
ಬೀದರ್: ತಾಲ್ಲೂಕಿನ ಬಗದಲ್ ಗ್ರಾಮದ ಸರ್ವೇ ನಂ. 8ರಲ್ಲಿ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ಪರಿಶಿಷ್ಟ ಸಮುದಾಯದವರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಆನಂತರ ನಾಡ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಮದ ಸರ್ವೇ ನಂ. 8ರಲ್ಲಿ ಒಟ್ಟು 3 ಎಕರೆ 36 ಗುಂಟೆ ಜಮೀನು ಇದೆ. ಅದರಲ್ಲಿ 36 ಗುಂಟೆ ಖರಾಬ್ ಭೂಮಿಯಲ್ಲಿ ದಲಿತರು ದಶಕಗಳಿಂದ ಮೃತರ ಅಂತ್ಯಕ್ರಿಯೆ ಮಾಡುತ್ತ ಬಂದಿದ್ದಾರೆ. ನವೆಂಬರ್ 26ರಂದು ಗ್ರಾಮದ ಸವರ್ಣೀಯ ಸಮುದಾಯದ ಕೆಲವರು ಜೆಸಿಬಿ ಯಂತ್ರ ಬಳಸಿ ಸ್ಮಶಾನ ಭೂಮಿಯನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಸಂಬಂಧಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸ್ಮಶಾನದ ಸುತ್ತ ತಡೆಗೋಡೆ ನಿರ್ಮಿಸಬೇಕು. ನೀರಿನ ವ್ಯವಸ್ಥೆಗೆ ಕೊಳವೆಬಾವಿ ಕೊರೆಸಬೇಕು. ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸದಿದ್ದಲ್ಲಿ ತಹಶೀಲ್ದಾರ್ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರಮುಖರಾದ ರಾಜಕುಮಾರ ಬಗದಲಕರ್, ಪ್ರಕಾಶ ಎಸ್. ಹಾಲಹಳ್ಳಿಕರ್, ಸಿದ್ರಾಮ ಬಗದಲಕರ್, ಪ್ರಭು ಕರನಾಯಕ, ಪಂಡಿತ ಕರನಾಯಕ, ಕಾಳಪ್ಪ ಚಿಮ್ಮಾ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.