
ಬೀದರ್‌ನ ಮನ್ನಳ್ಳಿ ರಸ್ತೆಯಲ್ಲಿ ಹೊಸದಾಗಿ ಅಳವಡಿಸಿರುವ ವಿದ್ಯುತ್ ದೀಪಗಳು
ಪ್ರಜಾವಾಣಿ ಚಿತ್ರ
ಬೀದರ್: ನಗರದ ಪ್ರಮುಖ ರಸ್ತೆಗಳಲ್ಲಿ ಹೊಸ ವಿದ್ಯುತ್ ಕಂಬ ಹಾಗೂ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಮೂರು ತಿಂಗಳಾದರೂ ಅವುಗಳು ಬೆಳಗಿಲ್ಲ. ನಾಮಕವಾಸ್ತೆ ವಿದ್ಯುತ್ ದೀಪಗಳು ಎಂಬಂತಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಅಡಿಯಲ್ಲಿ ಹೊಸದಾಗಿ ನಗರದ ಪ್ರಮುಖ ರಸ್ತೆಗಳಯುದ್ದಕ್ಕೂ ವಿನೂತನ ಮಾದರಿಯ ವಿದ್ಯುತ್ ಕಂಬ–ದೀಪಗಳನ್ನು ಅಳವಡಿಸಲಾಗಿದೆ. ಚಿದ್ರಿ ರಿಂಗ್‌ರೋಡ್‌ನಲ್ಲಿರುವ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಸೇರಿದ ಮನೆಯಿರುವ ರಸ್ತೆಯಲ್ಲಿ ವಿದ್ಯುತ್ ದೀಪಗಳು ಬೆಳಗುತ್ತಿವೆ. ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಹೋದ ವರ್ಷವೇ ಅಳವಡಿಸಿ, ಚಾಲನೆ ನೀಡಲಾಗಿದೆ. ಆದರೆ, ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಮನ್ನಳ್ಳಿ ರಸ್ತೆಯುದ್ದಕ್ಕೂ ದೀಪಗಳು ಬೆಳಗಿಲ್ಲ.
ನಗರದಲ್ಲಿ ಅತಿ ಹೆಚ್ಚು ಜನದಟ್ಟಣೆ, ಜನ ಹಾಗೂ ವಾಹನಗಳು ಓಡಾಡುವ ರಸ್ತೆಯೆಂದರೆ ಮನ್ನಳ್ಳಿ ರಸ್ತೆ. ಬೊಮ್ಮಗೊಂಡೇಶ್ವರ ವೃತ್ತದಿಂದ ಚಿಟ್ಟಾ ಕ್ರಾಸ್ ವರೆಗಿನ ರಸ್ತೆ ವಿಭಜಕಗಳಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿದೆ. ಆದರೆ, ಅವುಗಳು ಬೆಳಗುತ್ತಿಲ್ಲ. ಅಲ್ಲಲ್ಲಿ ಕೆಲವೊಂದು ಹಳೆಯ ದೀಪಗಳು ಬೆಳಗುತ್ತಿವೆ. ಹೆಚ್ಚಿನ ರಸ್ತೆಯ ಭಾಗ ಅಂಧಕಾರದಲ್ಲಿ ಮುಳುಗಿರುತ್ತಿದೆ. ಇದರಿಂದ ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ.
ಬೀದರ್ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಮುಕುಲ್ ಜೈನ್ ಅವರು, ‘ಪ್ರಮುಖ ರಸ್ತೆಗಳ ವಿದ್ಯುತ್ ದೀಪಗಳನ್ನು ಸುಧಾರಿಸುವುದು ನನ್ನ ಮೊದಲ ಆದ್ಯತೆ’ ಎಂದು ಹೇಳಿದ್ದರು. ತಿಂಗಳೊಳಗೆ ಎಲ್ಲ ಸರಿಪಡಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಆದರೆ, ಮೂರು ತಿಂಗಳು ಗತಿಸಿದರೂ ಏನೂ ಆಗಿಲ್ಲ.
‘ಬೀದರ್ ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯು ಶಿವನಗರ ಮುಖ್ಯರಸ್ತೆ, ಹೈದರಾಬಾದ್ ಮುಖ್ಯರಸ್ತೆಗಷ್ಟೇ ಪ್ರಾಮುಖ್ಯತೆ ನೀಡುತ್ತಿದೆ. ಗುಂಪಾದಂತಹ ಪ್ರಮುಖ ಪ್ರದೇಶವನ್ನು ಕಡೆಗಣಿಸುತ್ತಿದೆ. ಈ ಧೋರಣೆ ಸರಿಯಲ್ಲ. ಈ ಭಾಗದವರು ತೆರಿಗೆ ಪಾವತಿಸುವುದಿಲ್ಲವೇ? ಪೌರಾಡಳಿತ ಸಚಿವ ರಹೀಂ ಖಾನ್ ಅವರು ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಹೊಸ ವಿದ್ಯುತ್ ದೀಪಗಳನ್ನು ಹಾಕಿಸಿಕೊಂಡಿದ್ದಾರೆ. ಬೇರೆ ಕಡೆ ಹಾಕಿಸಲು ಅವರಿಗೇನು ಕಷ್ಟ’ ಎಂದು ಗುಂಪಾ ನಿವಾಸಿಗಳಾದ ಶಿವರಾಜ, ಪಾಂಡುರಂಗ, ವೀರಶೆಟ್ಟಿ ಮತ್ತಿತರರು ಪ್ರಶ್ನಿಸಿದ್ಧಾರೆ.
ಈ ಸಂಬಂಧ ಮುಕುಲ್ ಜೈನ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಗುಂಪಾ ರಸ್ತೆಯಲ್ಲಿ ಹೊಸ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ಮುಗಿದಿದೆ. ಆದರೆ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಅವುಗಳನ್ನು ಕೂರಿಸಿ ಪ್ರಯೋಜನವೇನು?ರಾಜಾರಾಮ ಚಿಟ್ಟಾ ಸದಸ್ಯ ಬೀದರ್ ಮಹಾನಗರ ಪಾಲಿಕೆ
ಈ ಹಿಂದೆ ಹೊಸ ವಿದ್ಯುತ್ ದೀಪಗಳನ್ನು ರಸ್ತೆ ಪಕ್ಕ ತಂದು ಇರಿಸಲಾಗಿತ್ತು. ಆರು ತಿಂಗಳ ಬಳಿಕ ಅವುಗಳನ್ನು ಕೂರಿಸಲಾಗಿದೆ. ಆದರೆ ಅವುಗಳು ನೋಡಲಷ್ಟೇ ಸೀಮಿತ.ಸಂಜೀವಕುಮಾರ್ ಸಜ್ಜನ್ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.