ADVERTISEMENT

ಔರಾದ್ | ವೈದ್ಯರ ಕೊರತೆ: ಗ್ರಾಮೀಣ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 0:22 IST
Last Updated 26 ಜುಲೈ 2024, 0:22 IST
ಔರಾದ್ ತಾಲ್ಲೂಕಿನ ವಡಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ
ಔರಾದ್ ತಾಲ್ಲೂಕಿನ ವಡಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ   

ಔರಾದ್: ಗ್ರಾಮೀಣ ಪ್ರದೇಶದ ಜನರಿಗೂ ಅತ್ಯುತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸರ್ಕಾರದ ಯೋಜನೆಗೆ ವೈದ್ಯರ ಕೊರತೆ ಅಡ್ಡಿಯಾಗಿ ಪರಿಣಮಿಸಿದೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ನಾಲ್ಕರಲ್ಲಿ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ. ಇನ್ನು 6 ಊರಿಗೆ ಒಂದರಂತೆ ಇರುವ 60 ಉಪ ಕೇಂದ್ರಗಳಲ್ಲಿ 25 ಜನ ಆರೋಗ್ಯ ಸಹಾಯಕರಿಲ್ಲದೆ ಗ್ರಾಮೀಣ ಪ್ರದೇಶದ ಜನ ಆರೋಗ್ಯ ಸೇವೆಗಾಗಿ ಪರದಾಡಬೇಕಿದೆ.

ತಾಲ್ಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ವಡಗಾಂವ(ಡಿ) ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 50ಕ್ಕೂ ಹೆಚ್ಚು ಗ್ರಾಮ ತಾಂಡಾಗಳು ಬರುತ್ತವೆ. ನಿತ್ಯ ಕನಿಷ್ಠ 80 ಮೇಲ್ಪಟ್ಟು ಹೊರ ರೋಗಿಗಳು ಬರುತ್ತಾರೆ. ಆದರೆ ಇಲ್ಲಿ ಕಾಯಂ ವೈದ್ಯರೂ ಇಲ್ಲ, ಶುಷ್ರೂಶಕಿಯರೂ ಇಲ್ಲ. ಅರೆಕಾಲಿಕ ಆಯುಷ್ಯ ವೈದ್ಯರ ಮೇಲೆ ಈ ಆಸ್ಪತ್ರೆ ನಡೆಯುತ್ತಿದೆ.

ADVERTISEMENT

ಜಮಗಿ ಗ್ರಾಮದಲ್ಲಿ 6 ಸಾವಿರ ಜನಸಂಖ್ಯೆ ಇದ್ದು, ಇಲ್ಲಿ 12 ತಾಂಡಾಗಳು ಬರುತ್ತವೆ. ಆರೋಗ್ಯ ಸಮಸ್ಯೆಯಾದರೆ ವಡಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಆದರೆ ಅಲ್ಲಿ ಎಂಬಿಬಿಎಸ್ ವೈದ್ಯರಿಲ್ಲದ ಕಾರಣ ಜನ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಇನ್ನು ಗಂಭೀರ ಕಾಯಿಲೆಗಳಿದ್ದರೆ ಬೇರೆ ಊರಿಗೆ ಹೋಗಬೇಕಾಗುತ್ತದೆ ಎಂದು ಜಮಗಿ ಗ್ರಾಮದ ನಿವಾಸಿ ಅಹಮ್ಮದ್ ಹೇಳುತ್ತಾರೆ.

ಔರಾದ್ ತಾಲ್ಲೂಕು ಕೇಂದ್ರದಲ್ಲಿರುವ ನೂರು ಆಸ್ಪತ್ರೆಯಲ್ಲೂ ಎಂಬಿಬಿಎಸ್ ವೈದ್ಯರ ಕೊರತೆಯಿದೆ. ಇಲ್ಲಿ ನಿತ್ಯ 500ಕ್ಕೂ ಹೆಚ್ಚು ಹೊರ ರೋಗಿಗಳು ಬರುತ್ತಾರೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ಸೌಲಭ್ಯ ಸಿಗುತ್ತಿಲ್ಲ. ಸ್ವಚ್ಛತೆ ಸಮಸ್ಯೆಯಿದೆ. ರೋಗಿಗಳ ಆರೋಗ್ಯದಲಿ ಸ್ವಲ್ಪವೂ ಗಂಭೀರತೆ ಕಾಣಿಸಿಕೊಂಡರೆ ಬೀರ‍್ಗೆ ಕಳುಹಿಸಿಕೊಡಲಾಗುತ್ತದೆ ಎಂಬ ದೂರುಗಳಿವೆ. ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಸಿಕ್ಕರೆ ತಾಲ್ಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳ ಹಾವಳಿ ಇಷ್ಟೊಂದು ಆಗುತ್ತಿರಲಿಲ್ಲ ಎಂದು ಪಟ್ಟಣದ ನಾಗರಿಕರ ವಾದವಾಗಿದೆ.

ಔರಾದ್ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ 43 ಹೆದ್ದೆಗಳು ಖಾಲಿಯಿವೆ. 38 ಗ್ರೂಪ್ ಡಿ ಹುದ್ದೆ ಪೈಕಿ 27 ಖಾಲಿ ಇವೆ. ಹೀಗಾಗಿ ಆಸ್ಪತ್ರೆ ಸ್ವಚ್ಛತೆ ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ. ಸದ್ಯ ಇರುವ ಸಿಬ್ಬಂದಿ ಮೇಲೆ ಹೆಚ್ಚಿನ ಭಾರ ಬೀಳುತ್ತಿದೆ ಎಂದು ಕೆಲ ಡಿ ಗ್ರೂಪ್ ಸಿಬ್ಬಂದಿ ಗೋಳು ತೋಡಿಕೊಂಡಿದ್ದಾರೆ.

ಔರಾದ್ ತಾಲ್ಲೂಕಿನ ವಡಗಾಂವ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ತಪಾಸಣೆ ಮಾಡಿಸಿಕೊಂಡರು
ಡಾ.ಗಾಯತ್ರಿ

ವೈದ್ಯರು ಅರೆ ವೈದ್ಯರು ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇವೆ. ಸದ್ಯ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಜನರಿಗೆ ಉತ್ತಮ ಸೇವೆ ಕೊಡಲು ಪ್ರಯತ್ನಿಸುತ್ತಿದ್ದೇವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಎಂಬಿಬಿಎಸ್ ವೈದ್ಯರು ಹಾಗೂ ಇನ್ನಷ್ಟು ಡಿ ಗ್ರೂಪ್ ನೌಕರರ ಸೇವೆ ತೀರಾ ಅಗತ್ಯವಾಗಿದೆ

-ಡಾ.ಗಾಯತ್ರಿ ತಾಲ್ಲೂಕು ವೈದ್ಯಾಧಿಕಾರಿ ಔರಾದ್

ವಡಗಾಂವ(ಡಿ) ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾಗಿದೆ. ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ತಾಲ್ಲೂಕಿನ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ಜಮಗಿ ಗ್ರಾಮದಲ್ಲಿ 6 ಸಾವಿರ ಜನಸಂಖ್ಯೆ ಇದೆ. ಪಕ್ಕದಲ್ಲಿ 12 ತಂಡಾಗಳು ಬರುತ್ತವೆ. ಹೀಗಾಗಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು

-ಸಲ್ಲಾವುದ್ದೀನ್ ಜಮಗಿ ಸಾಮಾಜಿಕ ಕಾರ್ಯಕರ್ತ

ರಕ್ತ ನಿಧಿ ಕೇಂದ್ರ ಸ್ಥಾಪನೆಗೆ ಸಿಗದ ಸ್ಪಂದನೆ

ಔರಾದ್ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ನಿರ್ಮಾಣವಾಗಬೇಕು ಎಂಬ ದಶಕಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಐದು ವರ್ಷಗಳ ಹಿಂದೆ ಇದಕ್ಕಾಗಿ ಪ್ರತ್ಯೇಕ ಕಟ್ಟಡ ಕಟ್ಟಲಾಗಿದೆ. ಆದರೆ ಅಗತ್ಯ ಹುದ್ದೆಗಳು ಮಂಜೂರಾಗದ ಕಾರಣ ರಕ್ತ ನಿಧಿ ಕೇಂದ್ರ ಸ್ಥಾಪನೆಯಾಗಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.