
ಬೀದರ್: ಅಕ್ಕ ಕೆಫೆಯಲ್ಲಿ ಗುಣಮಟ್ಟದ ಆಹಾರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ , ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಕ್ಕ ಕೆಫೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಿಸಲು ಅಕ್ಕ ಕೆಫೆ ಸಹಕಾರಿ. ₹12 ಲಕ್ಷ ಸರ್ಕಾರದ ನೆರವು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಬಂಡವಾಳ ಹಾಕಿ ಕೆಫೆ ನಡೆಸಿಕೊಂಡು ಹೋಗಬೇಕು’ ಎಂದರು.
ಬೀದರ್ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ‘ಕೆಫೆಯಲ್ಲಿ ವಿಶೇಷ ಹಾಗೂ ವಿವಿಧ ಬಗೆಯ ಭೋಜನ ವ್ಯವಸ್ಥೆ ಮಾಡಬೇಕು. ರಾಷ್ಟ್ರೀಯ ಜೀವನೋಪಾಯ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ 60 ಹಾಗೂ ರಾಜ್ಯ ಸರ್ಕಾರದಿಂದ ಶೇ 40 ಹಣವನ್ನು ಇದಕ್ಕೆ ನೀಡಲಾಗುತ್ತದೆ’ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿರೀಶ್ ಬದೋಲೆ ಮಾತನಾಡಿ, ‘ಅಕ್ಕ ಕೆಫೆ ಮೂಲಕ ಮಹಿಳೆಯರನ್ನು ಇನ್ನಷ್ಟು ಆರ್ಥಿಕ ಸದೃಢರಾಗಿಸಲು ಹಾಗೂ ಮಹಿಳಾ ಉದ್ಯಮಶೀಲತೆ ಹೆಚ್ಚಿಸುವುದು ಈ ಕೆಫೆಯ ಮುಖ್ಯ ಉದ್ದೇಶವಾಗಿದೆ. ಎರಡನೇ ಕೆಫೆ ಹುಮನಾಬಾದ್‌ನಲ್ಲಿ ಆರಂಭದ ಹಂತದಲ್ಲಿದೆ. ಈ ಕಫೆಯಲ್ಲಿ ಆನ್ಲೈನ್ ಯುಪಿಆಯ್ ಮೂಲಕ ಕೂಡ ಪಾವತಿ ಮಾಡಬಹುದಾಗಿದೆ’ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ , ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್, ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವಯ್ಯ ಸ್ವಾಮಿ, ಬೀದರ್ ತಾಲ್ಲೂಕು ಪಂಚಾಯಿತಿ ಇಒ ಮಾಣಿಕರಾವ ಪಾಟೀಲ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.