ADVERTISEMENT

ಬಸವಕಲ್ಯಾಣ: ಕೆಂಡ ತುಳಿಯಲು ಕೆರೆ ದಂಡೆಯಲ್ಲಿ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 12:45 IST
Last Updated 16 ಜನವರಿ 2025, 12:45 IST
ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆ ದಂಡೆಯಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವರ ಪಲ್ಲಕ್ಕಿ ಮೆರವಣಿಗೆಯಲ್ಲಿ ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು
ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆ ದಂಡೆಯಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವರ ಪಲ್ಲಕ್ಕಿ ಮೆರವಣಿಗೆಯಲ್ಲಿ ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ಮಡಿವಾಳ ಮಾಚಿದೇವರ ಜಾತ್ರೆ ಅಂಗವಾಗಿ ನಗರದ ತ್ರಿಪುರಾಂತ ಕೆರೆ ದಂಡೆಯಲ್ಲಿ ಗುರುವಾರ ಸಂಭ್ರಮ ಮನೆಮಾಡಿತ್ತು. ಕೆರೆ ತೀರದಲ್ಲಿ ಕೆಂಡ ಹಾಯಲು ಭಕ್ತಸಾಗರವೇ ನೆರೆದಿತ್ತು. ಜನರು ತೆಂಗು, ಕರ್ಪೂರ ಅರ್ಪಿಸಿ ಕೆಂಡ ತುಳಿದು ಹರಕೆ ತೀರಿಸಿ ಭಕ್ತಿ ಮೆರೆದರು.

‌ಉತ್ಸವ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಕೆರೆ ತೀರಕ್ಕೆ ತಂದಾಗ ಬೆಳಿಗ್ಗೆ 8 ಗಂಟೆ. ಅಷ್ಟೊತ್ತಿಗೆ ಭಕ್ತರ ಬರುವಿಕೆ ಶುರುವಾಯಿತು. ಮಧ್ಯಾಹ್ನ 12 ಗಂಟೆಯ ನಂತರ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕೆರೆ ದಂಡೆ ಮತ್ತೆ ಭಣಗುಟ್ಟಿತು.

ತ್ರಿಪುರಾಂತ ಓಣಿಯ ಎರಡು ಪ್ರತ್ಯೇಕ ಮನೆಗಳಲ್ಲಿ ಮೂರು ದಿನಗಳಿಂದ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ತಲೆಮೇಲೆ ಇಟ್ಟುಕೊಂಡು ಕೆರೆ ದಂಡೆಗೆ ತರಲಾಯಿತು. ಛತ್ರಿ ಚಾಮರದೊಂದಿಗೆ ಪಲ್ಲಕ್ಕಿಯನ್ನೂ ಜೊತೆಗೇ ತರಲಾಯಿತು. ಇಲ್ಲಿನ ಕಟ್ಟೆಯ ಮೇಲೆ ಕೆಲಕಾಲ ಇದೆಲ್ಲವನ್ನು ಇಟ್ಟು ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಯಿತು.

ADVERTISEMENT

ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸ್ಥಳಕ್ಕೆ ಬಂದು ಜ್ಯೋತಿ ಹೊತ್ತಿಸಿದರು. ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪುರವಂತರು, ಮೂರ್ತಿಗಳನ್ನು ಹೊತ್ತವರು ಹಾಗೂ ಪಲ್ಲಕ್ಕಿ ಹಿಡಿದವರು ಮೊದಲಿಗರಾಗಿ ಕೆಂಡ ಹಾಯ್ದರು. ನಂತರ ಮಹಿಳೆಯರು, ಮಕ್ಕಳಾದಿಯಾಗಿ ಸಾಲುಗಟ್ಟಿದ್ದ ಅನೇಕ ಭಕ್ತರು ಕೆಂಡ ಹಾಯ್ದರು. ಭಕ್ತರು ನಿಗಿ–ನಿಗಿ ಕೆಂಡ ಹಾಯುತ್ತಿದ್ದ ದೃಶ್ಯ ನೋಡುಗರ ಮೈಜುಮ್ಮೆನ್ನುವಂತಿತ್ತು.

ಇದಕ್ಕೂ ಮುನ್ನ ನಸುಕಿನ ನಾಲ್ಕು ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪಲ್ಲಕ್ಕಿ ಮೆರವಣಿಗೆ ಮನೆಗಳ ಎದುರಿಗೆ ಹೋದಾಗ ಎಲ್ಲರೂ ಕುಟುಂಬ ಸಮೇತರಾಗಿ ಬಂದು ನೀರು ಸುರಿದು ಸ್ವಾಗತಿಸಿದ್ದರು.

ವಿಜಯಪುರ ಜಿಲ್ಲೆಯ ಸಾರವಾಡದ ಹುಚ್ಚಮ್ಮದೇವಿ ಗೊಂಬೆ ಕುಣಿತ ಮತ್ತು ತೆಲಂಗಾಣದ ಗುಡೂರನ ಹಲಗೆ ವಾದನ ಮೆರವಣಿಗೆ ಮೆರುಗು ಹೆಚ್ಚಿಸಿದ್ದವು. ರಸ್ತೆಗಳ ಪಕ್ಕದಲ್ಲಿ ಜನರು ನಿಂತುಕೊಂಡು ಈ ತಂಡಗಳ ಕುಣಿತ ಕಣ್ತುಂಬಿಕೊಂಡರು.

ಪುರವಂತರು, ಡೊಳ್ಳು ಕುಣಿತ, ಬ್ಯಾಂಡ್ ಬಾಜಾ, ಭಜನಾ ತಂಡ, ಗೊಂದಲಿಗ ಕಲಾವಿದರೂ ಮೆರವಣಿಗೆಯಲ್ಲಿ ‍ಪಾಲ್ಗೊಂಡಿದ್ದರು. ಜಾತ್ರೆ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.