ADVERTISEMENT

ಔರಾದ್ | ಕೊಚ್ಚಿದ ಸೇತುವೆಗಳು, ಮನೆಗಳು ಜಲಾವೃತ

ಮುಂದುವರಿದ ಮಳೆ ಆರ್ಭಟ; ಸಂಕಷ್ಟದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:10 IST
Last Updated 29 ಆಗಸ್ಟ್ 2025, 5:10 IST
ಔರಾದ್‌ ತಾಲ್ಲೂಕಿನ ಕರಂಜಿ ಬಳಿ ಸೇತುವೆ ಮೇಲಿನಿಂದ ನೀರು ಹರಿದು ಹಾನಿಯಾದ ಪ್ರದೇಶಕ್ಕೆ ತಹಶೀಲ್ದಾರ್‌ ಮಹೇಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ತಾಲ್ಲೂಕು‌ ಪಂಚಾಯಿತಿ ಇಒ ಕಿರಣ ಪಾಟೀಲ ಹಾಗೂ ಅಮರ ಜಾಧವ ಇದ್ದರು
ಔರಾದ್‌ ತಾಲ್ಲೂಕಿನ ಕರಂಜಿ ಬಳಿ ಸೇತುವೆ ಮೇಲಿನಿಂದ ನೀರು ಹರಿದು ಹಾನಿಯಾದ ಪ್ರದೇಶಕ್ಕೆ ತಹಶೀಲ್ದಾರ್‌ ಮಹೇಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ತಾಲ್ಲೂಕು‌ ಪಂಚಾಯಿತಿ ಇಒ ಕಿರಣ ಪಾಟೀಲ ಹಾಗೂ ಅಮರ ಜಾಧವ ಇದ್ದರು   

ಔರಾದ್: ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆರೆ-ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಲ-ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.

ಔರಾದ್‌-ಚಿಂತಾಕಿ ನಡುವಣ ಯನಗುಂದಾ ಸೇತುವೆ ಕುಸಿದು ಸಂಪರ್ಕ ಕಡಿತವಾಗಿದೆ. ದಾಬಕಾ ಸೇರಿದಂತೆ ಗಡಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎಕಂಬಾ ಸೇತುವೆ ಗುರುವಾರ ಬೆಳಿಗ್ಗೆಯಿಂದಲೇ ಜಲಾವೃತಗೊಂಡಿದೆ. ಕರಂಜಿ ಬಳಿಯ ಬ್ರಿಜ್ಡ್‌ ಕಂ ಬ್ಯಾರೇಜ್ ಮುಳುಗಿದ್ದು, ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಬೊರಾಳ-ಮುಂಗನಾಳ ನಡುವಣ ಸೇತುವೆ ಕುಸಿದು ಬಿದ್ದಿದೆ. ಇಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದು ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ನಾಗೂರ (ಬಿ) ಸೇತುವೆಯೂ ಮುಳುಗಡೆಯಾಗಿದೆ.

ತೇಗಂಪುರ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಸುಂದಾಳ, ಇಟಗ್ಯಾಳ, ಬೋರಾಳ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹೆಚ್ಚಿನ ನೀರು ಬರುವ ಅಪಾಯ ಇರುವ ಕಡೆ ಮನೆಗಳ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಸೂಚನೆ ನೀಡಲಾಗಿದೆ.

ADVERTISEMENT

ಸತತ ಮಳೆಯಿಂದ ಕೆರೆ ಹಾಗೂ ನದಿಗಳು ಉಕ್ಕೇರಿದ್ದು, ಅವುಗಳ ಪಕ್ಕದ ಹೊಲಗಳಿಗೆ ನೀರು ನುಗ್ಗಿದೆ. ಗ್ರಾಮೀಣ ಪ್ರದೇಶದ ಅನೇಕ ಮನೆಗಳಿಗೂ ಹಾನಿ ಆಗಿದೆ. ಕೆಲ ಸೇತುವೆಗಳು ಕೊಚ್ಚಿಕೊಂಡು ಹೋಗಿ ಇಡೀ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ತಹಶೀಲ್ದಾರ್‌ ಮಹೇಶ ಪಾಟೀಲ ತಿಳಿಸಿದ್ದಾರೆ.

ಭಾರಿ ಮಳೆಯಿಂದಾಗಿ ಔರಾದ್‌ ತಾಲ್ಲೂಕಿನ ಬೋರಾಳ ಗ್ರಾಮದ ಸೋಪಾನ ಪಾಂಡ್ರೆ ಅವರ ಹತ್ತಿ ಬೆಳೆ ಜಲಾವೃತವಾಗಿದೆ
ಔರಾದ್‌ ತಾಲ್ಲೂಕಿನ ಮುಂಗನಾಳ-ಬೋರಾಳ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗೆ ಕಿತ್ತು ಹೋಗಿದೆ
ದಲಿತ ಸಂಘರ್ಷ ಸಮಿತಿ ಮುಖಂಡರು ಔರಾದ್ ಗ್ರೇಡ್-2 ತಹಶೀಲ್ದಾರ್‌ ಸಂಗಯ್ಯ ಸ್ವಾಮಿ ಅವರಿಗೆ ಮನವಿ ಸಲ್ಲಿಸಿ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿದರು
ಈ ಮಳೆಯಿಂದ ರಸ್ತೆ ಸೇತುವೆ ಹಾಗೂ ಗ್ರಾಮೀಣ ಭಾಗದ ಮನೆಗಳಿಗೆ ಹಾನಿಯಾಗಿದೆ. ಕೆಲ ಹೊಲಗಳಲ್ಲಿ ಮಣ್ಣು ಸಹಿತ ಬೆಳೆ ಕೊಚ್ಚಿಕೊಂಡು ಹೋಗಿದ್ದು ತಾಲ್ಲೂಕಿನ ರೈತರ ಸ್ಥಿತಿ ಶೋಚನೀಯವಾಗಿದೆ
ಮಹೇಶ ಪಾಟೀಲ ಔರಾದ್ ತಹಶೀಲ್ದಾರ್‌
ಔರಾದ್‌ ತಾಲ್ಲೂಕಿನ ರೈತರು ಪೂರ್ಣವಾಗಿ ಮುಂಗಾರು ಬೆಳೆಗಳ ಮೇಲೆ ಅವಲಂಬಿತರಾಗಿದ್ದಾರೆ. ಎರಡು ದಿನದಲ್ಲಿ ಸುರಿದ ಭಾರಿ ಮಳೆಯಿಂದ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು
ಪ್ರಕಾಶ ಬಾವುಗೆ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.