
ಔರಾದ್: ಭಕ್ತರ ಸಂಭ್ರಮ, ಭಕ್ತಿ ಭಾವ ಹಾಗೂ ಹರ್ಷೋದ್ಗಾರದ ನಡುವೆ ಇಲ್ಲಿಯ ಆರಾಧ್ಯ ದೇವ ಅಮರೇಶ್ವರ ರಥೋತ್ಸವ ಮಂಗಳವಾರ ನಸುಕಿನಲ್ಲಿ ನೆರವೇರಿತು.
ಬಣ್ಣ ಬಣ್ಣದ ಹೂ, ದೀಪಗಳಿಂದ ಸಿಂಗಾರಗೊಂಡ ರಥ ಅಮರೇಶ್ವರ ದೇವಸ್ಥಾನದಿಂದ ಹೊರಡುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಈ ವೇಳೆ ಪಟಾಕಿ ಸದ್ದು, ಆಕಾಶದಲ್ಲಿ ಬಣ್ಣ ಬಣ್ಣ ಚಿತ್ತಾರ ಭಕ್ತರು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ರಥೋತ್ಸವ ಸಾಗಿದ ಮಾರ್ಗದಲ್ಲಿ ಡಿಜೆ ಹಾಡಿನಲ್ಲಿ ಯುವಕರ ನೃತ್ಯ, ಹಲಗೆ ನೃತ್ಯ, ಭಕ್ತಿ ಗೀತೆ ಹಾಡಿ ಹರ ಹರ ಮಹಾದೇವ ಘೋಷಣೆ ಕೂಗುತ್ತಾ ಭಕ್ತಿ ವಾತಾವರಣ ನಿರ್ಮಾಣವಾಗಿತ್ತು. ಸೋಲಾಪುರದ ಪುರವಂತ ನೃತ್ಯ, ಮಕ್ಕಳ ಕೋಲಾಟ ಗಮನ ಸೆಳೆಯಿತು. ಮುಖ್ಯ ರಸ್ತೆಯಲ್ಲಿ ರಥ ಸಂಚರಿಸಿದಂತೆ ಮನೆ ಮನೆಗಳ ಮುಂದೆ ದೀಪಾರಾಧನೆ ಮಾಡಿ ಭಕ್ತರು ಅಮರೇಶ್ವರರಿಗೆ ಕಾಯಿ ಒಡೆದು, ಶಲ್ಯ ತೊಡಿಸಿ ತಮ್ಮ ಇಷ್ಟಾರ್ಥ ಪೂರೈಸಿದರು. ಅಮರೇಶ್ವರ ದೇವಸ್ಥಾನದಿಂದ ಅಗ್ನಿಕುಂಡದ ವರೆಗೆ ಸುಮಾರು ಐದು ಗಂಟೆಗೂ ಹೆಚ್ಚು ಕಾಲ ನಡೆದ ರಥೋತ್ಸವ ಭಕ್ತರು ನಿಂತಲ್ಲೇ ನಿಂತು ಕಣ್ತುಂಬಿಕೊಂಡರು.
ಈ ಬಾರಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ ಹಿನ್ನಲೆಯಲ್ಲಿ ರಥೋತ್ಸವ ಆರಂಭದಲ್ಲಿ ನೂಕು ನುಗ್ಗಲು ಆಯಿತು. ಇದನ್ನು ನಿಭಾಯಿಸಲು ಪೊಲೀಸರು ಹರ ಸಹಾಸ ಪಡಬೇಕಾಯಿತು.
ಸ್ಥಳೀಯರು ಆಗಮಿಸಿದ ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ತಹಶೀಲ್ದಾರ್ ಮಹೇಶ ಪಾಟೀಲ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‌ಐ ವಾಸೀಮ ಪಟೇಲ್ ಅವರು ಇಡೀ ರಾತ್ರಿ ಬಂದೋಬಸ್ತ್ ವ್ಯವಸ್ಥೆ ನೋಡಿಕೊಂಡರು.
ಶಾಸಕ ಪ್ರಭು ಚವಾಣ್, ಮುಖಂಡ ಬಸವರಾಜ ದೇಶಮುಖ, ಡಾ. ಶಂಕರರಾವ ದೇಶಮುಖ, ಸುನೀಲಕುಮಾರ ದೇಶಮುಖ, ಶಿವರಾಜ ಅಲ್ಮಾಜೆ, ರಾಮ ನರೋಟೆ, ಶರಣಪ್ಪ ಪಂಚಾಕ್ಷರಿ, ಧೊಂಡಿಬಾ ನರೋಟೆ, ಸುಭಾಷ ನಿರ್ಮಳೆ, ದೇವಿಪ್ರಸಾದ ಘೋಡ್ಕೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.