ADVERTISEMENT

ಬೀದರ್‌ | ಅತಿವೃಷ್ಟಿ: ಕಡ್ದು ಕೊಟ್ಟವರಿಗೆ ಖುಷಿ, ಪಡೆದವರಿಗೆ ಸಂಕಟ

ಅತಿವೃಷ್ಟಿಯಿಂದ ಬೀದರ್‌ ಜಿಲ್ಲೆಯಲ್ಲಿ 1.67 ಲಕ್ಷ ಹೆಕ್ಟೇರ್ ಬೆಳೆ ಹಾನಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಅಕ್ಟೋಬರ್ 2025, 6:17 IST
Last Updated 29 ಅಕ್ಟೋಬರ್ 2025, 6:17 IST
<div class="paragraphs"><p>&nbsp;ಸಾಂದರ್ಭಿಕ ಚಿತ್ರ</p></div>

 ಸಾಂದರ್ಭಿಕ ಚಿತ್ರ

   

ಬೀದರ್‌: ಹೊಲ ಕಡ್ದು ಕೊಟ್ಟವರಿಗೆ ಖುಷಿ, ಪಡೆದವರು ಸಂಕಷ್ಟಕ್ಕೆ..

ಅತಿವೃಷ್ಟಿಯಿಂದ ಬೀದರ್‌ ಜಿಲ್ಲೆಯಲ್ಲಿ ಸದ್ಯ ನಿರ್ಮಾಣಗಿರುವ ಪರಿಸ್ಥಿತಿ ಇದು.

ADVERTISEMENT

ಬೀದರ್‌ ಜಿಲ್ಲೆಯಲ್ಲಿ ‘ಹೊಲ ಕಡ್ದು ಕೊಡುವುದು’ ಅಂದರೆ ತಮ್ಮ ಜಮೀನು ಬೇರೆಯವರಿಗೆ ಲೀಜ್‌ ಮೇಲೆ ಕೊಡುವುದು ಎಂದರ್ಥ. ಉದಾಹರಣೆಗೆ ಒಂದು ಎಕರೆ ಜಮೀನು ಬೇರೆಯವರಿಗೆ ಲೀಜ್‌ ಕೊಟ್ಟು ವರ್ಷಕ್ಕೆ ₹15ರಿಂದ ₹20 ಸಾವಿರದ ವರೆಗೆ ಮೂಲ ಮಾಲೀಕರು ಪಡೆದುಕೊಳ್ಳುತ್ತಾರೆ. ವರ್ಷವಿಡೀ ಆ ಹೊಲದಲ್ಲಿ ಲೀಜ್‌ ಪಡೆದವರು ಯಾವುದೇ ಬೆಳೆ, ಎಷ್ಟು ಬೇಕಾದರೂ ಬೆಳೆಯಬಹುದು. ಅದಕ್ಕಿಂತ ಹೆಚ್ಚಿನದೇನೂ ಅವರು ಮಾಡುವಂತಿಲ್ಲ.

ಆದರೆ, ಈ ಸಲ ಅತಿವೃಷ್ಟಿಯಿಂದ ಬೀದರ್‌ ಜಿಲ್ಲೆಯಲ್ಲಿ 1.67 ಲಕ್ಷ ಹೆಕ್ಟೇರ್‌ ಬೆಳೆ ಹಾಳಾಗಿದೆ ಎಂದು ಜಂಟಿ ಸಮೀಕ್ಷೆಯಿಂದ ಗೊತ್ತಾಗಿದೆ. ಇದು ಸರ್ಕಾರದ ವಿವಿಧ ಮಾನದಂಡಗಳ ಪ್ರಕಾರ ಗುರುತಿಸಿರುವಂತಹದ್ದು. ಇದಕ್ಕೂ ಹೊರತಾಗಿ ಸಾಕಷ್ಟು ಬೆಳೆಗಳು ಹಾಳಾಗಿದೆ. ಇಂತಹವರು ಪರಿಹಾರದ ವ್ಯಾಪ್ತಿಗೆ ಬಂದಿಲ್ಲ.

ಇನ್ನು, ಸರ್ಕಾರ ಗುರುತಿಸಿರುವ ರೈತರಿಗೆ ಅಕ್ಟೋಬರ್‌ ಅಂತ್ಯದೊಳಗೆ ಪರಿಹಾರ ವಿತರಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಜಿಲ್ಲೆಯಲ್ಲಿ ಲೀಸ್‌ ಮೇಲೆ ಕೃಷಿ ಮಾಡುತ್ತಿರುವವರ ಸಂಖ್ಯೆ ಬಹಳ ಹೆಚ್ಚಿದೆ. ಬಂಡವಾಳ ಹಾಕಿ ಬೆಳೆ ಬೆಳೆಸಿರುವುದು ಇವರೇ. ಆದರೆ, ಪಹಣಿಯಲ್ಲಿ ಜಮೀನಿನ ಮೂಲ ಮಾಲೀಕರ ಹೆಸರು ಇರುವುದರಿಂದ ಪರಿಹಾರ ಧನ ಅವರ ಖಾತೆಗೆ ಜಮೆ ಆಗುತ್ತದೆ. ನೈಜವಾಗಿ ಕೃಷಿ ಮಾಡಿದವರಿಗೆ ಪರಿಹಾರ ಸಿಗುವುದಿಲ್ಲ. ಇದು ಅವರ ಕಳವಳಕ್ಕೆ ಕಾರಣವಾಗಿದೆ.

ಹಿಂಗಾರಿನಲ್ಲೂ ಕಾಡುತ್ತಿರುವ ಮಳೆ
ಮುಂಗಾರಿನಲ್ಲಿ ಹೆಚ್ಚುವರಿ ಮಳೆಯಾದ ಕಾರಣ ಜಿಲ್ಲೆಯ ಬಹುತೇಕ ಬೆಳೆಗಳು ನೆಲಕಚ್ಚಿವೆ. ಹಿಂಗಾರಿನಲ್ಲಾದರೂ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ, ಅಕ್ಟೋಬರ್‌ ತಿಂಗಳು ಮುಗಿಯುತ್ತ ಬಂದರೂ ಜಿಲ್ಲೆಯಾದ್ಯಂತ ಮಳೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಹಿಂಗಾರು ಕೃಷಿ ಚಟುವಟಿಕೆಗಳಿಗೆ ಬಹಳ ಹಿನ್ನಡೆ ಉಂಟಾಗಿದೆ. ನೆಲದಲ್ಲಿ ಹೆಚ್ಚಿನ ತೇವಾಂಶ ನೀರು ಸಂಗ್ರಹಗೊಂಡಿರುವುದರಿಂದ ಬಿತ್ತನೆಗೆ ಸಮಸ್ಯೆ ಉಂಟಾಗಿದೆ.
ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಹಾಕಿದ ಬಂಡವಾಳವೂ ವಾಪಸ್‌ ಬಂದಿಲ್ಲ. ಆದಕಾರಣ ಲೀಜ್‌ ಪಡೆದು ಕೃಷಿ ಮಾಡಿದವರಿಗೆ ಪರಿಹಾರ ನೀಡಬೇಕು
ರಾಮಣ್ಣ ಮನ್ನಾ,ಏಖ್ಖೆಳ್ಳಿ ರೈತ
ಯಾರು ಜಮೀನಿನಲ್ಲಿ ವಾಸ್ತವವಾಗಿ ಉಳುಮೆ ಮಾಡುತ್ತಾರೋ ಅಂತಹವರಿಗೆ ಪರಿಹಾರ ಧನ ಸೇರಬೇಕೇ ಹೊರತು ಮೂಲ ಮಾಲೀಕರಿಗಲ್ಲ
ಮಲ್ಲಿಕಾರ್ಜುನ ಬೀದರ್‌ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.