ಬೀದರ್: ನಗರದ ಗಾಂಧಿ ಗಂಜ್ ಹಾಗೂ ನೂತನ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ₹2 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಗುಟ್ಕಾ, ಪಾನ್ ಮಸಾಲ ಜಪ್ತಿ ಮಾಡಿ ಎಂಟು ಜನ ಆರೋಪಿಗಳನ್ನು ಶನಿವಾರ ವಶಕ್ಕೆ ಪಡೆದು, ಭಾನುವಾರ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ತೆಲಂಗಾಣ ಹೈದರಾಬಾದ್‌ನ ತನ್ವೀರ್, ಬೀದರ್‌ನ ರಿಜ್ವಾನ್, ತನ್ವೀರ್ ಶೇರಿಕಾರ್, ಮಣಿಪುರದ ಥೋಂಬಲ್ ಮೌಜಿಂಗ್‌ನ ಯಾಸೀನ್, ಬಿಶೇನಪುರ ಕೊಕ್ಟಾದ ಮುಹಮ್ಮದ್ ಸಿರಾಜ್ ಖಾನ್, ಮುಹಮ್ಮದ್ ಷರೀಫ್ ಖಾನ್, ಮುಹಮ್ಮದ್ ರೋಹಿತ್ ಖಾನ್ ಹಾಗೂ ಇಂಫಾಲ್ ನಹರೂಪ್ ಪಂಗೂನ್‌ನ ಮುಹಮ್ಮದ್ ಅನಸ್ ಬಂಧಿತರು. ಮಣಿಪುರದ ಇನ್ನಿಬ್ಬರು ಹಾಗೂ ಬೀದರ್‌ನ ಒಬ್ಬ ಕಾರ್ಮಿಕನ ಪತ್ತೆಗೆ ಹುಡುಕಾಟ ನಡೆದಿದೆ.
‘ಬಂಧಿತ ಆರೋಪಿಗಳು ನಗರದ ಕೊಳಾರ (ಕೆ) ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರದಿಂದ ಅನುಮತಿ ಪಡೆಯದೇ ಗುಟ್ಕಾ, ತಂಬಾಕು ಹಾಗೂ ಪಾನ್ ಮಸಾಲ್ ತಯಾರಿಸುತ್ತಿದ್ದರು. ಅದನ್ನು ನಗರದ ಚಿದ್ರಿ ಬುತ್ತಿ ಬಸವಣ್ಣ ದೇವಸ್ಥಾನದ ಸಮೀಪದಲ್ಲಿ ಮುಖ್ಯ ಆರೋಪಿ ತನ್ವೀರ್ ಮನೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಅಲ್ಲಿಂದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದರು. ತೆರಿಗೆ ವಂಚಿಸಲು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಮ್ಮ ಇಂಟೆಲಿಜೆನ್ಸ್ ವಿಭಾಗದ ಖಚಿತ ಮಾಹಿತಿಯ ಮೇರೆಗೆ ಚಿದ್ರಿಯ ಮನೆ ಹಾಗೂ ಕೊಳಾರ ಕೈಗಾರಿಕಾ ಪ್ರದೇಶದ ಎರಡು ಗೋದಾಮುಗಳಲ್ಲಿ ಕಾರ್ಯಾಚರಣೆ ನಡೆಸಿ, ಗುಟ್ಕಾ, ಪಾನ್ ಮಸಾಲ್ ತಯಾರಿಸಲು ಬೇಕಾದ ಕಚ್ಚಾ ವಸ್ತು, ರಾಸಾಯನಿಕ ಹಾಗೂ ಎಎಎ, 5ಎಚ್‌ಕೆ, ಜೋಕರ್, ಎಸ್‌ಐಕೆ ಹೆಸರಿನ ಪಾನ್ ಮಸಾಲ ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.
‘ಚಿದ್ರಿಯ ಮನೆಯಿಂದ ₹1.76 ಕೋಟಿ ಮೌಲ್ಯದ ಗುಟ್ಕಾ, ಪಾನ್ ಮಸಾಲ ಜಪ್ತಿ ಮಾಡಿದರೆ, ಕೊಳಾರ ಕೈಗಾರಿಕಾ ಪ್ರದೇಶದ ಗೋದಾಮುಗಳಿಂದ ₹43.30 ಲಕ್ಷ ಮೌಲ್ಯದ ಗುಟ್ಕಾ, ಪಾನ್ ಮಸಾಲ ತಯಾರಿಸಲು ಬೇಕಾದ ಕಚ್ಚಾ ವಸ್ತು, ರಾಸಾಯನಿಕ ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.
ಗಾಂಧಿ ಗಂಜ್ ಠಾಣೆ, ನೂತನ ನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಎಮ್.ಡಿ. ಸನದಿ, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಖಾಜಾ ಖಲೀಲುಲ್ಲಾ, ಆಹಾರ ಸುರಕ್ಷತಾ ಇಲಾಖೆಯ ಅಂಕಿತ ಅಧಿಕಾರಿ ಸಂತೋಷ್ ಕಾಳೆ, ಮನೋಹರ್ ಅಲಶೆಟ್ಟಿ, ಗಾಂಧಿಗಂಜ್ ಠಾಣೆಯ ಪಿಐ ಆನಂದರಾವ್ ಎಸ್.ಎನ್., ಸೆನ್ ಪೊಲೀಸ್ ಠಾಣೆ ಪಿಐ ಶಿವಾನಂದ ಘಾಣಿಗೇರ್, ಗಾಂಧಿಗಂಜ್ ಠಾಣೆಯ ಪಿಎಸ್‌ಐ ದಶರಥ, ನೂತನ ನಗರ ಠಾಣೆಯ ಪಿಐ ವಿಜಯಕುಮಾರ್, ಡಿಎಸ್‌ಬಿ ಘಟಕದ ಹೆಡ್ ಕಾನ್‌ಸ್ಟೆಬಲ್ ಸಂತೋಷ್, ಚಿಂತಾಕಿ ಠಾಣೆಯ ಸಂತೋಷ್, ಅನಿಲ್, ಗಂಗಾಧರ, ಸುಧೀರ, ಅಜಯ ಸಿಂಗ್, ರಾಜಕುಮಾರ, ಇಸ್ಮಾಯಿಲ್, ರಾಜಕಿರಣ ಪಾಲ್ಗೊಂಡಿದ್ದರು. ಎಲ್ಲರೂ ಉತ್ತಮ ಕೆಲಸ ಮಾಡಿದ್ದು, ಪ್ರಶಂಸನಾ ಪತ್ರ ನೀಡಿ, ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಾಂಶಗಳು...
* ಪೊಲೀಸರು, ಆಹಾರ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಕಾರ್ಯಾಚರಣೆ
* ತೆಲಂಗಾಣ, ಮಣಿಪುರದವರ ಬಂಧನ
* ಅನುಮತಿ ಪಡೆಯದೇ ಗುಟ್ಕಾ ತಯಾರಿಸಿ ಮಾರಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.