
ಬೀದರ್: ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಸಕ್ರಮಗೊಳಿಸುವುದು, ಫಾರಂ ನಂ.57 ಸಲ್ಲಿಕೆಗೆ ಅವಧಿ ವಿಸ್ತರಿಸುವುದು, ಅಕ್ರಮ–ಸಕ್ರಮ ಸಮಿತಿ ಸಭೆಗಳನ್ನು ತಕ್ಷಣ ಕರೆಯಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ರ್‍ಯಾಲಿ ನಡೆಸಿ, ಮುಖ್ಯಮಂತ್ರಿ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಫಾರಂ ನಂ.50, 53 ಹಾಗೂ 57 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದರಿಂದ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಹಾಳ, ಹೊನ್ನಿಕೇರಿ, ಕಪಲಾಪುರ (ಜೆ), ಬೇಳಕೇರಾ, ಶಮಶಾನಗರ, ಟಿ. ಮಿರ್ಜಾಪೂರ, ಜಕನಾಳ, ನಂದಿಹಾಳ, ಸುಂದಾಳ ಹಾಗೂ ಹಂದಿಕೇರಾ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಕಿರುಕುಳ ಹೆಚ್ಚಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾವಿರಾರು ಎಕರೆ ಭೂಮಿ ನೀಡುತ್ತಿರುವಾಗ, ಬಡ ಜನರು ದಶಕಗಳಿಂದ ದುಡಿಯುತ್ತಿರುವ ಜಮೀನು ಕಸಿದುಕೊಳ್ಳಲಾಗುತ್ತಿದೆ. ಸಮಸ್ಯೆಗೆ ಶೀಘ್ರ ಪರಿಹಾರ ನೀಡದಿದ್ದಲ್ಲಿ ಫೆಬ್ರುವರಿ 12ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಬಾಬುರಾವ್ ಹೊನ್ನಾ,ಜಿಲ್ಲಾ ಕಾರ್ಯದರ್ಶಿ ನಜೀರ್ ಅಹ್ಮದ್, ಸರ್ವೋದಯ ಪಕ್ಷದ ಅಧ್ಯಕ್ಷ ಕೋಂಡಿಬಾ ಪಾಂಡ್ರೆ, ಕೆ.ಆರ್.ಆರ್.ಎಸ್. ಪ್ರಧಾನ ಕಾರ್ಯದರ್ಶಿ ಬಸವರಾಜ ಅಷ್ಟೂರೆ, ಸೂರ್ಯಕಾಂತ ಮದಕಟ್ಟಿ, ಜೈಶೀಲಕುಮಾರ, ಶೀಲಾ ಸಾಗರ, ಮೋಹಿದಮಿಯ್ಯಾ, ವೀರಶೆಟ್ಟಿ ವಟಂಬೆ, ಘಾಳೆಪ್ಪ ಕಪಲಾಪೂರ ಜೆ., ಪ್ರಭು ಹುಚಕನಳ್ಳಿ, ಪ್ರಭು ತಗಣಿಕರ, ಚಂದ್ರಕಾಂತ ಬರ್ದಾಪೂರ, ಶಫಾಯತ್ ಅಲಿ, ಶಿವಮೂರ್ತಿ, ವಿಠಲ, ಸೂರ್ಯಕಾಂತ ಬರ್ದಾಪೂರ, ಮುನಿರೊದ್ದೀನ್ ಬಗದಲ್, ಖದೀರಮಿಯ್ಯಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.