ಬೀದರ್: ಐತಿಹಾಸಿಕ ಕೋಟೆ, ಕೊತ್ತಲಗಳನ್ನು ಹೊಂದಿರುವ ಅಪರೂಪದ ಕೆಲವೇ ನಗರಗಳಲ್ಲಿ ಬೀದರ್ ಕೂಡ ಒಂದು. ನಗರದ ಬಹಮನಿ ಕೋಟೆ, ಮಹಮೂದ್ ಗಾವಾನ್ ಮದರಸಾದಂತಹ ಸ್ಮಾರಕಗಳಿಂದ ಬೀದರ್‌ಗೆ ಅದರದ್ದೇ ಆದ ಗುರುತು ಇದೆ.
ಆದರೆ, ಅಸ್ಮಿತೆಯ ಪ್ರತೀಕದಂತಿರುವ ಈ ಸ್ಮಾರಕಗಳನ್ನು ಕಾಳಜಿ ವಹಿಸಿ ಸಂರಕ್ಷಿಸುವುದು ಕೂಡ ಅಷ್ಟೇ ಪ್ರಮುಖವಾದದ್ದು. ಬೀದರ್ ಕೋಟೆಯು ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ, ಅದರ ದೇಖ–ರೇಖಿ ವಿಷಯ ಬಂದಾಗ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಅನಿಸುತ್ತಿದೆ.
ರಾಜ್ಯದ ಹಂಪಿ, ಬಾದಾಮಿ ಸೇರಿದಂತೆ ಇತರೆ ಸಂರಕ್ಷಿತ ಸ್ಮಾರಕಗಳಿಗೆ ಸಿಗುವ ಪ್ರಾಧ್ಯಾನತೆ ಬೀದರ್ ಕೋಟೆಗೆ ಸಿಗುತ್ತಿಲ್ಲ. ಈ ಸ್ಥಳಗಳಲ್ಲಿ ಸತತವಾಗಿ ನಡೆಯುತ್ತಿರುವ ಜೀರ್ಣೊದ್ಧಾರ ಕೆಲಸಗಳೇ ಇದಕ್ಕೆ ಸಾಕ್ಷಿ. ಹಾಗಂತ ಬೀದರ್ ಕೋಟೆಯಲ್ಲಿ ಏನೂ ನಡೆಯುತ್ತಿಲ್ಲ ಎಂದರ್ಥವಲ್ಲ. ಆದರೆ, ಯಾವ ಮಟ್ಟಿಗೆ ಜೀರ್ಣೊದ್ಧಾರ ಕೆಲಸವಾಗಬೇಕು ಅಷ್ಟರಮಟ್ಟಿಗೆ ಆಗುತ್ತಿಲ್ಲ ಎನ್ನುವುದು ಸ್ಥಳೀಯರ ಕೊರಗು.
15ನೇ ಶತಮಾನದಲ್ಲಿ ಬಹಮನಿ ಮನೆತನದ ಸುಲ್ತಾನ್ ಅಹಮ್ಮದ್ ಷಾ ಕಲಬುರಗಿಯಿಂದ ಬೀದರ್‌ಗೆ ತನ್ನ ರಾಜಧಾನಿ ಸ್ಥಳಾಂತರಿಸಿ, ಬಳಿಕ ಕೋಟೆ ನಿರ್ಮಿಸಿದ್ದ. ಕೋಟೆಯ ಒಳಭಾಗದಲ್ಲಿ ತನಗೇ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಅಪರೂಪದ ವಾಸ್ತುಶಿಲ್ಪ ಹೊಂದಿರುವ ಕಟ್ಟಡಗಳನ್ನು ನಿರ್ಮಿಸಿದ್ದ. ಅದರಲ್ಲಿ ‘ಗಗನ್ ಮಹಲ್’, ‘ಕುತ್ತೇ ಖಾನಾ’ ಕೂಡ ಒಂದು. ಈಗ ಈ ಎರಡೂ ಸ್ಮಾರಕಗಳ ಗೋಡೆಗಳು ಕುಸಿದು ಬಿದ್ದಿವೆ. ಈ ಸ್ಮಾರಕಗಳನ್ನು ತುರ್ತಾಗಿ ಮೊದಲಿನಂತೆ ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಏನೆನ್ನುತ್ತಾರೆ? ‘ಮಳೆಯಿಂದ ‘ಕುತ್ತೇ ಖಾನಾ’ ಹಾಗೂ ‘ಗಗನ್ ಮಹಲ್’ ಸ್ಮಾರಕಕ್ಕೆ ಧಕ್ಕೆ ಆಗಿರುವುದು ಗಮನಕ್ಕೆ ಬಂದಿದೆ. ಈ ವಿಷಯವನ್ನು ಈಗಾಗಲೇ ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ. ಅಲ್ಲಿಂದ ನಿರ್ದೇಶನ ಬಂದ ನಂತರ ದುರಸ್ತಿಗೊಳಿಸಲಾಗುವುದು. ಇತರೆ ಸ್ಮಾರಕಗಳ ಜೀರ್ಣೊದ್ಧಾರದ ಪ್ರಸ್ತಾವ ಇದೆ’ ಎಂದು ಹೆಸರು ಹೇಳಲಿಚ್ಛಿಸದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಬೀದರ್ ವಿಭಾಗದ ಅಧಿಕಾರಿ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.
ಯಾವ್ಯಾವ ಸ್ಮಾರಕಗಳಿಗೆ ಹಾನಿ? ಕಳೆದ ಎರಡು ತಿಂಗಳಿಂದ ಬೀದರ್ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಸತತ ಮಳೆಗೆ ಬೆಳೆ ಮನೆಗಳಿಗೆ ಹಾನಿ ಉಂಟಾಗಿದೆ. ಸ್ಮಾರಕವೂ ಅದಕ್ಕೆ ಹೊರತಾಗಿಲ್ಲ. ಆಗಸ್ಟ್ 28ರಂದು ಕೋಟೆಯ ‘ಕುತ್ತೇ ಖಾನಾ’ ಬದಿಯ ಗೋಡೆ ಕುಸಿದು ಬಿದ್ದರೆ ಸೆಪ್ಟೆಂಬರ್ 24ರಂದು ‘ಗಗನ್ ಮಹಲ್’ ಸ್ಮಾರಕ ಮೇಲ್ಭಾಗದ ಗೋಡೆ ಕುಸಿದು ಬಿದ್ದಿದೆ. ತಾತ್ಕಾಲಿಕವಾಗಿ ಅದರ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಇತರೆ ಸ್ಮಾರಕಗಳಿಗೂ ಈ ಭೀತಿ ಎದುರಾಗಿದ್ದು ತುರ್ತು ಕ್ರಮ ಕೈಗೊಳ್ಳಬೇಕೆನ್ನುವುದು ಸ್ಮಾರಕಪ್ರಿಯರ ಹಕ್ಕೊತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.