ADVERTISEMENT

ಬೆಳ್ಳೂರು | ಹದಗೆಟ್ಟ ರಸ್ತೆ: ಸಂಚಾರ ಹೈರಾಣ

ನಾಗೇಶ ಪ್ರಭಾ
Published 26 ಅಕ್ಟೋಬರ್ 2025, 7:30 IST
Last Updated 26 ಅಕ್ಟೋಬರ್ 2025, 7:30 IST
ಬೀದರ್-ಮನ್ನಾಎಖ್ಖೆಳ್ಳಿ ರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಬೆಳ್ಳೂರು ಕ್ರಾಸ್‍ನಿಂದ ಬೆಳ್ಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಗ್ಗು-ದಿನ್ನೆಗಳು ಸೃಷ್ಟಿಯಾಗಿರುವುದು
ಬೀದರ್-ಮನ್ನಾಎಖ್ಖೆಳ್ಳಿ ರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಬೆಳ್ಳೂರು ಕ್ರಾಸ್‍ನಿಂದ ಬೆಳ್ಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಗ್ಗು-ದಿನ್ನೆಗಳು ಸೃಷ್ಟಿಯಾಗಿರುವುದು   

ಬೆಳ್ಳೂರು(ಜನವಾಡ): ಬೀದರ್-ಮನ್ನಾಎಖ್ಖೆಳ್ಳಿ ಮುಖ್ಯರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಬೆಳ್ಳೂರು ಕ್ರಾಸ್‍ನಿಂದ ಬೆಳ್ಳೂರುವರೆಗಿನ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ಜನ ಸಂಚಾರಕ್ಕೆ ಹೈರಾಣಾಗುವಂತಾಗಿದೆ.

ಮೂರೂವರೆ ಕಿ.ಮೀ. ರಸ್ತೆ ಉದ್ದಕ್ಕೂ ತಗ್ಗು-ದಿನ್ನೆಗಳು ಸೃಷ್ಟಿಯಾಗಿವೆ. ಹೀಗಾಗಿ ವಾಹನಗಳು ಕುಂಟುತ್ತಾ ಸಂಚರಿಸಬೇಕಾಗಿದೆ. ಹಗಲು ಹೊತ್ತಿನಲ್ಲಿ ವಾಹನಗಳು ಹೇಗೋ ತಗ್ಗುಗಳನ್ನು ದಾಟಿಕೊಂಡು ಹೋಗಬಹುದು. ಆದರೆ, ರಾತ್ರಿ ವೇಳೆ ಸಂಚಾರ ಬಹಳ ಕಷ್ಟ ಎಂದು ಹೇಳುತ್ತಾರೆ ಪ್ರಯಾಣಿಕರು.

ಈ ರಸ್ತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೂ, ರಸ್ತೆಯನ್ನು ದುರಸ್ತಿಪಡಿಸುವ ಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಬೆಳ್ಳೂರು ಮಾತ್ರವಲ್ಲದೆ, ಜಮಿಸ್ತಾನಪುರ, ಕೊಳಾರ(ಕೆ) ಕೈಗಾರಿಕಾ ಪ್ರದೇಶ, ಕೊಳಾರ(ಕೆ), ಕೊಳಾರ(ಬಿ), ಬಕ್ಕಚೌಡಿ, ನಿಜಾಂಪುರ ಗ್ರಾಮಗಳ ಜನ ಬೀದರ್‌ಗೆ ಬರಲು ಹಾಗೂ ಮರಳಿ ತಮ್ಮ ಊರಿಗೆ ಹೋಗಲು ಇದೇ ರಸ್ತೆ ಬಳಸುತ್ತಾರೆ ಎಂದು ಹೇಳುತ್ತಾರೆ ಗ್ರಾಮದ ಶಿವಕುಮಾರ ಪಿ.

ಕೊಳಾರ(ಕೆ) ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಬೀದರ್‌ಗೆ ತಲುಪಲು ಇದು ಸುಲಭ ದಾರಿಯಾಗಿದೆ. ಅಂತರ ಕಡಿಮೆ ಆಗುತ್ತದೆ. ನೌಬಾದ್ ಮಾರ್ಗವಾಗಿ ಬೀದರ್‍ಗೆ ಹೋದರೆ ಆರು ಕಿ.ಮೀ. ಅಂತರ ಹೆಚ್ಚಾಗುತ್ತದೆ ಎಂದು ತಿಳಿಸುತ್ತಾರೆ.

ಒಂದು ವರ್ಷದಿಂದ ರಸ್ತೆ ಹದಗೆಟ್ಟಿದೆ. ಅತಿವೃಷ್ಟಿಯಿಂದ ಡಾಂಬರು ಕಿತ್ತುಕೊಂಡು ಹೋಗಿದೆ. ಸಂಚಾರ ಪ್ರಯಾಸದಾಯಕವಾಗಿದೆ ಎಂದು ಹೇಳುತ್ತಾರೆ ಗ್ರಾಮದ ಮತ್ತೊಬ್ಬರು ನಿವಾಸಿ ಶಾಂತಕುಮಾರ ಚಂದಾ.

ರಸ್ತೆ ಹಾಳಾದ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಯಾಣಿಕರ ವೇದನೆ ತಪ್ಪಿಲ್ಲ ಎಂದು ತಿಳಿಸುತ್ತಾರೆ.

ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸುತ್ತಾರೆ ಗ್ರಾಮಸ್ಥರು.

ರಸ್ತೆ ಕುರಿತು ‘ಪ್ರಜಾವಾಣಿ’ಯು ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಸಂಪರ್ಕಿಸಿದರೆ, ‘ರಸ್ತೆಯನ್ನು ಪಿ.ಎಂ.ಜಿ.ಎಸ್.ವೈ.ಗೆ ಹಸ್ತಾಂತರಿಸಲಾಗಿದೆ’ ಎಂದು ತಿಳಿಸಿದರು. ಪ್ರತಿಕ್ರಿಯೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

ರಸ್ತೆ ಹದಗೆಟ್ಟಿರುವುದರಿಂದ ಬೆಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರ ಬೀದರ್‌ಗೆ ಬಂದು ಹೋಗಲು ತೊಂದರೆ ಉಂಟಾಗುತ್ತಿದೆ
ಶಿವಕುಮಾರ ಪಿ. ಬೆಳ್ಳೂರು, ಗ್ರಾಮಸ್ಥ
ಬೀದರ್-ಮನ್ನಾಎಖ್ಖೆಳ್ಳಿ ಮುಖ್ಯರಸ್ತೆಯಲ್ಲಿನ ಬೆಳ್ಳೂರು ಕ್ರಾಸ್‍ನಿಂದ ಬೆಳ್ಳೂರುವರೆಗಿನ ರಸ್ತೆ ಡಾಂಬರೀಕರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು.
- ಶಾಂತಕುಮಾರ ಚಂದಾ, ಬೆಳ್ಳೂರು ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.