ADVERTISEMENT

370ನೇ ವಿಧಿ ರದ್ದು ಐತಿಹಾಸಿಕ ನಿರ್ಧಾರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 15:14 IST
Last Updated 25 ಸೆಪ್ಟೆಂಬರ್ 2019, 15:14 IST
ಬೀದರ್‌ನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು   

ಬೀದರ್: ‘ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವುದು ದೇಶಕ್ಕೆ ಸ್ವತಂತ್ರ ಬಂದ ನಂತರ ತೆಗೆದುಕೊಂಡ ಐತಿಹಾಸಿಕ ನಿರ್ಧಾರವಾಗಿದೆ. ಈ ಮೂಲಕ ಒಂದು ರಾಷ್ಟ್ರ, ಒಂದು ಕಾನೂನು ಘೋಷಣೆಗೆ ಪ್ರಾಮುಖ್ಯ ನೀಡಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿಯ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದ ಸುರಕ್ಷತೆಗೆ ಕೇಂದ್ರ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ’ ಎಂದರು.

‘ನಮ್ಮ ದೇಶದ ಪ್ರಧಾನಿಗೆ ವಿದೇಶದಲ್ಲಿ ಗೌರವ ನೀಡಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲೂ ಭವ್ಯ ಸ್ವಾಗತ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಜನಪರ ಯೋಜನೆಗಳ ಮೂಲಕ ಜನರಿಗೆ ಉತ್ತಮ ಆಡಳಿತ ಕೊಡಲಿದೆ. ಈ ದಿಸೆಯಲ್ಲಿ ನಾನು ಬಸವಕಲ್ಯಾಣದಿಂದ ಪ್ರವಾಸ ಆರಂಭಿಸಿರುವೆ’ ಎಂದು ತಿಳಿಸಿದರು.

‘ಅತಿವೃಷ್ಟಿ ಹಾಗೂ ಮಹಾಪೂರದಿಂದ ರಾಜ್ಯದ 17 ಜಿಲ್ಲೆಗಳಲ್ಲಿ ಸಮಸ್ಯೆ ಎದುರಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ನೆರೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಿದೆ. ಬರ ಎದುರಿಸುತ್ತಿರುವ ಜಿಲ್ಲೆಯ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಡಲಾಗುತ್ತಿದೆ’ ಎಂದರು.

‘ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಲಾಗಿದೆ. ಬಸವಕಲ್ಯಾಣದ ಅನುಭವ ಮಂಟಪಕ್ಕೆ ₹ 50 ಕೋಟಿ ಮಂಜೂರು ಮಾಡಿ ₹ 20 ಕೋಟಿ ಬಿಡುಗಡೆ ಮಾಡಲಾಗಿದೆ. ಹಿರಿಯರ, ಮಠಾಧೀಶರ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಲಾಗಿದೆ’ ಎಂದು ತಿಳಿಸಿದರು.

‘ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡುವ ಯೋಜನೆ ಇದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಮೊಟ್ಟೆ ಖರೀದಿ ಹಾಗೂ ಆಹಾರ ವಸ್ತುಗಳ ಖರೀದಿಯಲ್ಲಿ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಲಾಗಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶೈಲೇಂದ್ರ ಬೆಲ್ದಾಳೆ ಅವರು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸನ್ಮಾನಿಸಿದರು.

ಬಿಜೆಪಿ ಕಲಬುರ್ಗಿ ವಿಭಾಗೀಯ ಪ್ರಮುಖ ಈಶ್ವರಸಿಂಗ್‌ ಠಾಕೂರ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಕುಮಾರ ಕಾಂಗೆ, ಬಾಬುರಾವ್‌ ಕಾರಭಾರಿ, ಮುಖಂಡರಾದ ಡಿ.ಕೆ.ಸಿದ್ರಾಮ,ರೇವಣಸಿದ್ದಪ್ಪ ಜಲಾದೆ, ಗುರುನಾಥ ಜ್ಯಾಂತಿಕರ್, ರಾಜಕುಮಾರ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.