ಭಾಲ್ಕಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬಸ್ ನಿರ್ವಾಹಕ(ಕಂಡಕ್ಟರ್) ಶಶಿಕಾಂತ ರಾಮಚಂದ್ರ ಸೋನಕೇರಾ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಚಾಲಕರು, ನಿರ್ವಾಹಕರು ದಿಢೀರ್ ಪ್ರತಿಭಟನೆ ನಡೆಸಿದರು.
ಹಲ್ಲೆ ಮಾಡಿರುವ ಆರೋಪಿಯನ್ನು ಬಂಧಿಸಬೇಕು. ತಪ್ಪಿಲ್ಲದಿದ್ದರೂ ಬಸ್ ನಿರ್ವಾಹಕ ಹಾಗೂ ಚಾಲಕರ ಮೇಲೆ ಹಲ್ಲೆ ನಡೆದರೆ ಗ್ರಾಮಸ್ಥರು ಬೆಂಬಲಕ್ಕೆ ಬರಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಮಧ್ಯಾಹ್ನ ಒಂದು ಗಂಟೆ ವೇಳೆ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ವಿಭಾಗೀಯ ಸಂಚಾರ ಅಧಿಕಾರಿ ಐ.ಎಂ.ಬಿರಾದಾರ, ಕಾರ್ಮಿಕ ಕಲ್ಯಾಣ ಅಧಿಕಾರಿ ರಾಜಶೇಖರ ತಾಳಘಟಕರ, ವಿಭಾಗೀಯ ಭದ್ರತಾ ಅಧಿಕಾರಿ ಸಂಜೀವಕುಮಾರ, ಸಂಚಾರಿ ನಿರೀಕ್ಷಕ ಹಣಮಂತಪ್ಪ, ನಗರ ಪೊಲೀಸ್ ಠಾಣೆಯ ಸಿಪಿಐ ಬಿ.ಅಮರೇಶ ಅವರು ಸ್ಥಳಕ್ಕೆ ಭೇಟಿ ನೀಡಿ, ಮುಂದೆ ಈ ರೀತಿಯ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಕ್ರಮಕೈಗೊಳ್ಳಲಾಗುವುದು, ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಲಾಗುವುದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಯುನಿಯನ್ ಅಧ್ಯಕ್ಷ ಶಿವಕುಮಾರ ಗಾಯಕವಾಡ ಸೇರಿದಂತೆ ಇತರರು ಹಾಜರಿದ್ದರು.
ಘಟನೆ ವಿವರ: ಬಸ್ ಸಂಖ್ಯೆ ಕೆಎ-38 ಎಫ್-1088 ಮಧ್ಯಾಹ್ನ ನೀಲಮನಳ್ಳಿಯಿಂದ ಭಾಲ್ಕಿಗೆ ಬರುತ್ತಿದ್ದಾಗ ಜೋಳದಾಪಕಾ ಗ್ರಾಮದ ಬಸ್ ನಿಲುಗಡೆ ಸ್ಥಳದಲ್ಲಿ ಬಸ್ ನಿಂತಾಗ ಮೂವರು ಪ್ರಯಾಣಿಕರು ಬಸ್ ಹತ್ತಿದರು. ಬಸ್ ಹೊರಟ ನಂತರ ಅದೇ ಗ್ರಾಮದ ಹಲ್ಲೆ ಮಾಡಿದ ಆರೋಪಿ ಸಾಲುಮನ್ ಯಶಪ್ಪ, ಬಸ್ ನಿಲುಗಡೆಗಾಗಿ ಬಸ್ ಬಡಿದಿದ್ದಾನೆ. ಕೂಡಲೇ ಬಸ್ ನಿಲ್ಲಿಸಲಾಯಿತು. ಬಸ್ ಹತ್ತಿದವನೇ ನಿಮಗೆ ಐದು ನಿಮಿಷ ಬಸ್ ನಿಲ್ಲಿಸಲು ಆಗುವುದಿಲ್ಲವೇ ಎನ್ನತ್ತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಗ ನಾನು ಈ ರೀತಿಯ ಭಾಷೆ ಬಳಸಬೇಡಿ ಎಂದು ಮನವಿ ಮಾಡಲು ಮುಂದಾದಾಗ ‘ಕೈಯಲ್ಲಿನ ಖಡ್ಗದಿಂದ ಹಣೆಗೆ ಹೊಡೆದಿದ್ದಾನೆ’ ಎಂದು ನಿರ್ವಾಹಕ ಶಶಿಕಾಂತ ರಾಮಚಂದ್ರ ತಿಳಿಸಿದರು. ಈ ಸಂಬಂಧ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.