ADVERTISEMENT

ಔರಾದ್: ಮಾನೂರು ಗ್ರಾಮಸ್ಥರಿಂದ ಬಸ್‌ಗಾಗಿ ದಾರಿ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:41 IST
Last Updated 23 ಜನವರಿ 2026, 8:41 IST
ಔರಾದ್ ತಾಲ್ಲೂಕಿನ ಮಾನೂರ (ಕೆ) ಗ್ರಾಮಸ್ಥರು ಬಸ್ ಓಡಾಡಲು ದಾರಿ ಹಾಗೂ ಸ್ವಚ್ಛತೆ ಮಾಡಿಕೊಟ್ಟರು
ಔರಾದ್ ತಾಲ್ಲೂಕಿನ ಮಾನೂರ (ಕೆ) ಗ್ರಾಮಸ್ಥರು ಬಸ್ ಓಡಾಡಲು ದಾರಿ ಹಾಗೂ ಸ್ವಚ್ಛತೆ ಮಾಡಿಕೊಟ್ಟರು   

ಔರಾದ್: ಮಹಾರಾಷ್ಟ್ರ ಗಡಿಯಲ್ಲಿರುವ ತಾಲ್ಲೂಕಿನ ಮಾನೂರ (ಕೆ) ಗ್ರಾಮಸ್ಥರು ಸಾರಿಗೆ ಸಂಸ್ಥೆ ಬಸ್ ಬರುವಿಕೆಗಾಗಿ ದಶಕದಿಂದ ನಿರೀಕ್ಷೆಯಲ್ಲಿದ್ದಾರೆ.

ಈ ಊರಿನ ವಿದ್ಯಾರ್ಥಿಗಳು ಹೈಸ್ಕೂಲ್ ಶಿಕ್ಷಣ ಪಡೆಯಲು 5 ಕಿ.ಮೀ. ದೂರದ ನಾಗಮಾರಪಳ್ಳಿಗೆ ಕಾಲ್ನಡಿಗೆಯಲ್ಲಿ ಹೋಗಿ ಬರಬೇಕು. ಇದರಿಂದಾಗಿ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಪಾಲಕರು ನಿತ್ಯ ಸಂಜೆ ತಮ್ಮ ಮಕ್ಕಳು ಮನೆಗೆ ಸೇರುವ ತನಕ ಆತಂಕದಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಈ ಕುರಿತು ಪ್ರಜಾವಾಣಿ 2025ರ ನವೆಂಬರ್ 29ರ ಸಂಚಿಕೆಯಲ್ಲಿ ‘ಶಾಲೆಗೆ ತೆರಳಲು ನಿತ್ಯ 5 ಕಿ.ಮೀ. ನಡಿಗೆ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಸಾರಿಗೆ ಸಂಸ್ಥೆ ಅಧಿಕಾರಿಗಳು ಮರುದಿನವೇ ಮಾನೂರ (ಕೆ) ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದರು. ಆದರೆ ರಸ್ತೆ ಮಾರ್ಗದಲ್ಲಿ ಮರದ ಟೊಂಗೆಗಳು, ವಿದ್ಯುತ್ ತಂತಿ ಇವರು ಕಾರಣ ಬಸ್ ಓಡಿಸಲು ಸಾಧ್ಯವಾಗಿರಲಿಲ್ಲ.

ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚೆನ್ನಪ್ಪ ಉಪ್ಪೆ ಅವರ ಸೂಚನೆಯಂತೆ ಜೆಸ್ಕಾಂ ಅಧಿಕಾರಿಗಳು ರಸ್ತೆಗೆ ತಡೆಯಾದ ವಿದ್ಯುತ್ ತಂತಿ ತಕ್ಷಣ ಸ್ಥಳಾಂತರಿಸಿದರು. ಖುದ್ದು ಗ್ರಾಮಸ್ಥರೇ ಎದುರು ನಿಂತು ರಸ್ತೆ ಬದಿಯ ಮರದ ಟೊಂಗೆ ತೆರವುಗೊಳಿಸಿದರು. ಊರಲ್ಲಿ ಬಸ್ ತಿರುಗಲು ತೊಂದರೆಯಗಬಾರದೆಂದು ತಿಪ್ಪೆಗುಂಡಿಗಳು ತೆಗೆದು ಸ್ವಚ್ಛ ಮಾಡಿದ್ದು, ಈಗ ಬಸ್ ಬರುವಿಕೆಗಾಗಿ ಕಾಯುತ್ತಿದ್ದಾರೆ.

ADVERTISEMENT
ಮಾನೂರ (ಕೆ) ಗ್ರಾಮಕ್ಕೆ ಬಸ್ ಓಡಾಡಿಸಲು ಆಗುವ ಅಡೆತಡೆ ನಿವಾರಣೆ ಮಾಡಲಾಗಿದೆ. ಹೀಗಾಗಿ ನಾಳೆಯಿಂದ ಬಸ್ ಓಡಿಸುವಂತೆ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಗೋವಿಂದರಾವ ಕೊಳೆಕರ್ ಗ್ರಾಪಂ. ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.