ಬಸವಕಲ್ಯಾಣ: ಸಿಂಗರಿಸಿದ ಚಕ್ಕಡಿಯ ನೊಗ ಹೊತ್ತುಕೊಂಡು ಜೋಡೆತ್ತುಗಳು ಓಡುತ್ತಿದ್ದರೆ ರಸ್ತೆಯುದ್ದಕ್ಕೂ ನೆರೆದಿದ್ದ ಯುವಕರು ಕುಣಿದು ಕುಪ್ಪಳಿಸಿ, ಸಿಳ್ಳೆ ಬಾರಿಸಿ, ಕೇಕೆ ಹಾಕಿ ಹುರಿದುಂಬಿಸಿದರು. ಒಂದಾದಮೇಲೊಂದು ಅನೇಕ ಚಕ್ಕಡಿಗಳು ಓಡಿದವು.
–ತಾಲ್ಲೂಕಿನ ರಾಜೇಶ್ವರದಲ್ಲಿ ಹೋಳ ಹಬ್ಬದ ಅಂಗವಾಗಿ ಶುಕ್ರವಾರ ಸಂಜೆ ಆಯೋಜಿಸಿದ್ದ ಚಕ್ಕಡಿ ಓಟದ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯವಿದು.
ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಹಳೆಯ ಪಂಚಾಯಿತಿ ಕಟ್ಟಡದ ಎದುರಿನ ಉತ್ತರ- ದಕ್ಷಿಣವಾಗಿರುವ ರಸ್ತೆಯಲ್ಲಿ ಚಕ್ಕಡಿಗಳನ್ನು ಓಡಿಸಲಾಯಿತು. ಚಕ್ಕಡಿಗಳಿಗೆ ಬಣ್ಣ ಹಚ್ಚಿ, ಬಲೂನ್, ಬಣ್ಣಬಣ್ಣದ ಪರಾರಿ, ವಿವಿಧ ಪ್ರಕಾರದ ಧ್ವಜಗಳನ್ನು ಕಟ್ಟಿ ತರಲಾಗಿತ್ತು. ರೈತರು ಚಕ್ಕಡಿಗಳ ಮೇಲೆ ನಿಂತುಕೊಂಡು ಬಾರುಕೋಲು ಬಾರಿಸುತ್ತ ಎತ್ತುಗಳನ್ನು ಓಡಿಸಿದರು.
ಬಹಳಷ್ಟು ಚಕ್ಕಡಿಗಳ ಹಿಂದೆ ಮತ್ತು ಮುಂದೆ ನಾಲ್ಕೈದು ಜನರು ಎತ್ತುಗಳ ಮೈಸವರುತ್ತ, ಕೇಕೆ ಹಾಕುತ್ತ ಓಡಿರುವುದು ಸಹ ಕಂಡು ಬಂತು. ರಸ್ತೆ ಪಕ್ಕದಲ್ಲಿ, ಮನೆಗಳ ಮಾಳಿಗೆಯ ಮೇಲೆ ಜನ ಕಿಕ್ಕಿರಿದು ಸೇರಿ ಈ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಂಡರು. ಯುವಕ ಯುವತಿಯರೇ ಅಧಿಕವಿದ್ದರು. ಕೆಲ ಎತ್ತುಗಳು ಜೋರಾಗಿ ಓಡಿದರೆ, ಕೆಲವು ಓಡಲಾಗದೆ ಸಾವಕಾಶವಾಗಿ ಬಂದವು. ಕೆಲವು ನಿಂತಲ್ಲೇ ನಿಂತುಕೊಂಡು ಮುಗ್ಗರಿಸಿ ಬಿದ್ದು ನೋಡುಗರು ನಗುವಂತೆ ಮಾಡಿದವು. ನೆರೆದಿದ್ದ ಜನರ ಮೇಲೂ ಎತ್ತುಗಳು ನುಗ್ಗಿದ್ದವು. ಇಕ್ಕಟ್ಟಾದ ಜಾಗ ಇದ್ದುದರಿಂದ ಜನರು ನೆಲಕ್ಕೆ ಬೀಳುವಂತಾಯಿತು. ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಹೋಳ ಹಬ್ಬ ರೈತರ ಹಬ್ಬ. ಗ್ರಾಮಸ್ಥರು ಕಾರಹುಣ್ಣಿಮೆಯಂತೆಯೇ ಎತ್ತು ಮತ್ತಿತರೆ ಜಾನುವಾರುಗಳ ಮೈ ತೊಳೆದು, ಕೋಡುಗಳಿಗೆ ಬಣ್ಣ ಹಚ್ಚಿ, ಮತಾಟಿ, ಬಾಸಿಂಗ್, ಬಗಡಾ, ಗಂಟೆಸರ ಕಟ್ಟಿ, ಮೈಮೇಲೆ ಬಟ್ಟೆಯ ಝೂಲಾ ಹಾಕಿ ಕುಟುಂಬಸಮೇತರಾಗಿ ಪೂಜೆ ಸಲ್ಲಿಸಿದರು. ಕೋಡುಬಳೆ ತೊಡಿಸಿ, ಹೋಳಿಗೆ, ಅನ್ನದ ನೈವೇದ್ಯ ಅರ್ಪಿಸಿದರು. ನಂತರ ಸಂಜೆ ಎಲ್ಲ ಚಕ್ಕಡಿಗಳನ್ನು ಮೆರವಣಿಗೆಯ ಮೂಲಕ ಸ್ಪರ್ಧಾ ಸ್ಥಳಕ್ಕೆ ತರಲಾಯಿತು.
ಪ್ರಥಮವಾಗಿ ಭಾಗವಹಿಸುವವರ ಹೆಸರು ನೋಂದಾಯಿಸಿಕೊಂಡು ಚಕ್ಕಡಿಗಳಿಗೆ ಅವರವರ ಸಂಖ್ಯೆಯ ಫಲಕಗಳನ್ನು ಅಳವಡಿಸಲಾಯಿತು. ಬಳಿಕ ಉತ್ತರಾಭಿಮುಖವಾಗಿ ಇಳಿಜಾರಿನಲ್ಲಿ ಒಂದರನಂತರ ಮತ್ತೊಂದರಂತೆ ಚಕ್ಕಡಿಗಳನ್ನು ಓಡಿಸಲಾಯಿತು.
ಪರಾರಿ ಚಕ್ಕಡಿ ಓಡಿಸುವ ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತಿದ್ದ ಅನೇಕ ಯುವಕರು ಚಕ್ಕಡಿಗಳು ಓಡುವಾಗ ಬಾಯಿಯಲ್ಲಿ ಪ್ಲಾಸ್ಟಿಕ್ ಪುಂಗಿ ಹಿಡಿದು ಊದಿ ಪುಂಯಿ ಪುಂಯಿ ಎಂದು ನಾದ ತೆಗೆದು ಹುರಿದುಂಬಿಸಿದರು. ಹೀಗಾಗಿ ಎಲ್ಲೆಡೆ ಕಿವಿಗಡಚಿಕ್ಕುವಂತೆ ಪುಂಗಿನಾದ ಕೇಳಿಬಂತು. ಹಲಗೆ ವಾದನ ಬ್ಯಾಂಡ್ ಬಾಜಾದವರೂ ಇದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮತ್ತು ಸ್ಪರ್ಧಾ ಸ್ಥಳದಲ್ಲಿ ಹಳದಿ ಪರಾರಿಗಳ ತೋರಣ ಕಟ್ಟಲಾಗಿತ್ತು. ರಾಜಕೀಯ ಮುಖಂಡರಿಂದ ಸ್ವಾಗತ ಕೋರುವ ಬ್ಯಾನರ್ ಪೋಸ್ಟರ್ ಫ್ಲೆಕ್ಸ್ ಕಟೌಟ್ ಸಹ ಕಟ್ಟಲಾಗಿತ್ತು.
ಓಟದ ನಂತರ ಸಂಜೆ ಗ್ರಾಮದ ಪ್ರಮುಖರು ಹಾಗೂ ಜನರು ಮೆರವಣಿಗೆಯ ಮೂಲಕ ಹನುಮಾನ ದೇವಸ್ಥಾನದ ಆವರಣಕ್ಕೆ ಬಂದರು. ಇಲ್ಲಿ ಕ್ರಮವಾಗಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು. ಕೆಲವರಿಗೆ ಸಮಾಧಾನಕರ ಬಹುಮಾನ ಸಹ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.