
ಬೀದರ್: ‘ಜನವರಿ 24ರಿಂದ 26ರ ವರೆಗೆ ನಗರದ ಸಾಯಿ ಶಾಲೆಯ ಮೈದಾನದಲ್ಲಿ 4ನೇ ಆವೃತ್ತಿಯ ರಾಜ್ಯಮಟ್ಟದ ಪುಸ್ತಕ ಸಂತೆ ಹಮ್ಮಿಕೊಳ್ಳಲಾಗಿದೆ’ ಎಂದು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ತಿಳಿಸಿದರು.
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪುಸ್ತಕ ಸಂತೆಗೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಕಿದೆ. ಈ ತರಹದ ಸಂತೆ ಜಿಲ್ಲಾ ಕೇಂದ್ರಗಳಲ್ಲೂ ಹಮ್ಮಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಕನ್ನಡದ ಮಠವೆಂದೇ ಕರೆಸಿಕೊಳ್ಳುವ ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಲವು ತೋರಿದ್ದರಿಂದ ಬೀದರ್ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಗಡಿ ಜಿಲ್ಲೆ ಬೀದರ್‌ನಲ್ಲಿ ಅನೇಕ ಭಾಷೆಯ ಮಾತನಾಡುವ ಜನರಿದ್ದಾರೆ. ಗಡಿ ಜಿಲ್ಲೆಯಲ್ಲಿ ನಡೆಯಲಿರುವ ಸಂತೆಯಲ್ಲಿ ಬೆಂಗಳೂರಿನ 100 ಜನ ಸಾಹಿತಿಗಳು ಭಾಗವಹಿಸುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ, ವಿಶ್ವೇಶ್ವರ ಭಟ್, ಜೋಗಿ, ವಸುಧೇಂದ್ರ ಸೇರಿದಂತೆ ಪ್ರಮುಖ ಸಾಹಿತಿಗಳು, ಮಾಧ್ಯಮಗಳ ಸಂಪಾದಕರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಪ್ರತಿದಿನ ಎಂಟರಂತೆ ಮೂರು ದಿನಗಳಲ್ಲಿ ಒಟ್ಟು 24 ಚಿಂತನಾಗೋಷ್ಠಿಗಳು ಜರುಗಲಿವೆ. ಸಾಹಿತಿಗಳು ಹಾಗೂ ಓದುಗರನ್ನು ಮುಖಾಮುಖಿಗೊಳಿಸಿ, ಸಂವಾದಕ್ಕೂ ಅವಕಾಶ ಮಾಡಿಕೊಡಲಾಗುವುದು. ಓಲೆ ವಿಭಾಗದಲ್ಲಿ ಓದುಗರು ಪತ್ರ ಬರೆದು ತಮ್ಮ ವಿಷಯ ಹಂಚಿಕೊಳ್ಳಬಹುದು. ಹೊರಗಿನಿಂದ ಬರುವ ಎಲ್ಲಾ ಸಾಹಿತಿಗಳಿಗೆ ಬೀದರ್ ಜಿಲ್ಲೆಯ ಪ್ರವಾಸಿ ತಾಣಗಳ ದರ್ಶನ ಮಾಡಿಸಲಾಗುವುದು ಎಂದು ತಿಳಿಸಿದರು.
ಸಂತೆಯಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸುಮಾರು 50 ಸ್ಟಾಲ್‌ಗಳನ್ನು ತೆರೆಯಲಾಗುವುದು. ಸಪ್ನಾ, ಅಂಕಿತ, ನವ ಕರ್ನಾಟಕ ಸೇರಿದಂತೆ ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳು, ಪ್ರಕಾಶಕರು ಮಳಿಗೆಗಳನ್ನು ತೆರೆಯಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವುದು, ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ. ಜನ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುಸ್ತಕ ಖರೀದಿಸಲು ಪ್ರೇರೇಪಿಸಬೇಕಿದೆ ಎಂದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಜಿಲ್ಲೆಯಲ್ಲಿ ಪುಸ್ತಕ ಸಂತೆ ಹಮ್ಮಿಕೊಂಡಿರುವುದು ವಿನೂತನ ಕಾರ್ಯಕ್ರಮ. ಬೆಂಗಳೂರಿಗಿಂತ ದೊಡ್ಡ ಮಟ್ಟದ ಯಶಸ್ಸು ಗಳಿಸಲು ಸಂಕಲ್ಪ ಮಾಡಲಾಗಿದೆ. ವೇಗದ ಸಿದ್ಧತೆ ನಡೆದಿದೆ. ಜಿಲ್ಲೆಯ ಜನ ಕುಟುಂಬ ಸಮೇತರಾಗಿ ಭಾಗವಹಿಸಿ, ಕನಿಷ್ಠ ಒಂದು ಪುಸ್ತಕ ಖರೀದಿಸಿ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಕೋಶಾಧ್ಯಕ್ಷ ಶಿವಶಂಕರ್ ಟೋಕರೆ, ಪುಸ್ತಕ ಸಂತೆಯ ಸಂಚಾಲಕ ಗುರುನಾಥ ರಾಜಗೀರಾ, ವಿರೂಪಾಕ್ಷ ಗಾದಗಿ ಉಪಸ್ಥಿತರಿದ್ದರು.
ನಾನು ಎಡವೂ ಅಲ್ಲ, ಬಲವೂ ಅಲ್ಲ ಪುಸ್ತಕ ಪಂಥದವನು. ಮೂರು ದಿನಗಳ ಪುಸ್ತಕ ಸಂತೆಯಲ್ಲಿ ಎಲ್ಲ ವಿಚಾರಧಾರೆಯ ಲೇಖಕರನ್ನು ಆಹ್ವಾನಿಸಲಾಗಿದೆ.ವೀರಕಪುತ್ರ ಶ್ರೀನಿವಾಸ, ವೀರಲೋಕ ಪ್ರಕಾಶನ
ಯುವ ಜನಾಂಗ ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗಿದ್ದಾರೆ. ಅದರಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರನ್ನು ಪುಸ್ತಕಗಳ ಕಡೆಗೆ ಸೆಳೆಯಬೇಕಿದೆ.ಈಶ್ವರ ಬಿ. ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.