ADVERTISEMENT

ಬಸವಕಲ್ಯಾಣ | ಸ್ತ್ರೀಯರ ರಕ್ಷಣೆ ತ್ವರಿತ ಕಾರ್ಯಾಚರಣೆಗೆ ‘ಅಕ್ಕ ಪಡೆ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:14 IST
Last Updated 6 ಜನವರಿ 2026, 4:14 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಅಕ್ಕ ಪಡೆಯ ವಾಹನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಲಹೆಗಾರರಾದ ಶೈನಿ ಪ್ರದೀಪ ಗುಂಟಿ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಅಕ್ಕ ಪಡೆಯ ವಾಹನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಲಹೆಗಾರರಾದ ಶೈನಿ ಪ್ರದೀಪ ಗುಂಟಿ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಸ್ತ್ರೀಯರ ರಕ್ಷಣೆಗಾಗಿ ಮಿಲಿಟ್ರಿ ಸಮವಸ್ತ್ರವಿರುವ ಮಹಿಳಾ ಪೊಲೀಸರ ತಂಡ ‘ಅಕ್ಕ ಪಡೆ’ಯು ತ್ವರಿತ ಕಾರ್ಯಾಚರಣೆ ನಡೆಸಿ ಸಂಕಟದಿಂದ ಪಾರು ಮಾಡುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯಮಟ್ಟದ ಯೋಜನಾ ಸಲಹೆಗಾರ ಶೈನಿ ಪ್ರದೀಪ ಗುಂಟಿ ಹೇಳಿದರು.

ನಗರದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಅಕ್ಕ ಪಡೆಯ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ‘ಅಕ್ಕ ಪಡೆ’ ರಚಿಸಿದ್ದು ರಾಜ್ಯಾದ್ಯಂತ ಇದಕ್ಕೆ ಮನ್ನಣೆ ಸಿಕ್ಕಿದೆ. ಈ ಮೊದಲು ಮಹಿಳೆಯರ ಸಂರಕ್ಷಣೆಗೆ ಅನೇಕ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದರೂ ಅಕ್ಕ ಪಡೆಯ ವ್ಯವಸ್ಥೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಬೀದರ್ ನಂತರ ಬಸವಕಲ್ಯಾಣದಲ್ಲಿ ಬೋಲೆರೋ ಮಾದರಿಯ ವಾಹನ ಒದಗಿಸಲಾಗುತ್ತಿದೆ’ ಎಂದರು.

ADVERTISEMENT

‘ನಗರದಲ್ಲಿ ಶಿಕ್ಷಣ ಕೇಂದ್ರಗಳು ಹೆಚ್ಚಿಗಿವೆ. ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರವೂ ಇದಾಗಿದೆ. ಬಾಲ್ಯವಿವಾಹ, ವಿದ್ಯಾರ್ಥಿನಿಯರಿಗೆ ಕಾಮುಕರ ಕಾಟ, ಶಾಲಾ ಕಾಲೇಜುಗಳ ಆವರಣದಲ್ಲಿನ ರ್‍ಯಾಗಿಂಗ್, ತಂಬಾಕು ಮತ್ತಿತರೆ ಮಾದಕ ವಸ್ತುಗಳ ಉಪಯೋಗಕ್ಕೆ ಒತ್ತಾಯಿಸಿ ದುಶ್ಚಟ ಕಲಿಸುವುದು ಮುಂತಾದ ಸಮಸ್ಯೆಗಳನ್ನು ಈ ಪಡೆಗೆ ಹೇಳಿಕೊಳ್ಳಬಹುದು’ ಎಂದರು.

ಈ ಸಂದರ್ಭದಲ್ಲಿ ಶೈನಿ ಪ್ರದೀಪ ಗುಂಟಿ ಅವರು ಮಕ್ಕಳಿಗೆ ಅಕ್ಕ ಅಂದರೆ ಭರವಸೆ, ಅಕ್ಕ ಅಂದರೆ ರಕ್ಷಣೆ, ಅಕ್ಕ ಅಂದರೆ ಧೈರ್ಯ, ಅಕ್ಕ ಅಂದರೆ ಆಸರೆ ಎಂಬ ಧ್ಯೇಯ ವಾಕ್ಯವನ್ನು ಬೋಧಿಸಿದರು.

ಸಿಪಿಐ ಅಲಿಸಾಬ್, ಸಿಡಿಪಿಒ ಗೌತಮ ಶಿಂಧೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಮಣಿ ಮಠಪತಿ ಮಾತನಾಡಿದರು. ನಗರಸಭೆ ಆಯುಕ್ತ ರಾಜೀವ ಬಣಕಾರ್, ಸಬ್ ಇನಸ್ಪೇಕ್ಟರುಗಳಾದ ಚಂದ್ರಶೇಖರ ನಾರಾಯಣಪುರೆ, ಸುರೇಶ ಹಜ್ಜರಗಿ, ಸಿದ್ದೇಶ್ವರ, ಸುಜಾತಾ, ಸುವರ್ಣಾ ಮತ್ತಿತರರು ಉಪಸ್ಥಿತರಿದ್ದರು.

ಅಕ್ಕ ಪಡೆಯಿಂದ ರಕ್ಷಣಾ ಪ್ರಾತ್ಯಕ್ಷಿಕೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ನಾಲ್ಕು ಚಕ್ರಗಳ ವಾಹನಕ್ಕೆ ಚಾಲನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.