಂಡಾ, ನಾವದಗಿ ತಾಂಡಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಅತಿ ಹೆಚ್ಚು ಕಳ್ಳಬಟ್ಟಿ ತಯಾರಿಕೆ ಘಟಕಗಳಿದ್ದು, ಎಲ್ಲವನ್ನೂ ನಾಶಪಡಿಸಲಾಗಿದೆ’ ಎಂದು ತಿಳಿಸುತ್ತಾರೆ.

‘ಔರಾದ್ ಹಾಗೂ ಕಮಲನಗರದ ಗುಡ್ಡಗಾಡು ಹಾಗೂ ಹಳ್ಳಕೊಳ್ಳ ಬತ್ತಿರುವ ಪ್ರದೇಶಗಳಲ್ಲಿ ಕಳ್ಳಭಟ್ಟಿಗಳು ಸಕ್ರೀಯವಾಗಿರುವ ಮಾಹಿತಿ ಇದೆ. ಇವುಗಳನ್ನು ಸುಲಭವಾಗಿ ಗುರುತಿಸಲು ಕಷ್ಟವಾಗುತ್ತಿದೆ. ಹೀಗಾಗಿ ಡ್ರೋನ್‌ ಕ್ಯಾಮೆರಾಗಳನ್ನು ಬಳಸಿ ಶೋಧ ಕಾರ್ಯ ನಡೆಸಿದ್ದೇವೆ’ ಎಂದು ಹೇಳುತ್ತಾರೆ.

‘ಅಬಕಾರಿ ಇಲಾಖೆಯ ಸಿಬ್ಬಂದಿ ಹಗಲಿರುಳು ಕಳ್ಳಬಟ್ಟಿ ತಯಾರಿಕೆ ಘಟಕಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಳ್ಳಬಟ್ಟಿ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿರುವವರು ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಹಿಂಜರಿಯುತ್ತಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ’ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.