ADVERTISEMENT

ಬೀದರ್‌: ವಿವಿಧೆಡೆ ಸಂಭ್ರಮದ ರೇಣುಕಾಚಾರ್ಯರ ಜಯಂತಿ

ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಡಿ.ಜೆ. ಅಬ್ಬರದ ನಡುವೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:55 IST
Last Updated 2 ಮಾರ್ಚ್ 2026, 5:55 IST
ಕಾರ್ಯಕ್ರಮದಲ್ಲಿ ತಡೋಳಾ  ಮಠದ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಕಾರ್ಯಕ್ರಮದಲ್ಲಿ ತಡೋಳಾ  ಮಠದ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಬೀದರ್‌: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೇಣುಕಾಚಾರ್ಯ ಜಯಂತಿ ಉತ್ಸವ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಸಡಗರ, ಸಂಭ್ರಮದಿಂದ ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು.

ನಗರದ ಗಣೇಶ್‌ ಮೈದಾನದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಮಹಾವೀರ ವೃತ್ತ, ಹರಳಯ್ಯ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ರೋಟರಿ ವೃತ್ತದ ಮೂಲಕ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ವರೆಗೆ ಮೆರವಣಿಗೆ ಜರುಗಿತು.

ಸಾಂಪ್ರದಾಯಿಕ ಲಂಬಾಣಿ ಧಿರಿಸಿನಲ್ಲಿ ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಡಿ.ಜೆ. ಅಬ್ಬರದ ನಡುವೆ ಮೆರವಣಿಗೆ ಹರ್ಷೊಲ್ಲಾಸದಿಂದ ನಡೆಯಿತು. ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ADVERTISEMENT

ಬಳಿಕ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೇಹಕರ್, ತಡೋಳಾ ಹಾಗೂ ಡೋಣಗಾಪುರ ಮಠಗಳ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ‘ರೇಣುಕಾಚಾರ್ಯರ ಪ್ರಕಾರ ಧರ್ಮ ಎಂದರೆ ಸತ್ಯ, ನ್ಯಾಯ, ಪ್ರಾಮಾಣಿಕತೆ, ಪರಸ್ಪರ ಸೌರ್ಹಾದತೆಯಿಂದ ಬದುಕಿ ಇತರರಿಗೂ ಬದುಕಲು ಬಿಡುವುದು. ಇದ್ದುದರಲ್ಲಿಯೇ ನೆಮ್ಮದಿ ಬದುಕು ಸಾಗಿಸುವುದಾಗಿತ್ತು’ ಎಂದು ತಿಳಿಸಿದರು.

ಒಬ್ಬ ಮನುಷ್ಯನಲ್ಲಿ ಗಾಂಭೀರ್ಯ, ಸಜ್ಜನಿಕೆ ಸುಳಿಯಲು ನಿತ್ಯ ಲಿಂಗಪೂಜೆ, ಜಪ, ಧ್ಯಾನ, ಅರಾಧನೆ ಅಗತ್ಯ. ಅವು ನಮ್ಮ ಆಯುಷ್ಯ ಹಾಗೂ ಆರೋಗ್ಯ ಎರಡನ್ನೂ ವೃದ್ಧಿಸುತ್ತವೆ. ಹಿಂದೆ ಬ್ರಿಟಿಷರು ಬಿಟ್ಟು ಹೋದ ಮೆಕಾಲೆ ಮಾದರಿಯ ಶಿಕ್ಷಣ, ಅರ್ಥವಿಲ್ಲದ ಆರೋಗ್ಯ ವ್ಯವಸ್ಥೆ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅಪಾರದರ್ಶಕತೆಯಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಚಿವ ರಾಜಶೇಖರ್‌ ಬಿ.ಪಾಟೀಲ ಮಾತನಾಡಿ, ಇಂದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಬಹಳ ಮುಖ್ಯ. ಪಾಶ್ಚಿಮಾತ್ಯ ರಾಷ್ಟ್ರಗಳತ್ತ ನಮ್ಮ ಮಕ್ಕಳು ಮುಖ ಮಾಡಿರುವುದರಿಂದ ಪೋಷಕರು ವೃದ್ಧಾಶ್ರಮ ಸೇರುತ್ತಿದ್ದಾರೆ. ತೋರಿಕೆಯ ವಾತಾವರಣ ಹೆಚ್ಚಾಗುತ್ತಿದೆ. ಭಾರತದ ಅತ್ಯಂತ ಬಲಿಷ್ಠ ಸಮುದಾಯವಾಗಿರುವ ವೀರಶೈವ ಸಮಾಜ ಒಂದಾಗಬೇಕು ಎಂದು ತಿಳಿಸಿದರು.

ಹುಡಗಿಯ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಜೈ ಭಾರತ್‌ ಮಾತಾ ಸೇವಾ ಸಮಿತಿ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರು, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಬೀದರ್ ಮಹಾನಗರ ಪಾಲಿಕೆ ಸದಸ್ಯ ದಿಗಂಬರ್‌ ಮಡಿವಾಳ, ಸಮಿತಿಯ ಪದಾಧಿಕಾರಿಗಳಾದ ಡಾ.ರಜನೀಶ್‌ ವಾಲಿ, ಮಲ್ಲಿಕಾರ್ಜುನ ಮಾಶೆಟ್ಟಿ, ರೇವಣಸಿದ್ದಯ್ಯ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಸ್ವಾಗತಿಸಿದರೆ, ದೇವಿದಾಸ ಜೋಶಿ ನಿರೂಪಿಸಿದರು. ಶ್ರೀಕಾಂತ್‌ ಸ್ವಾಮಿ ಸೋಲಪುರ ವಂದಿಸಿದರು.
 

ರೇಣುಕಾಚಾರ್ಯರ ಜಯಂತಿ ಅಂಗವಾಗಿ ಬೀದರ್‌ನಲ್ಲಿ ಭಾನುವಾರ ಮೆರವಣಿಗೆ ನಡೆಯಿತು
ಮೆರವಣಿಗೆಯಲ್ಲಿ ಗಮನ ಸೆಳೆದ ಡೊಳ್ಳು ಕುಣಿತ

ಜಿಲ್ಲಾಧಿಕಾರಿ ಕಚೇರಿಯಲ್ಲಿ ರೇಣುಕ ಜಯಂತಿ

ಬೀದರ್: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ಜಗದ್ಗುರು ರೇಣುಕಾಚಾರ್ಯರು ಕೇವಲ ವೀರಶೈವ ಧರ್ಮಕ್ಕೆ ಉದ್ದರಿಸದೆ ಎಲ್ಲ 18 ಪಂಗಡಗಳಿಗೂ ಸಹ ಧರ್ಮೋಪದೇಶ ಮಾಡಿದ ಮಹಾನ್‌ ಸಂತರಾಗಿದ್ದರು ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್‌ ಪೂಜಾರಿ ಡಾಕುಳಗಿಯ ಚನ್ನಬಸವಾನಂದ ಶಿವಾಚಾರ್ಯ ಸ್ವಾಮೀಜಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ನಾಗರಾಜ್‌ ಕರ್ಪೂರ ಮಹೇಶ್ವರ ಸ್ವಾಮಿ ಮತ್ತಿತರರು ಹಾಜರಿದ್ದರು.

ರೇಣುಕ ಮಂದಿರದಲ್ಲಿ ಆಚರಣೆ

ಬೀದರ್: ನಗರದ ಹೊರ ವಲಯದಲ್ಲಿರುವ ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಭಾನುವಾರ ರೇಣುಕರ ಜಯಂತಿ ಆಚರಿಸಲಾಯಿತು. ಬೆಳಿಗ್ಗೆ ಯರನಳ್ಳಿಯ ವೇದಮೂರ್ತಿ ಶಿವಕುಮಾರ ಸ್ವಾಮೀಜಿ ಅವರು ರುದ್ರಾಭಿಷೇಕ ನಡೆಯಿತು. ರೇಣುಕ ಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಶ್ರೀಕಾಂತ್‌ ಸ್ವಾಮಿ ಸೋಲಪುರ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದ ಸಂಚಾಲಕ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಶಿವಕುಮಾರ್‌ ಸ್ವಾಮಿ ಸಂಗಮೇಶ್ವರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.