ಬಸವಕಲ್ಯಾಣ: ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಮತ್ತು ತಾಲ್ಲೂಕು ಆಡಳಿತದಿಂದ ಸೋಮವಾರ ನಗರದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಶರಣ ತತ್ವ ಸಂದೇಶ ಉಪನ್ಯಾಸ, ವಚನ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ಗಮನ ಸೆಳೆಯಿತು.
ಸಂಪನ್ಮೂಲ ವ್ಯಕ್ತಿ ಶಾಲಿವಾನ ಬಿರಾದಾರ ಉದ್ಘಾಟಿಸಿ ಮಾತನಾಡಿ, ‘ಶಿಕ್ಷಣವೆಂದರೆ ಬರೀ ಪುಸ್ತಕಗಳನ್ನು ಓದುವುದಲ್ಲ. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಆಟೋಟ ಮುಖ್ಯವಾಗಿದೆ. ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಂಡರೆ ವಿದ್ಯಾರ್ಥಿಗಳಲ್ಲಿನ ಸೂಪ್ತ ಪ್ರತಿಭೆ ಹೊರಬರುತ್ತದೆ. ಹೆಚ್ಚಿನದನ್ನು ಸಾಧಿಸುವುದಕ್ಕೆ ಪ್ರೋತ್ಸಾಹ ಮತ್ತು ಪ್ರೇರಣೆ ದೊರಕುತ್ತದೆ’ ಎಂದರು.
ರಾಷ್ಟ್ರಕವಿ ಕುವೆಂಪು ಶಾಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ ಬಿರಾದಾರ, ಜ್ಞಾನೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಭಾಲ್ಕಿಕರ್, ಶಿಕ್ಷಣ ಸಂಯೋಜಕ ಮನೋಹರ ಕಂಟೆಕೂರೆ, ಸಂಪನ್ಮೂಲ ವ್ಯಕ್ತಿಗಳಾದ ಗಿರಿಧರ ಧಾನೂರೆ, ನಾಸೇರ್ ಪಟೇಲ್, ಮುಖ್ಯ ಶಿಕ್ಷಕಿ ವಿದ್ಯಾರಾಣಿ ಬಿರಾದಾರ, ರಾಜೇಶ್ವರಿ ಬಿರಾದಾರ, ರಾಜಶೇಖರ ಮಾಮಾ, ಶೀಲಾರಾಣಿ, ಪೂರ್ಣಿಮಾ ಬೊಕ್ಕೆ, ಐಶ್ವರ್ಯ, ರಾಣಿಕಾ ಕೋರಕೆ, ಸಂಗಮೇಶ ತೊಗರಖೇಡೆ, ಚಂದ್ರಕಲಾ, ರುಕ್ಮೀಣಿ ಉಪಸ್ಥಿತರಿದ್ದರು.
ರಾಷ್ಟ್ರಕವಿ ಕುವೆಂಪು ಪ್ರಾಥಮಿಕ ಶಾಲೆಯ 13 ತಂಡಗಳು ಮತ್ತು ಜ್ಞಾನೋದಯ ಪಬ್ಲಿಕ್ ಶಾಲೆಯ ತಂಡಗಳಿಂದ ವಿವಿಧ ಚಟುವಟಿಕೆ ಪ್ರದರ್ಶಿಸಲಾಯಿತು. ವಚನ ನೃತ್ಯ, ವಚನ ಗಾಯನ, ಜಾನಪದ ನೃತ್ಯ, ಜಾನಪದ ಮತ್ತು ಭಾವಗೀತೆ ಗಾಯನ, ಕನ್ನಡ ಮತ್ತು ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ಕುವೆಂಪು ಶಾಲೆಯ ಮಕ್ಕಳು ಭರತನಾಟ್ಯ, ಕೋಲಾಟ ಸಹ ಪ್ರದರ್ಶಿಸಿದರು. ಸಂಜೆಯ ಆಹ್ಲಾದಕರ ವಾತಾವರಣದಲ್ಲಿ 3 ಗಂಟೆಗೂ ಅಧಿಕ ಸಮಯ ನಡೆದ ಈ ಕಾರ್ಯಕ್ರಮದಲ್ಲಿ ಪಾಲಕರು, ಗಣ್ಯರು ಹಾಗೂ ಇತರರು ಕದಲದೆ ಕುಳಿತು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.