
ಬಸವಕಲ್ಯಾಣ: ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಬುಧವಾರ ಸಂವಿಧಾನ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು.
ವಾದ್ಯ ಮೇಳದವರು, ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ರಾಜೇಶ್ವರ ಡಾ.ಅಂಬೇಡ್ಕರ್ ವಸತಿ ಶಾಲೆ ಮಕ್ಕಳು ಪ್ರದರ್ಶಿಸಿದ ಲೇಜೀಮ್ ನೃತ್ಯ ಗಮನಸೆಳೆಯಿತು.
ಕೋಟೆ ಹತ್ತಿರ ಶಾಸಕ ಶರಣು ಸಲಗರ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಡಾ.ಅಂಬೇಡ್ಕರ್ ವೃತ್ತ ಮತ್ತು ತೇರು ಮೈದಾನದಲ್ಲಿನ ಸಭಾಭವನ ವರೆಗೆ ಮೆರವಣಿಗೆ ನಡೆಯಿತು. ವಾಹನದಲ್ಲಿ ಸಂವಿಧಾನದ ಪ್ರತಿಕೃತಿ ಇಡಲಾಗಿತ್ತು.
ಬಳಿಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪ ಉತ್ತಮ, ಉಪನ್ಯಾಸಕ ದೇವಿದಾಸ ತುಮಕುಂಟೆ ಮಾತನಾಡಿದರು.
ಇಒ ರಮೇಶ ಸುಲ್ಫಿ, ಪೌರಾಯುಕ್ತ ರಾಜೀವ ಬಣಕಾರ್, ಬಿಇಒ ಸಿದ್ದವೀರಯ್ಯ ರುದನೂರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿ ಗಣತಿಯ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಐವರು ಗಣತಿದಾರರಿಗೆ ಹಾಗೂ ಸಂವಿಧಾನ ಪೀಠಿಕೆ ಕುರಿತು ನಡೆದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಮಾಣಪತ್ರ ವಿತರಿಸಲಾಯಿತು. ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.