ಬೀದರ್: ತಾಲ್ಲೂಕಿನ ಕಮಠಾಣ ಸಮೀಪದ ನಂದಿನಗರದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಜಾನುವಾರು, ಕುಕ್ಕುಟ ಮತ್ತು ಮತ್ಸ್ಯಮೇಳಕ್ಕೆ ಸಿದ್ಧಗೊಂಡಿದೆ.
ವಿಶ್ವವಿದ್ಯಾಲಯವು ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. 200 ಮಳಿಗೆಗಳು ಸಿದ್ಧಗೊಂಡಿವೆ. ವಿವಿಧ ತಳಿಗಳ ಜಾನುವಾರು, ಪ್ರಗತಿಪರ ರೈತರ ಪ್ರಾತ್ಯಕ್ಷಿಕೆ ಗಮನ ಸೆಳೆಯಲಿವೆ. ಸುಮಾರು 200 ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಮೂರು ದಿನಗಳ ಮೇಳಕ್ಕೆ ಶುಕ್ರವಾರ (ಜ.17) ಬೆಳಿಗ್ಗೆ 11ಕ್ಕೆ ಚಾಲನೆ ದೊರೆಯಲಿದ್ದು, ಉದ್ಘಾಟನಾ ಸಮಾರಂಭಕ್ಕಾಗಿ ಭವ್ಯ ವೇದಿಕೆ ನಿರ್ಮಿಸಲಾಗಿದೆ. ಅದರ ಮುಂಭಾಗದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಗವಾನ ಗೌತಮ ಬುದ್ಧ, ಬಸವೇಶ್ವರರು ಸೇರಿದಂತೆ ಅನೇಕ ಮಹನೀಯರ ಮೂರ್ತಿ, ಭಾವಚಿತ್ರಗಳನ್ನು ಹೂವಿನಿಂದ ಅಲಂಕರಿಸಲಾಗಿದೆ.
ಕಾರ್ಯಕ್ರಮವನ್ನು ಪರಿಸರ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸುವರು. ಮೇಳಕ್ಕೆ ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ ಚಾಲನೆ ನೀಡುವರು. ಕೃಷಿ ಯಂತ್ರೋಪಕರಣಗಳ ಮಳಿಗೆಗಳನ್ನು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸುವರು. ಕೃಷಿ ಪ್ರದರ್ಶನಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡುವರು.
ಮತ್ಸ್ಯಮೇಳವನ್ನು ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ ಇಲಾಖೆ ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು. ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ವಹಿಸುವರು. ವಿ.ವಿ. ಕುಲಪತಿ ಡಾ.ಸಿ.ವೀರಣ್ಣ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಡೀನ್‌ರು ಪಾಲ್ಗೊಳ್ಳುವರು.
ಮಧ್ಯಾಹ್ನ 2.30ರಿಂದ ವಿಜ್ಞಾನಿಗಳೊಂದಿಗೆ ರೈತರ ಸಂವಾದ, ಮಧ್ಯಾಹ್ನ 3.30ಕ್ಕೆ ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ ಜರುಗಲಿದೆ. ಜ.18ರಂದು ಬೆಳಿಗ್ಗೆ 10.30ಕ್ಕೆ ವಿಜ್ಞಾನಿ –ರೈತರ ಸಂವಾದ, ಮಧ್ಯಾಹ್ನ 2ಕ್ಕೆ ರೈತ ಗೋಷ್ಠಿ, ಮಧ್ಯಾಹ್ನ 4ಕ್ಕೆ ಶ್ರೇಷ್ಠ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಜ.19ರಂದು ಬೆಳಿಗ್ಗೆ 10ಕ್ಕೆ ಶ್ವಾನ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಶ್ರೇಷ್ಠ ರೈತ ಮತ್ತು ರೈತ ಮಹಿಳೆಯರ ಪ್ರಶಸ್ತಿ ಪ್ರದಾನ ಸಮಾರಂಭ, ಮಧ್ಯಾಹ್ನ 2ಕ್ಕೆ ರೈತ ಗೋಷ್ಠಿ, ಮಧ್ಯಾಹ್ನ 3ಕ್ಕೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮೂರು ದಿನಗಳ ಮೇಳದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.