ADVERTISEMENT

ಖೂಬಾ ಯಾರೆಂದು ಗೊತ್ತಿಲ್ಲ, ನ್ಯಾಯ ಸಿಗುವವರೆಗೆ ಹೋರಾಟ ಎಂದ ಸಂತ್ರಸ್ತ ಯುವತಿ

ಖೂಬಾ ಯಾರೆಂದು ಗೊತ್ತಿಲ್ಲ, ನ್ಯಾಯ ಸಿಗುವವರೆಗೆ ಹೋರಾಟ ಎಂದ ಸಂತ್ರಸ್ತ ಯುವತಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 14:30 IST
Last Updated 21 ಜುಲೈ 2025, 14:30 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ಭಗವಂತ ಖೂಬಾ ಅವರು ಯಾರೆಂಬುದು ನನಗೆ ಗೊತ್ತಿಲ್ಲ. ಖೂಬಾ ಅವರು ಚುನಾವಣೆಯಲ್ಲಿ ಸೋತರೆ ಅದ್ದೂರಿ ಮದುವೆ ಮಾಡೋಣ ಎಂದು ಶಾಸಕ ಪ್ರಭು ಚವಾಣ್‌ ಅವರು ಹೇಳಿರುವುದು ನೆನಪಿದೆ. ಖೂಬಾ ಅವರ ಹೆಸರು ಮೊದಲ ಸಲ ಕೇಳಿದ್ದೆ ಚವಾಣ್‌ ಅವರ ಬಾಯಿಂದ’ ಎಂದು ಮಹಾರಾಷ್ಟ್ರದ ಉದಗೀರ್‌ ಬಳಿಯ ಗ್ರಾಮವೊಂದರ ಯುವತಿ, ಆಕೆಯ ತಾಯಿ ಹಾಗೂ ಸಹೋದರ ಗಂಭೀರ ಆರೋಪ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಲೂ ಖೂಬಾ ಅವರು ಯಾರೆಂಬುದು ನಮಗೆ ಗೊತ್ತಿಲ್ಲ. ಖೂಬಾ ಅವರ ಚುನಾವಣೆ ನಂತರ ಮದುವೆ ಮಾಡೋಣ. ಅದಕ್ಕೆ ನರೇಂದ್ರ ಮೋದಿ, ಅಮಿತ್‌ ಷಾ ಅವರನ್ನು ಕರೆಸೋಣ ಅಂತ ಹೇಳಿದರು. ಚುನಾವಣೆ ನಂತರ ಕೇಳಿದರೆ, ಮಳೆಗಾಲ ಮುಗಿಯಲಿ ಎಂದರು. ಇದಾದ ಬಳಿಕ ಅವರು ಅಸ್ವಸ್ಥರಾದರು. ಹುಷಾರಾದ ನಂತರ ಮಾಡೋಣ ಅಂದರು. ಹೀಗೆ ಒಂದಿಲ್ಲೊಂದು ನೆಪ ಹೇಳಿ ಪ್ರಭು ಚವಾಣ್‌ ಅವರು ಮಗ ಪ್ರತೀಕ್‌ ಜೊತೆಗೆ ನಿಶ್ಚಯವಾಗಿದ್ದ ವಿವಾಹವನ್ನು ಮುಂದೂಡುತ್ತಲೇ ಹೋದರು ಎಂದರು.

‘ಖೂಬಾ ಅವರು ಯಾರೆಂಬುದೇ ನನಗೆ ಗೊತ್ತಿಲ್ಲ. ಹೀಗಿರುವಾಗ ಅವರು ನಮ್ಮನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಪ್ರಭು ಚವಾಣ್‌ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಅದು ಸತ್ಯಕ್ಕೆ ದೂರವಾದದ್ದು. ಮದುವೆಗೆ ವಿಳಂಬವಾಗುತ್ತಿರುವುದರಿಂದ ಅದರ ಕುರಿತಾಗಿ ಮಾತನಾಡಲು ನನ್ನ ಪೋಷಕರು ಹಾಗೂ ಇತರರು ಔರಾದ್‌ ತಾಲ್ಲೂಕಿನ ಬೊಂತಿಯ ಘಮಸುಬಾಯಿ ತಾಂಡಾದಲ್ಲಿರುವ ಪ್ರಭು ಚವಾಣ್‌ ಅವರ ಮನೆಗೆ ಹೋಗಿದ್ದರು. ಆದರೆ, ನನ್ನ ತಾಯಿಗೆ ಹೊಡೆದು ಮನೆಯಿಂದ ಹೊರ ಹಾಕಿದರು. ತಾಂಡಾ ಜನ ನಮ್ಮ ಮೇಲೆ ಕಲ್ಲು ಹೊಡೆದರು. ಪೊಲೀಸರು ಎರಡು ಗಂಟೆ ಹೊಕ್ರಾಣಾ ಠಾಣೆಯಲ್ಲಿ ಕೂರಿಸಿಕೊಂಡು, ಅವರು ದೊಡ್ಡ ವ್ಯಕ್ತಿಗಳು ಎಂದು ನಮ್ಮವರನ್ನೇ ಹೆದರಿಸಿದರು. ಅಲ್ಲಿನ ಸಿಪಿಐ ಮತ್ತು ಪಿಎಸ್‌ಐ ನಮಗೆ ಸೇರಿದ ಲಾಕೆಟ್‌ ಮತ್ತು ಮೊಬೈಲ್‌ ವಾಪಸ್‌ ಕೊಡಿಸುತ್ತೇವೆ ಎಂದು ಹೇಳಿ ನಮ್ಮನ್ನು ಅಲ್ಲಿಂದ ಕಳಿಸಿದ್ದರು. ಆದರೆ, ಆನಂತರ ಅವರು ಹಾಗೆ ಮಾಡಲಿಲ್ಲ’ ಎಂದು ಯುವತಿ ಘಟನೆ ಕುರಿತು ವಿವರಿಸಿದರು.

ADVERTISEMENT

ವಿಷಯಾಂತರ ಮಾಡುವ ಉದ್ದೇಶದಿಂದ ಪ್ರಭು ಚವಾಣ್‌ ಅವರು ಭಗವಂತ ಖೂಬಾ ಅವರ ಹೆಸರು ಹೇಳುತ್ತಿದ್ದಾರೆ. ಆದರೆ, ನಮಗೆ ಯಾರೂ ಪ್ರಚೋದನೆ ಮಾಡುತ್ತಿಲ್ಲ. ನಮಗಾದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದು, ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡ ನಮ್ಮ ಅಹವಾಲು ಆಲಿಸಿ, ನ್ಯಾಯದ ಭರವಸೆ ಕೊಟ್ಟಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದರು.

‘ನಿಶ್ಚಯವಾಗಿದ್ದ ಮದುವೆ ಆನಂತರ ಪಂಚರ ಸಮ್ಮುಖದಲ್ಲಿ ಸಭೆ ನಡೆಸಿ ರದ್ದುಪಡಿಸಲಾಗಿದೆ ಎಂದು ಪ್ರಭು ಚವಾಣ್‌ ಹೇಳಿಕೆ ನೀಡಿದ್ದಾರೆ. ಆದರೆ, ಮದುವೆ ರದ್ದುಪಡಿಸಿದ ವಿಷಯವೇ ನಮಗೆ ಗೊತ್ತಿಲ್ಲ. ಪಂಚರ ಸಭೆ ನಡೆಸುವುದು ದೂರದ ಮಾತು. ಒಂದುವೇಳೆ ಆ ರೀತಿ ಮಾಡಿದ್ದರೆ ಅದಕ್ಕೆ ಸಂಬಂಧಿಸಿದ ಯಾವುದಾದರೂ ಪುರಾವೆಗಳು ತೋರಿಸಲಿ ಎಂದು ಸವಾಲು ಹಾಕಿದರು.

‘ಇನ್‌ಸ್ಟಾಗ್ರಾಂ ಮೂಲಕ ಪ್ರತೀಕ್‌ ನನಗೆ ಪರಿಚಯವಾದರು. ಆನಂತರ ಈ ಕುರಿತು ಕುಟುಂಬದವರೊಂದಿಗೆ ಚರ್ಚಿಸಿ, ಪ್ರತೀಕ್‌ ಹಾಗೂ ನನ್ನ ಮದುವೆ ನಿಶ್ಚಯಿಸಲಾಯಿತು. ನನಗೆ ಬೆಂಗಳೂರು, ಶಿರಡಿ ಮತ್ತಿತರ ಕಡೆ ಕರೆದೊಯ್ದು ಬಲವಂತವಾಗಿ ಏಳೆಂಟು ಸಲ ಅತ್ಯಾಚಾರ ಮಾಡಿದ್ದಾರೆ. ಅನ್ಯ ಯುವತಿಯ ಜೊತೆ ಅವರು ಹೊಂದಿರುವ ಸಂಬಂಧದ ಕುರಿತು ನಾನು ವಿಚಾರಿಸಿದ ನಂತರ, ಪ್ರತೀಕ್‌ ನನ್ನ ಮೇಲೆ ಎರಡು ಸಲ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದಾದ ಬಳಿಕ ನಾನು ಖಿನ್ನತೆಗೆ ಒಳಗಾದೆ. ಅನ್ಯಾಯ ಸಹಿಸಿಕೊಂಡು ಸುಮ್ಮನಿದ್ದರೆ ಆಗುವುದಿಲ್ಲ ಎಂದು ತಿಳಿದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವೆ ಎಂದು ಹೇಳುತ್ತ ಭಾವುಕರಾಗಿ ಕಣ್ಣೀರು ಹಾಕಿದರು.

ಕಣ್ಣೀರು ಹಾಕಿದ ಯುವತಿ ತಾಯಿ

‘ಶಾಸಕ ಪ್ರಭು ಚವಾಣ್‌ ಸುಳ್ಳು ಹೇಳುತ್ತಾರೆ. ಆದರೆ, ನಮಗೆ ಸುಳ್ಳು ಹೇಳಲು ಬರುವುದಿಲ್ಲ. ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಿಸಿ ಮುನ್ನಡೆಸುವುದು ಬಿಟ್ಟರೆ ನಮಗೇನೂ ಗೊತ್ತಿಲ್ಲ. ನಮಗೆ ರಾಜಕೀಯ ಮಾಡಲು ಬರುವುದಿಲ್ಲ’ ಎಂದು ಹೇಳುತ್ತ ಯುವತಿಯ ತಾಯಿ ಗದ್ಗಿದಿತರಾದರು.

ಇಂದಲ್ಲ ನಾಳೆ ನನ್ನ ಮಗಳೊಂದಿಗೆ ಮದುವೆ ಆಗಬಹುದು ಎಂದು ನಿರೀಕ್ಷಿಸುತ್ತಿದ್ದೆವು. ಆದರೆ, ವಿನಾಕಾರಣ ಕಾಲ ದೂಡುತ್ತ ಬಂದರು. ‘ನಿಮ್ಮ ಮಗ ಬೇರೆ ಹೆಣ್ಣು ಮಕ್ಕಳೊಂದಿಗೆ ಸಂಪರ್ಕದಲ್ಲಿದ್ದಾರೆ’ ಎಂದು ಪ್ರತೀಕ್‌ ಚವಾಣ್‌ ಕುರಿತು ಅವರ ತಾಯಿಗೆ ವಿಷಯ ತಿಳಿಸಿದೆ. ಆದರೆ, ಅವರು, ‘ಅವನು ಹುಡುಗ. ಅವನು ಏನು ಬೇಕಾದರೂ ಮಾಡಬಹುದು’ ಎಂದು ಅವರು ಹೇಳಿದಾಗ ಮನಸ್ಸಿಗೆ ಬಹಳ ನೋವಾಯಿತು ಎಂದರು.

‘ಮಗಳು ಎಂದೆನ್ನುತ ಅಪಪ್ರಚಾರ’

‘ಪ್ರಭು ಚವಾಣ್‌ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅನೇಕ ಸಲ ಆ ಯುವತಿ ನನ್ನ ಮಗಳಿದ್ದಂತೆ ಎಂದು ಹೇಳಿದ್ದಾರೆ. ಇನ್ನೊಂದು ಕಡೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಸೇರಿದ ಎರಡು ಮೊಬೈಲ್‌ಗಳು ಅವರ ಬಳಿ ಇವೆ. ನಾಲ್ಕು ತಿಂಗಳ ಹಿಂದೆ ನನಗೆ ಸೇರಿದ ಮೊಬೈಲ್‌ ಪ್ರತೀಕ್‌ ತೆಗೆದುಕೊಂಡಿದ್ದ. ಈಗಲೂ ಅವರ ಹತ್ತಿರ ಇವೆ. ಅದರ ಮೂಲಕ ಸುಳ್ಳು ಚಾಟಿಂಗ್‌ ಮಾಡಿಸಿ, ನನ್ನ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸಿ, ಬೇರೆಯವರೊಂದಿಗೆ ಸಂಬಂಧ ಕಲ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಪ್ರತೀಕ್‌ ನನ್ನೊಂದಿಗೆ ಪ್ರೀತಿಸುತ್ತಿದ್ದ. ಎರಡು ವರ್ಷ ಇಲ್ಲದ ಅನುಮಾನ ಮದುವೆ ನಿಶ್ಚಯವಾದ ನಂತರ ಏಕೆ ಬಂತು ಎಂದು ಯುವತಿ ಪ್ರಶ್ನಿಸಿದರು.

ನಾನು ಬೇರೆಯವರೊಂದಿಗೆ ಚಾಟಿಂಗ್‌ ನಡೆಸಿದ್ದೇನೆ ಎಂಬ ಅನುಮಾನವಿದ್ದರೆ ಅದರ ಬಗ್ಗೆ ತನಿಖೆ ನಡೆಸಲಿ. ನಾನು ಚಾಟಿಂಗ್‌ ಮಾಡಿದ್ದೇನೆ ಎಂಬುದನ್ನು ಸಾಬೀತುಪಡಿಸಿ ತೋರಿಸಲಿ. ಎಡಿಟೆಡ್‌ ವಿಡಿಯೋ, ಚಾಟಿಂಗ್‌ ಮೆಸೇಜ್‌ಗಳನ್ನು ತೋರಿಸಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ತಮ್ಮ ಮಗ ಪ್ರತೀಕ್‌ ಚವಾಣ್‌ನನ್ನು ಪತ್ರಿಕಾಗೋಷ್ಠಿಗೆ ಕರೆದುಕೊಂಡು ಬಂದು ಇತರೆ ಹೆಣ್ಣು ಮಕ್ಕಳೊಂದಿಗೆ ಹೊಂದಿರುವ ಸಂಬಂಧ ಸುಳ್ಳು ಎಂದು ಪ್ರಭು ಚವಾಣ್‌ ಹೇಳಿಸಲಿ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.