ADVERTISEMENT

ಬಸವಕಲ್ಯಾಣ: ಬಸವೇಶ್ವರ ಜಾತ್ರೆಗೆ ನಂದಿಧ್ವಜ ಹಿಡಿಯುವ ತರಬೇತಿ ಸಮಾರೋಪ

ಸುಭಾಷ ಬಾವಗೆ ಕಾರ್ಯಕ್ಕೆ ಸರ್ಕಾರದಿಂದಳು ಪ್ರಶಂಸೆ

ಮಾಣಿಕ ಆರ್ ಭುರೆ
Published 25 ಏಪ್ರಿಲ್ 2025, 7:24 IST
Last Updated 25 ಏಪ್ರಿಲ್ 2025, 7:24 IST
<div class="paragraphs"><p>ಬಸವಕಲ್ಯಾಣದಲ್ಲಿ ಈಚೆಗೆ ನಡೆದ ನಂದಿಧ್ವಜ ತರಬೇತಿ ಶಿಬಿರದಲ್ಲಿ ನಂದಿಧ್ವಜ ಹಿಡಿದಿರುವುದು</p></div>

ಬಸವಕಲ್ಯಾಣದಲ್ಲಿ ಈಚೆಗೆ ನಡೆದ ನಂದಿಧ್ವಜ ತರಬೇತಿ ಶಿಬಿರದಲ್ಲಿ ನಂದಿಧ್ವಜ ಹಿಡಿದಿರುವುದು

   

ಬಸವಕಲ್ಯಾಣ: ನಂದಿಧ್ವಜ ಮೆರವಣಿಗೆ ನಗರದಲ್ಲಿನ ಬಸವೇಶ್ವರ ದೇವಸ್ಥಾನದ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ. ಏಪ್ರಿಲ್ 30 ರಿಂದ ಮೂರು ದಿನ ಜಾತ್ರೆ ಇದ್ದು ಮೇ1 ಮತ್ತು ಮೇ2 ರಂದು ರಾತ್ರಿ ಇವುಗಳ ಮೆರವಣಿಗೆ ನಡೆಯಲಿದೆ. ಕೋಲು ಹಿಡಿಯುವವರಿಗೆ ತಿಂಗಳು ಕಾಲ ಆಯೋಜಿಸಿದ್ದ ತರಬೇತಿ ಶಿಬಿರದ ಸಮಾರೋಪ ಈಚೆಗೆ ನಡೆಯಿತು.

80 ಕೆ.ಜಿ ಭಾರ, 30 ಅಡಿ ಎತ್ತರದ ಧ್ವಜವನ್ನು ಟೊಂಕದ ಹಿಡಿಯಲ್ಲಿ ಸಿಕ್ಕಿಸಿಕೊಂಡು ಒಯ್ಯುವುದೆಂದರೆ ಸಾಹಸದ ಕೆಲಸವೇ ಸರಿ. 5 ಕೋಲುಗಳನ್ನು ಸಾವಕಾಶವಾಗಿ ಹೆಜ್ಜೆಗಳನ್ನು ಇಡುತ್ತ ಸಾಗಿಸುವುದನ್ನು ನೋಡುವುದೇ ಒಂದು ಚೆಂದದ ಅನುಭವ. ಬಾರಾಬಂದಿ ಅಂಗಿ, ಬಿಳಿ ಧೋತ್ರ, ತಲೆಮೇಲೆ ಮುಂಡಾಸು ಕಟ್ಟಿಕೊಂಡ ಹತ್ತಾರು ಜನರು ಒಂದೊಂದು ನಂದಿಧ್ವಜದ ಜತೆಗಿರುತ್ತಾರೆ.

ADVERTISEMENT

ಟೊಂಕಕ್ಕೆ ಬೆಲ್ಟ್‌ನಂತೆ ಕಟ್ಟಿದ ಪಟುಡಿ(ಹಿಡಿ)ಯಲ್ಲಿ ಕೋಲಿನ ಕೆಳ ತುದಿಯನ್ನು ಸಿಕ್ಕಿಸಿಕೊಂಡು ಮುಂದೆ ಸಾಗುತ್ತಾರೆ. ದಿ.ಬಾಬಾಸಾಹೇಬ್ ವಾರದ್ ಅವರು ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಸ್ಥಾಪಿಸಿ ಜಾತ್ರೆ ಆರಂಭಿಸಿದರು. ಮೊದಲು ಐದು ವರ್ಷ ಧ್ವಜ ಹಿಡಿಯುವವರನ್ನು ಸೊಲ್ಲಾಪುರದಿಂದ ತರಲಾಯಿತು. ನಂತರದಲ್ಲಿ 70 ವರ್ಷದಿಂದ ಸ್ಥಳೀಯರೇ ಈ ಕಾರ್ಯ ಕೈಗೊಳ್ಳುತ್ತಿದ್ದಾರೆ. ಆದರೆ, ಬರಬರುತ್ತ ತರಬೇತಿಯ ಕೊರತೆಯಿಂದ ಕೋಲು ಹಿಡಿಯುವವರ ಸಂಖ್ಯೆ ಕಡಿಮೆ ಆಯಿತು.

ಆದ್ದರಿಂದ 22 ವರ್ಷಗಳ ಹಿಂದೆ ಸುಭಾಷ ಬಾವಗೆ ಅವರು ನಂದಿಧ್ವಜ ತರಬೇತಿ ಸಮಿತಿ ಸ್ಥಾಪಿಸಿ ಪ್ರತಿ ವರ್ಷ ಈ ಕೈಂಕರ್ಯ ಕೈಗೊಳ್ಳುತ್ತಿದ್ದಾರೆ. ಜಾತ್ರೆ ಇನ್ನೂ ಒಂದು ತಿಂಗಳು ಇರುವಾಗಲೇ ತರಬೇತಿ ನೀಡಲು ಆರಂಭಿಸುತ್ತಾರೆ. ಜನಪದ ಕಲೆಯಾದ ನಂದಿಧ್ವಜ ಮೆರವಣಿಗೆ ಸಂಪ್ರದಾಯದ ಪೋಷಣೆಗಾಗಿ ಇವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗಿದೆ.

‘ತರಬೇತಿ ಶಿಬಿರದಲ್ಲಿ 25 ಜನ ಹೊಸಬರು ಒಳಗೊಂಡು 100 ಜನರು ಭಾಗವಹಿಸಿದ್ದರು. ಹೀಗಾಗಿ ಈ ಸಲದ ಮೆರವಣಿಗೆಯಲ್ಲಿ ಹೊಸಬರು ಮತ್ತು ಹಿರಿಯರು ಕೂಡಿಕೊಂಡು 150 ಜನರು ನಂದಿಕೋಲ ಹಿಡಿಯಲಿದ್ದಾರೆ. ಮೊದಲ ದಿನದ ಮೆರವಣಿಗೆಯಲ್ಲಿ ಒಬ್ಬರ ನಂತರ ಮತ್ತೊಬ್ಬರು ಹೀಗೆ ನಂದಿಧ್ವಜ ಹಿಡಿಯುವವರು ಬದಲಾಗುತ್ತಾರೆ. ಆದರೆ, ರಥೋತ್ಸವದ ದಿನದ ಇಡೀ ಮೆರವಣಿಗೆಯಲ್ಲಿ ಒಂದು ನಂದಿಧ್ವಜ ಒಬ್ಬರೇ ಹಿಡಿಯುವ ವಾಡಿಕೆಯಿದೆ. ಇತರರು ಅವರ ರಕ್ಷಣೆಗಿರುತ್ತಾರೆ. 48 ಗಂಟೆಗಳವರೆಗೆ ಯಾರೂ ಆಹಾರ ಸೇವಿಸುವುದಿಲ್ಲ. ಬರೀ ನೀರಷ್ಟೇ ಕುಡಿಯುತ್ತಾರೆ. ಅದಕ್ಕೆ ತಕ್ಕಂತೆ ತರಬೇತಿ ನೀಡಲಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

ಬಸವಕಲ್ಯಾಣದಲ್ಲಿ ಈಚೆಗೆ ನಡೆದ ನಂದಿಧ್ವಜ ಹಿಡಿಯುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಯುವಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.