ADVERTISEMENT

ಔರಾದ್: ಹೊತ್ತಿ ಉರಿದ ಬಸ್, 25 ಪ್ರಯಾಣಿಕರ ಪಾರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 13:25 IST
Last Updated 19 ಮಾರ್ಚ್ 2025, 13:25 IST
ಔರಾದ್ ಸಮೀಪದ ಕಪ್ಪೆಕೇರಿ ಬಳಿ ಹೊತ್ತು ಉರಿದ ಸಾರಿಗೆ ಸಂಸ್ಥೆ ಬಸ್ 
ಔರಾದ್ ಸಮೀಪದ ಕಪ್ಪೆಕೇರಿ ಬಳಿ ಹೊತ್ತು ಉರಿದ ಸಾರಿಗೆ ಸಂಸ್ಥೆ ಬಸ್    

ಔರಾದ್: ತಾಲ್ಲೂಕು ಕೇಂದ್ರಕ್ಕೆ ಸಮೀಪದ ಬೀದರ್-ಔರಾದ್ ರಸ್ತೆಯ ಕಪ್ಪೆಕೇರಿ ಬಳಿ ಬುಧವಾರ ಮಧ್ಯಾಹ್ನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ.

ಬೀದರ್‌ನಿಂದ ವಡಗಾಂವ್ ಮಾರ್ಗವಾಗಿ ಬರುತ್ತಿದ್ದ ಔರಾದ್ ಘಟಕದ ಬಸ್ ಕಪ್ಪೆಕೇರಿ ಬಳಿ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಭಯಭೀತರಾದ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿಯುತ್ತಿದ್ದಂತೆ ಹೊಗೆ ಬೆಂಕಿಯಾಗಿ ಇಡೀ ಬಸ್ ಧಗ ಧಗನೇ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ಬೆಂಕಿ ನಂದಿಸಿ ಎಂಜಿನ್ ಸ್ಪೋಟವಾಗುವುದನ್ನು ತಪ್ಪಿಸಿದ್ದಾರೆ.

‘ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಚಾಲಕ ಮಾರುತಿ ಪ್ರಯಾಣಿಕರನ್ನು ಕೆಳಗಿಳಿಯುಂತೆ ತಿಳಿಸಿದ್ದಾರೆ. ಹೀಗಾಗಿ ಯಾವುದೇ ಅನಾಹುತ ಆಗಿಲ್ಲ. ಎಂಜಿನಲ್ಲಿ ಹೊಗೆ ಕಾಣಿಸಿಕೊಂಡಿದ್ದೇ ಘಟನೆಗೆ ಕಾರಣ. ಆದರೂ ಈ ಬಗ್ಗೆ ಪರಿಶೀಲನೆ ನಂತರವೇ ಸೂಕ್ತ ಕಾರಣ ಗೊತ್ತಾಗಲಿದೆ’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‌ಐ ನಂದಕುಮಾರ, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೆಕರ್, ವಿಭಾಗೀಯ ಸಂಚಾರ ಅಧಿಕಾರಿ ಐ.ಎಂ.ಬಿರಾದಾರ, ತಾಂತ್ರಿಕ ಅಧಿಕಾರಿ ಗೋವಿಂದ, ಘಟಕ ವ್ಯವಸ್ಥಾಪಕ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಔರಾದ್ ಸಮೀಪದ ಕಪ್ಪೆಕೇರಿ ಬಳಿ ಬಸ್ ಹೊತ್ತು ಉರಿದ ಸ್ಥಳಕ್ಕೆ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಪೊಲೀಸರು ಸಾರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.