ADVERTISEMENT

ಬಸವಕಲ್ಯಾಣ: ಮತ್ತೆ 12 ಜನರಿಗೆ ಕೋವಿಡ್‌ ಸೋಂಕು

ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳುತ್ತಿರುವವರ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 28 ಮೇ 2020, 15:22 IST
Last Updated 28 ಮೇ 2020, 15:22 IST
ಬಸವಕಲ್ಯಾಣದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಮಾಹಿತಿ ಪಡೆದ ಶಾಸಕ ಬಿ.ನಾರಾಯಣರಾವ್
ಬಸವಕಲ್ಯಾಣದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಮಾಹಿತಿ ಪಡೆದ ಶಾಸಕ ಬಿ.ನಾರಾಯಣರಾವ್   

ಬೀದರ್: ಬಸವಕಲ್ಯಾಣ ತಾಲ್ಲೂಕಿನಲ್ಲಿ ಮೂವರು ಮಹಿಳೆಯರು ಸೇರಿ ಒಟ್ಟು 12 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120ಕ್ಕೆ ಏರಿದೆ. ಬಸವಕಲ್ಯಾಣ ತಾಲ್ಲೂಕಿನಲ್ಲಿ ಒಂದು ವಾರದ ಅವಧಿಯಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆ ಕಂಡಿದೆ.

ಬಸವಕಲ್ಯಾಣ ತಾಲ್ಲೂಕಿನ 5 ಗ್ರಾಮಗಳ 12 ಜನರಿಗೆ ಕೋವಿಡ್‌ 19 ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಬಂದಿರುವ ಗೋಕುಳ ಗ್ರಾಮದ ಮೂವರಿಗೆ ಅಂದರೆ 55 ವರ್ಷದ ಮಾವ , 35 ಹಾಗೂ 30 ವರ್ಷದ ಸೊಸೆಯಂದಿರಿಗೆ ಸೋಂಕು ತಗುಲಿದೆ.

ಕಿಟ್ಟಾ ಗ್ರಾಮದ 35 ವರ್ಷದ ಚಿಕ್ಕಮ್ಮ ಹಾಗೂ 18 ವರ್ಷದ ಮಗಳಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಗೆ ಸಾಗಿಸಲಾಗಿದೆ. ಮಂಠಾಳದ ಒಂದೇ ಕುಟುಂಬದ 22, 24, 17 ವರ್ಷದ ಯುವಕರಿಗೆ ಸೋಂಕು ತಗುಲಿದೆ.

ADVERTISEMENT

ರಾಜೇಶ್ವರದ 20 ವರ್ಷದ ಯುವಕ, 10 ಹಾಗೂ 6 ವರ್ಷದ ಬಾಲಕ, ಹತ್ಯಾಳದ 55 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 20 ವರ್ಷದ ಯುವಕ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ತೆರಳಿದ್ದರು. ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಮೇಲ್ನೋಟಕ್ಕೆ ಲಕ್ಷಣಗಳು ಕಂಡು ಬರದಿದ್ದರೂ ವೈದ್ಯಕೀಯ ವರದಿ ಪಾಸಿಟಿವ್ ಬಂದಿದೆ.

ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆಯಿಂದ ಬಂದ ಎಲ್ಲರನ್ನೂ ಸರ್ಕಾರಿ ಪ್ರಾಥಮಿಕ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿದೆ. ಬಸವಕಲ್ಯಾಣ ತಾಲ್ಲೂಕಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲಾ ಆಸ್ಪತ್ರೆ ವಿಶೇಷ ನಿಗಾ ಘಟಕದಲ್ಲಿದ್ದ 24 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಮಂಗಳವಾರ 21,606 ಜನರ ತಪಾಸಣೆ ನಡೆಸಲಾಗಿದೆ. 1,316 ಜನರು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಾರೆ. ಇನ್ನೂ 7,764 ಜನರ ವೈದ್ಯಕೀಯ ವರದಿ ಬರಬೇಕಿದೆ.

ಚಿಟಗುಪ್ಪದ ಮಹಿಳೆ ಸಾವು

ಬೀದರ್‌ಜಿಲ್ಲೆಯಲ್ಲಿ ಗುರುವಾರ ಶಂಕಿತ ಕೋವಿಡ್‌ 19 ಸೋಂಕಿನಿಂದಾಗಿ ಚಿಟಗುಪ್ಪದ 48 ವರ್ಷದ ಮಹಿಳೆ ಮೃತಪಟ್ಟಿದ್ದಾಳೆ.
ಚಿಟಗುಪ್ಪದ ಫಾತ್ಮಾಪುರದಲ್ಲಿ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿತ್ತು. ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅವರು ಪಾರ್ಶ್ವವಾಯುದಿಂದ ಸಹ ಬಳಲುತ್ತಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕೋವಿಡ್ 19 ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ಮಾಡುವ ಮಾದರಿಯಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.