ADVERTISEMENT

ಬಸವಕಲ್ಯಾಣ: ಅನುಭವ ಮಂಟಪಕ್ಕೆ ಅನುದಾನದ ಕೊರತೆ ಆಗದಿರಲಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 5:03 IST
Last Updated 19 ಆಗಸ್ಟ್ 2025, 5:03 IST
ಬಸವಕಲ್ಯಾಣದಲ್ಲಿ ಭಾನುವಾರ ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಅವರು ಅನುಭವ ಮಂಟಪ ನಿರ್ಮಾಣ ಯೋಜನೆಯ ಸಮಾಲೋಚಕ (ಕನಸಲ್ಟಂಟ್) ಬಾಬಾಸಾಹೇಬ್ ಗಡ್ಡೆ ಅವರನ್ನು ಸನ್ಮಾನಿಸಿದರು 
ಬಸವಕಲ್ಯಾಣದಲ್ಲಿ ಭಾನುವಾರ ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಅವರು ಅನುಭವ ಮಂಟಪ ನಿರ್ಮಾಣ ಯೋಜನೆಯ ಸಮಾಲೋಚಕ (ಕನಸಲ್ಟಂಟ್) ಬಾಬಾಸಾಹೇಬ್ ಗಡ್ಡೆ ಅವರನ್ನು ಸನ್ಮಾನಿಸಿದರು    

ಬಸವಕಲ್ಯಾಣ: `ನಗರದಲ್ಲಿನ ಅನುಭವ ಮಂಟಪಕ್ಕೆ ಅನುದಾನದ ಕೊರತೆ ಆಗಬಾರದು. ವರ್ಷದೊಳಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವಂತೆ ಪ್ರಯತ್ನಿಸಬೇಕು' ಎಂದು ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಆಗ್ರಹಿಸಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಅನುಭವ ಮಂಟಪ ನಿರ್ಮಾಣ ಯೋಜನೆಯ ಸಮಾಲೋಚಕ ಬಾಬಾಸಾಹೆಬ್ ಗಡ್ಡೆ ಅವರ ವಿಶೇಷ ಸನ್ಮಾನ ಸಭೆಯಲ್ಲಿ ಅವರು ಮಾತನಾಡಿದರು.

`ಮಂಟಪದ ಅನುದಾನವನ್ನು ಸರ್ಕಾರ ₹742 ಕೋಟಿಗೆ ಹೆಚ್ಚಿಸಿರುವುದು ಸಂತಸ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಪ್ಪಟ ಬಸವಾನುಯಾಯಿ ಆಗಿದ್ದು ಹಣದ ಕೊರತೆ ಆಗದಂತೆ ನೋಡಿಕೊಳ್ಳುವರೆಂಬ ಭರವಸೆ ಇದೆ' ಎಂದು ಹೇಳಿದ್ದಾರೆ.

ADVERTISEMENT

`ನಾನು ಸ್ವತಃ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸಾಹಿತಿ ಗೋ.ರು.ಚನ್ನಬಸಪ್ಪ ನೇತೃತ್ವದ ಸಮಿತಿ ಉತ್ತಮ ರೂಪುರೇಷೆ ಸಿದ್ಧಪಡಿಸಿದೆ. ಸಮಾಲೋಚಕ ಬಾಬಾಸಾಹೆಬ್ ಗಡ್ಡೆ ಅವರ ನಿರ್ದೇಶನದಲ್ಲಿ ಬೃಹತ್ ಪ್ರಮಾಣದ ಮತ್ತು ಶಾಶ್ವತ ಕಾರ್ಯ ನಡೆಯುತ್ತಿದೆ. ಗುತ್ತಿಗೇದಾರರಾದ ಶಿರ್ಕೆ ಕಂಪೆನಿಯವರು ಗುಣಮಟ್ಟದ ಕೆಲಸ ಕೈಗೊಳ್ಳುತ್ತಿದ್ದಾರೆ' ಎಂದರು.

`ನಾನು ಶಾಸಕನಿದ್ದಾಗ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಬಸವಾದಿ ಶರಣರ ಕಾರ್ಯಕ್ಷೇತ್ರವಾದ ಕಲ್ಯಾಣದಲ್ಲಿನ ಶರಣ ಸ್ಮಾರಕಗಳ ಜೀರ್ಣೋದ್ಧಾರಕ್ಕೂ ಮಂಡಳಿ ರಚಿಸಬೇಕು ಎಂದು ಅಗ್ರಹಿಸಿದ್ದರಿಂದ ಆ ಕಾರ್ಯ ನೆರವೆರಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೂ.36 ಕೋಟಿ ಅನುದಾನ ನೀಡಿದ್ದರು. ಈಗಾಗಲೇ ರೂ.200 ಕೋಟಿಗೂ ಅಧಿಕ ಹಣ ಬಿಡುಗಡೆ ಆಗಿದ್ದು ಇನ್ನುಳಿದಿರುವ ಅನುದಾನ ಸಹ ಶೀಘ್ರ ಒದಗಿಸಬೇಕು. ಹಣದ ಕೊರತೆಯಿಂದ ಮಹತ್ವದ ಕೆಲಸ ನನೆಗುದಿಗೆ ಬೀಳುವಂತಾಗಬಾರದು' ಎಂದರು.

ಪ್ರಮುಖರಾದ ಸೂರ್ಯಕಾಂತ ಪಾಟೀಲ, ಮಲ್ಲಿಕಾರ್ಜುನ ಆಲಗೂಡೆ, ಭೀಮಶಾ ಶೆಟಗಾರ ಮತ್ತಿತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.