
ಬೀದರ್: ಡೀಸೆಲ್ ಬೆಲೆ ಏರಿಕೆ ಹಾಗೂ ನಿರ್ವಹಣಾ ವೆಚ್ಚದ ಹೊರೆ ತಪ್ಪಿಸಲು ದರ ಪರಿಷ್ಕರಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ಬೋರ್‌ವೆಲ್ ಮಾಲೀಕರು ಸತತ ಮೂರನೇ ದಿನವಾದ ಶನಿವಾರವೂ ಕೆಲಸ ಸ್ಥಗಿತಗೊಳಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಯುಕ್ರೇನ್ ಯುದ್ಧದ ಪರಿಣಾಮ ಬೋರ್‌ವೆಲ್ ಕೊರೆಯಲು ಬಳಸುವ ಪ್ರಮುಖ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ಯಂತ್ರೋಪಕರಣಗಳ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರವು ಕಳೆದ 10 ವರ್ಷಗಳಿಂದ ಬೋರ್‌ವೆಲ್ ಕೊರೆಯಲು ಒಂದೇ ದರ ನಿಗದಿಪಡಿಸಿದೆ. ಪ್ರಸ್ತುತ ಸರ್ಕಾರವು ಪ್ರತಿ ಮೀಟರ್‌ಗೆ ₹364 ರೂಪಾಯಿ ನೀಡುತ್ತಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿಯಲ್ಲಿ ಒಂದು ಮೀಟರ್ ಕೊರೆಯಲು ನಮಗೆ ಕನಿಷ್ಠ ₹450 ರೂಪಾಯಿಗಳಿಗಿಂತಲೂ ಅಧಿಕ ಖರ್ಚು ಬರುತ್ತಿದೆ. ಇದರಿಂದ ಪ್ರತಿ ಅಡಿಗೂ ನಾವು ನಷ್ಟ ಅನುಭವಿಸುವಂತಾಗಿದೆ ಎಂದು ಮಾಲೀಕರು ಗೋಳು ತೋಡಿಕೊಂಡಿದ್ದಾರೆ.
ಸರ್ಕಾರವು ಕೂಡಲೇ ಪ್ರತಿ ಮೀಟರ್ ಕೊರೆಯುವ ದರವನ್ನು ತಕ್ಷಣವೇ ₹550 ಕ್ಕೆ ಏರಿಸಬೇಕು. ಇಂಧನ ಬೆಲೆಗೆ ಅನುಗುಣವಾಗಿ ದರ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೋರ್‌ವೆಲ್ ಮಾಲೀಕರಾದ ಮಹಾದೇವ ಕುಮಾರ್, ಬಸವರಾಜ ಗೇವಾರೆ, ಲಕ್ಷ್ಮಣರಾವ್ ಕಾಂಬಳೆ, ಕಲ್ಯಾಣರಾವ್ ಬಿರಾದಾರ, ರಾಜರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.