
ಭಾಲ್ಕಿ: ತಾಲ್ಲೂಕಿನ ಮೊರಂಬಿ ಗ್ರಾಮದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬಸವ ಉತ್ಸವ, ಮೊರಂಬಿ ಉತ್ಸವ-2026ರ ಮೂರು ದಿನಗಳ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಗುತ್ತಿದೆ ಎಂದು ಮೊರಂಬಿಯ ಬಸವ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ದಿನಗಳ ಕಾರ್ಯಕ್ರಮಕ್ಕೆ ಸುಸಜ್ಜಿತ ವೇದಿಕೆ ಸಿದ್ಧವಾಗಿದ್ದು, ಬರುವ ಭಕ್ತಾದಿಗಳಿಗೆ ಸ್ವಾಗತಿಸಲು ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ.
ಫೆ.8 ರಂದು ಬೆಳಿಗ್ಗೆ 8.30 ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ನಂದಿ ಬಸವೇಶ್ವರ ದೇವಸ್ಥಾನದವರೆಗೆ ನಂದಿ ಬಸವೇಶ್ವರರ ಭವ್ಯ ಮೆರವಣಿಗೆ, ಮಹಿಳೆಯರಿಂದ ಕುಂಭಮೇಳ ನಡೆಯುವುದು. ನಂತರ ಧ್ವಜಾರೋಹಣ ನೆರವೇರಿಸಿ, ಮಧ್ಯಾನ್ಹ 12.30 ಗಂಟೆಗೆ ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ನಿವೃತ್ತ ಶಿಕ್ಷಕ ಚನ್ನಬಸಪ್ಪ ಪತಂಗೆ ಷಟಸ್ಥಳ ಧ್ವಜಾರೋಹಣ ನಡೆಸಿಕೊಡುವರು. ಸಂಜೆ 6.30 ಗಂಟೆಗೆ ನೀನಾರೆಂಬುದು ತಿಳಿ, ದೇಹವೆಂಬ ದೇವಾಲಯವ ಕೆಡಿಸಬೇಡ ಎನ್ನುವ ವಿಷಯದ ಮೇಲೆ ಗೋರ್ಟಾದ ವೇದಮೂರ್ತಿ ವಿಶ್ವರಾಧ್ಯ ಸ್ವಾಮಿಗಳಿಂದ ಅಧ್ಯಾತ್ಮಿಕ ಪ್ರವಚನ ನಡೆಯುವುದು.
ಫೆ.9 ರಂದು ಮಹಿಳಾ ಸಶಸ್ತ್ರೀಕರಣ ಹಾಗು ಮಕ್ಕಳಲ್ಲಿ ಸಂಸ್ಕಾರ, ಯುವಗೋಷ್ಠಿ ಹಾಗೂ ರೈತ ಸಮಾವೇಶ, ದುಡಿದುಣ್ಣು, ಹಂಚಿತಿನ್ನು, ಉಪಕಾರಿಯಾಗಿ ಬಾಳು ಎನ್ನುವ ವಿಷಯದ ಗೋಷ್ಠಿಗಳು ನಡೆಯಿವೆ.
ಫೆ.10ರಂದು ಬೆಳಿಗ್ಗೆ 8.30 ಗಂಟೆಗೆ ವಚನ ವಿಜಯೋತ್ಸವದ ಭವ್ಯ ಮೆರವಣಿಗೆ ನಡೆಯುವುದು. ನಂತರ ನಡೆಯುವ ಧರ್ಮಸಭೆಯ ದಿವ್ಯ ಸಾನಿಧ್ಯ ಗೋರಟಾದ ಪ್ರಭುದೇವ ಸ್ವಾಮಿಜಿ ವಹಿಸುವರು. ಬಸವಕಲ್ಯಾಣ ಅನುಭವ ಮಂಟಪದ ಶಿವಾನಂದ ಸ್ವಾಮೀಜಿ ದಿವ್ಯ ಸಮ್ಮುಖ ವಹಿಸುವರು. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 6.30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.