ADVERTISEMENT

ಬಸವಕಲ್ಯಾಣ: ವರದಿಗಾರರ ಮೇಲೆ ಹಲ್ಲೆ, ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 29 ಮೇ 2022, 5:09 IST
Last Updated 29 ಮೇ 2022, 5:09 IST

ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದ ಪೀರಪಾಷಾ ಬಂಗ್ಲೆಯಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಸುದ್ದಿವಾಹಿನಿಯೊಂದರ ವರದಿಗಾರರ ಮೇಲೆ ಹಲ್ಲೆಯಾಗಿದ್ದು, ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿಗಾರರಾದ ಚಮನಸಾಬ್ ಹೊಸಮನಿ, ನಾಗಪ್ಪ ಮಾಲಿಪಾಟೀಲ ಮತ್ತು ಮಲ್ಲನಗೌಡ ದೂರು ನೀಡಿದ್ದಾರೆ.

‘ಬಂಗ್ಲೆಯಲ್ಲಿ ಮೂಲ ಅನುಭವ ಮಂಟಪ ಇರುವ ಬಗ್ಗೆ ಕೆಲವರು ಹೇಳಿಕೆ ನೀಡಿದ್ದರಿಂದ ಅಲ್ಲಿ ಚಿತ್ರೀಕರಣ ಮಾಡಲು ಹೋಗಿದ್ದ ವೇಳೆ ನಮ್ಮ ಮೇಲೆ ಅಬ್ರಾರ್ ಹುಸೇನ್, ಅಸ್ರಾರ್ ಹುಸೇನ್ ಮತ್ತು ಇತರರು ಹಲ್ಲೆ ನಡೆಸಿದ್ದಾರೆ.‌‌ ಮೊಬೈಲ್‌ಫೋನ್ ಮತ್ತು ಕ್ಯಾಮೆರಾಕ್ಕೂ ಹಾನಿ ಮಾಡಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಠಾಣೆಗೆ ಪ್ರತಿ ದೂರು ನೀಡಿರುವ ಅಬ್ರಾರ್ ಹುಸೇನ್, ‘ಸಾಗರ ದಂಡೋತಿ, ಚಮನಸಾಬ್ ಹೊಸಮನಿ, ನಾಗಪ್ಪ ಮತ್ತು ಮಲ್ಲನಗೌಡ ಅವರು ಬಂಗ್ಲೆಯ ಹಿಂಬದಿ ಆವರಣ ಗೋಡೆ ಏರಿ ಬಂದು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಹೀಗೆ ಅನಧಿಕೃತವಾಗಿ ಇಲ್ಲೇಕೆ ಚಿತ್ರೀಕರಣ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಸಚಿವರ ಖಂಡನೆ: ಬಸವಕಲ್ಯಾಣದ ಅನುಭವ ಮಂಟಪ ಕುರಿತು ವರದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಮಾಧ್ಯಮ ಪ್ರಜಾಪ್ರಭುತ್ವದ ಮಹತ್ವದ ಅಂಗ. ಅವರು ಸತ್ಯ ಸಂಗತಿ ವರದಿ ಮಾಡುವ ಪೂರ್ಣ ಹಕ್ಕು ಹೊಂದಿದ್ದಾರೆ. ಅವರ ಮೇಲೆಯೇ ಹಲ್ಲೆ ನಡೆಸುವುದು, ಪ್ರತಿ ದೂರು ಕೊಡುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.