
ಬೀದರ್: ನಗರದ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರ ಅವ್ಯವಸ್ಥೆಯ ಗೂಡಾಗಿದೆ.
ರಂಗಮಂದಿರದೊಳಗಿನ ಹೆಚ್ಚಿನ ಪ್ಲಾಸ್ಟಿಕ್ ಆಸನಗಳು ಹಾಳಾಗಿವೆ. ಲೋಹ ಮೇಲೆ ಎದ್ದಿದ್ದು, ಕೆಲವೆಡೆ ಸಂಪೂರ್ಣ ಕಿತ್ತು ಹೋಗಿವೆ. ಕೆಲವು ಆಸನಗಳಂತೂ ತೂಗಾಡುತ್ತಿವೆ. ಅನೇಕರು ಅವುಗಳ ಮೇಲೆ ಕೂರಲು ಹೋಗಿ ಬಿದ್ದು ಗಾಯಗೊಂಡಿದ್ದಾರೆ.
ಯಾವ ಆಸನಗಳು ಹಾಳಾಗಿವೆಯೋ ಅವುಗಳನ್ನು ಗುರುತಿಸಿ, ಗುರುತು ಹಾಕಿಲ್ಲ. ಅವುಗಳ ಮೇಲೆ ಜನ ಕೂರದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಇನ್ನು, ರಂಗಮಂದಿರದ ಒಳಗೆ ಹಲವೆಡೆ ಟೈಲ್ಸ್ ಕಿತ್ತು ಹೋಗಿದೆ. ಜನ ನಡೆದಾಡುವಾಗ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಸಂಬಂಧಿಸಿದವರ ಗಮನಕ್ಕೆ ತಂದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಈ ಜಿಲ್ಲಾ ರಂಗಮಂದಿರದಲ್ಲಿ ವರ್ಷವಿಡೀ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಹೆಸರಾಂತ ಕಲಾವಿದರು ಕಾರ್ಯಕ್ರಮ ಕೊಡುತ್ತಾರೆ. ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಕೊರತೆ ಇಲ್ಲ. ಕಾರ್ಯಕ್ರಮಗಳಿಂದ ಆದಾಯವೂ ಬರುತ್ತಿದೆ. ಆದರೆ, ನಿರ್ವಹಣೆಯ ವಿಷಯದಲ್ಲಿ ಬಹಳ ಹಿಂದಿದೆ. ಅನೇಕ ಕಡೆ ಜಾಳು ಕಟ್ಟಿಕೊಂಡಿದೆ. ಶೌಚಾಲಯಗಳಲ್ಲಿ ದುರ್ಗಂಧ ಬರುತ್ತಿದೆ. ಆದರೆ, ಸ್ವಚ್ಛತೆಯ ಕಡೆಗೆ ಗಮನ ಹರಿಸಿಲ್ಲ.
ಬಹುತೇಕ ಎಲ್ಲಾ ಸರ್ಕಾರಿ ಕಾರ್ಯಕ್ರಮ, ಜಯಂತಿಗಳು ಇದೇ ರಂಗಮಂದಿರದಲ್ಲಿ ನಡೆಯುತ್ತವೆ. ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಆದರೆ, ರಂಗಮಂದಿರದ ಅವಸ್ಥೆ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಯಾರೂ ಹೇಳುವವರು, ಕೇಳುವವರು ಇಲ್ಲದರಿಂದ ಅಧಿಕಾರಿಗಳು ಯಾವುದರ ಬಗ್ಗೆಯೂ ಜಾಸ್ತಿ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಜನರ ಆರೋಪ.
ಸ್ವಲ್ಪ ಬಿರುಸಿನ ಮಳೆ ಬಂದರೆ ಇಡೀ ರಂಗಮಂದಿರದ ಆವರಣ ಭರ್ತಿಯಾಗುತ್ತದೆ. ಜನ ಹಾಗೂ ವಾಹನಗಳು ಹೊರಗೆ ಹೋಗಲು ಪರದಾಟ ನಡೆಸಬೇಕಾಗುತ್ತದೆ. ಈ ಕುರಿತು ಮಾಧ್ಯಮಗಳಲ್ಲಿ ಹಲವು ಸಲ ವರದಿಯಾಗಿದೆ. ಆದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಮಳೆಗಾಲ ಮುಗಿರುವುದರಿಂದ ಮುಂದಿನ ಮಳೆಗಾಲದಲ್ಲೇ ಈ ಸಮಸ್ಯೆ ನೆನಪಾಗುತ್ತದೆ. ಆದರೆ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿಲ್ಲ ಎನ್ನುವುದು ಜನರ ದೂರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಎರಡು ವರ್ಷಗಳ ಹಿಂದೆ ರಂಗಮಂದಿರ ನವೀಕರಣಗೊಳಿಸಲಾಗಿದೆ. ಆದರೆ ಭ್ರಷ್ಟಾಚಾರದಿಂದ ಕಳಪೆ ಕಾಮಗಾರಿ ಆಗಿದೆ. ಜಿಲ್ಲಾಡಳಿತ ಸರಿಪಡಿಸುವ ಕೆಲಸ ಮಾಡಬೇಕುರಮೇಶ ಬಿರಾದಾರ ಅಧ್ಯಕ್ಷ ಬೀದರ್ ಜಿಲ್ಲಾ ವಿಕಾಸ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.