ADVERTISEMENT

ಬಸವಕಲ್ಯಾಣ: ದುರವಸ್ಥೆಯಲ್ಲಿ ಶರಣರ ಉಬ್ಬುಚಿತ್ರಗಳು

ನಗರ ಪ್ರವೇಶಿಸುವಲ್ಲಿನ ಮಹಾದ್ವಾರ ಬಳಿ ತಲೆಎತ್ತಿದ ಗೂಡಂಗಡಿಗಳು, ಉಬ್ಬು ಚಿತ್ರಗಳ ಬಳಿ ಸಾಮಗ್ರಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:08 IST
Last Updated 9 ಆಗಸ್ಟ್ 2025, 6:08 IST
ಬಸವಣ್ಣನವರ ಉಬ್ಬು ಚಿತ್ರದ ಎದುರ ಸಾಮಗ್ರಿ ಇಟ್ಟಿರುವುದು
ಬಸವಣ್ಣನವರ ಉಬ್ಬು ಚಿತ್ರದ ಎದುರ ಸಾಮಗ್ರಿ ಇಟ್ಟಿರುವುದು   

ಬಸವಕಲ್ಯಾಣ: ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವಲ್ಲಿನ ಮಹಾದ್ವಾರದ ಬಳಿಯ ಜಾಗದಲ್ಲಿ ಅನೇಕ ಡಬ್ಬಾ ಅಂಗಡಿಗಳು ತಲೆಎತ್ತಿದ್ದು, ಇದರಿಂದ ಶರಣರ ಉಬ್ಬು ಚಿತ್ರಗಳು ಕಾಣದಂತಾಗಿವೆ.

12ನೇ ಶತಮಾನದಲ್ಲಿ ಬಸವಾದಿ ಶರಣರು ಕಾರ್ಯಗೈದ ಸ್ಥಳ ಇದಾಗಿದೆ. ಅಂದಿನ ಗತವೈಭವ ಮರುಕಳಿಸುವಂತಾಗಲು ಸರ್ಕಾರದಿಂದ ನಗರದಲ್ಲಿ ₹742 ಕೋಟಿ ವೆಚ್ಚದ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಅದಕ್ಕೂ ಮೊದಲು ವಿವಿಧ ಶರಣರ 19 ಸ್ಮಾರಕಗಳ ಜೀರ್ಣೋದ್ಧಾರ ನಡೆದಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಈ ಎಲ್ಲ ಸ್ಥಳಗಳಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದ್ದು, ಮಂಡಳಿ ವೆಚ್ಚದಲ್ಲೇ ಸಿಮೆಂಟ್‌ನಿಂದ ಉಬ್ಬು ಚಿತ್ರಗಳನ್ನು ನಿರ್ಮಿಸಲಾಗಿದೆ.

ನಗರ ಪ್ರವೇಶದ ಸ್ಥಳ ಆಕರ್ಷಕವಾಗಿರಲಿ ಎಂಬ ಉದ್ದೇಶದಿಂದ 107 ಅಡಿ ಎತ್ತರದ ಬೃಹತ್ ಮಹಾದ್ವಾರ ಕಟ್ಟಲಾಗಿದೆ. ದ್ವಾರದ ಮಧ್ಯದಲ್ಲಿ ಬಸವೇಶ್ವರರ ಅಶ್ವಾರೂಢ ಪ್ರತಿಮೆ ಇದೆ. ಅದರ ಆಚೆ ಈಚೆ ಹೋಗುವುದಕ್ಕೆ ಮತ್ತು ಬರುವುದಕ್ಕಾಗಿ ಪ್ರತ್ಯೇಕ ರಸ್ತೆಗಳಿವೆ. ಇದರ ಎದುರಿಗೆ ದಕ್ಷಿಣದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಬರುವಾಗ ರಸ್ತೆಯ ಎರಡೂ ಕಡೆಗಳಲ್ಲಿ ಎತ್ತರದ ಆವರಣಗೋಡೆ ಕಟ್ಟಿ ಒಳಗೆ ಯಾರಿಗೂ ಅಂಗಡಿ ಹಾಕಲು ಬಾರದಂತೆ ಹಾಗೂ ಇತರೆ ವ್ಯಾಪಾರ ನಡೆಯದಂತೆ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಎರಡೂ ಕಡೆಯ ಕಾಂಪೌಂಡ್‌ಗೆ ಬಸವಣ್ಣ, ಚನ್ನಬಸವಣ್ಣ, ಅಕ್ಕನಾಗಮ್ಮ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ನುಲಿ ಚಂದಯ್ಯ, ಮಡಿವಾಳ ಮಾಚಿದೇವ ಮುಂತಾದ ಶರಣರ ಹಾಗೂ ಅವರು ಕೈಗೊಂಡಿದ್ದ ಕಾಯಕ ಪ್ರದರ್ಶಿಸುವ ಉಬ್ಬು ಚಿತ್ರಗಳಿವೆ. ಆದರೆ, ಈಚೆಗೆ ಆವರಣಗೋಡೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ಡಬ್ಬಾ ಹಾಗೂ ಚಿಕ್ಕ ಚಿಕ್ಕ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದ್ದರಿಂದ ಈ ಚಿತ್ರಗಳು ಮರೆಯಾಗಿವೆ.

ದೂರದೂರದ ಪ್ರವಾಸಿಗರು ಬಂದು ಇಲ್ಲಿ ಇಳಿದಾಗ ಪ್ರಥಮವಾಗಿ ಅವರಿಗೆ ಉಬ್ಬುಚಿತ್ರಗಳ ಮೂಲಕ ಶರಣರ ದರ್ಶನ ಆಗಲಿ ಎಂಬ ಸದುದ್ದೇಶದಿಂದ ಈ ಕಾರ್ಯ ನಡೆದಿತ್ತು. ಆದರೆ, ಈಗ ಬರೀ ಅಂಗಡಿಗಳೇ ಕಾಣುತ್ತಿವೆ. ಕೆಲ ತಿಂಗಳಲ್ಲಿ ಮಹಾದ್ವಾರದವರೆಗೂ ಅಂಗಡಿಗಳು ವ್ಯಾಪಿಸುವ ಸಾಧ್ಯತೆ ಇದೆ. ಹೀಗಾದರೆ ಒಂದೂ ಉಬ್ಬು ಚಿತ್ರ ಯಾರಿಗೂ ಗೋಚರಿಸುವುದಿಲ್ಲ. ಮಹಾದ್ವಾರದ ಅಂದವೂ ಹಾಳಾಗಲಿದೆ. ವಾಹನಗಳ ಸಂಚಾರಕ್ಕೂ ತೊಂದರೆಯಾಗಲಿದೆ ಎಂಬುದು ಸ್ಥಳೀಯರ ಅಭಿಮತ.

‘ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಇಲ್ಲಿನ ಅತಿಕ್ರಮಣ ತೆರವುಗೊಳಿಸಬೇಕು. ಪಾದಚಾರಿ ಮಾರ್ಗದಲ್ಲಿ ಯಾವುದೇ ಚಟುವಟಿಕೆಗಳು ನಡೆಯದಂತೆ ಕ್ರಮಹಿಸಬೇಕು’ ಎಂಬುದು ಜನರ ಆಗ್ರಹವಾಗಿದೆ.

ಉಬ್ಬು ಚಿತ್ರದ ಎದುರಲ್ಲಿ ಅಂಗಡಿ ಸಾಮಗ್ರಿ ಇಟ್ಟಿರುವುದು
ಮಹಾದ್ವಾರದ ಎದುರಿನ ಆವರಣಗೋಡೆಯಲ್ಲಿನ ಉಬ್ಬು ಚಿತ್ರ
ಆವರಣಗೋಡೆಯಲ್ಲಿನ ಉಬ್ಬು ಚಿತ್ರ
ಬಸವಕಲ್ಯಾಣದ ಸಸ್ತಾಪುರ ಬಂಗ್ಲಾದಲ್ಲಿರುವ ನಗರ ಪ್ರವೇಶಿಸುವ ಮಹಾದ್ವಾರ
ಮಹಾದ್ವಾರದ ಸಮೀಪದಲ್ಲಿ ಯಾವುದೇ ಚಟುವಟಿಕೆ ನಡೆಯಕೂಡದು. ಅಲ್ಲಿನ ಪಾದಚಾರಿ ಮಾರ್ಗದ ಅತಿಕ್ರಮಣ ತೆರವಿಗೆ ನಗರಸಭೆಯವರಿಗೆ ಸೂಚಿಸುತ್ತೇನೆ
ಜಗನ್ನಾಥರೆಡ್ಡಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ
ಮಹಾದ್ವಾರದ ಸ್ಥಳದಲ್ಲಿ ಇನ್ನಷ್ಟು ಸೌಂದರ್ಯೀಕರಣ ಕಾರ್ಯ ನಡೆಯಲಿ. ಅತಿಕ್ರಮಣ ತೆರವಾಗದಿದ್ದರೆ ಮುಂಬರುವ ದಿನಗಳಲ್ಲಿ ಅಸ್ತವ್ಯಸ್ತವಾಗಿ ಕಾಣುತ್ತದೆ
ಮಿಲಿಂದ ಕುಲಕರ್ಣಿ ಸಾಮಾಜಿಕ ಕಾರ್ಯಕರ್ತ
ಸಾಕಷ್ಟು ಹಣ ಖರ್ಚು ಮಾಡಿ ಉಬ್ಬುಚಿತ್ರಗಳನ್ನು ನಿರ್ಮಿಸಿದ್ದು ಅವುಗಳ ಸಂರಕ್ಷಣೆ ಅಗತ್ಯವಾಗಿದೆ. ಅವುಗಳಿಗೆ ಬಣ್ಣ ಹಚ್ಚುವುದಲ್ಲದೆ ದುರಸ್ತಿ ನಡೆಯಲಿ
ಸಿದ್ಧಾರ್ಥ ಬಾವಿದೊಡ್ಡಿ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.