ADVERTISEMENT

ಬೀದರ್‌ | ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಿ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 14:25 IST
Last Updated 29 ಆಗಸ್ಟ್ 2025, 14:25 IST
   

ಬೀದರ್‌: ಮೂರ್ನಾಲ್ಕು ದಿನ ಸುರಿದ ಸತತ ಮಳೆಗೆ ಜಿಲ್ಲೆಯಾದ್ಯಂತ ಆಗಿರುವ ಹಾನಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪರಾಮರ್ಶನ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ವಿಪರೀತ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾನಿಯ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ವಿಮೆ ಕಂಪನಿಗಳಿಂದ ಸೂಕ್ತ ಪರಿಹಾರ ದೊರಕಿಸಿಕೊಡಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಡಳಿತ ಮತ್ತು ಕೃಷಿ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಕಳೆದ 15 ದಿನಗಳ ಹಿಂದೆ ಹಾಗೂ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಪುನರ್ ಸ್ಥಾಪನೆಗೆ ತಕ್ಷಣವೇ ಕ್ರಮ ವಹಿಸಬೇಕು. ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ವಾಟ್ಸ್‌ಆ್ಯಪ್‌‌ನಲ್ಲಿ ಮಾಹಿತಿ ತರಿಸಿಕೊಳ್ಳುವ ಪ್ರವೃತ್ತಿ ಬಿಟ್ಟು, ತಾವೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ADVERTISEMENT

ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿ ಹಲವು ಗ್ರಾಮಗಳಿಗೆ ಬಸ್ ಸಂಚಾರ ಸ್ಥಗಿತವಾಗಿದೆ. ಔರಾದ್, ಕಮಲನಗರ, ಭಾಲ್ಕಿ ತಾಲ್ಲೂಕುಗಳ ಹೆಚ್ಚಿನ ಗ್ರಾಮಗಳಲ್ಲಿ ಬಸ್ ಸಂಚಾರ ಸ್ಥಗಿತವಾಗಿದೆ. ಕೂಡಲೇ ಮರುಸ್ಥಾಪಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಗುಂಡಿ ಮುಚ್ಚಿರಿ:

ಒಂದು ವಾರದಲ್ಲಿ ಬೀಳುವ ಮಳೆ ಒಂದೇ ದಿನದಲ್ಲಿ ಬಿದ್ದಿರುವ ಪರಿಣಾಮವಾಗಿ ಹಲವು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ದ್ವಿಚಕ್ರ ವಾಹನ ಚಾಲಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಕೂಡಲೇ ಈ ಎಲ್ಲ ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಬೇಕು. ಮಳೆಗಾಲ ಮುಗಿದ ತರುವಾಯ ಅಕ್ಟೋಬರ್ ತಿಂಗಳಲ್ಲಿ ಶಾಶ್ವತವಾಗಿ ಈ ರಸ್ತೆಗಳ ದುರಸ್ತಿ ಕಾರ್ಯ ಮಾಡಿಸಬೇಕೆಂದು ಸೂಚಿಸಿದರು.

ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿ ಎಷ್ಟು ಹಣ ಲಭ್ಯವಾಗಲಿದೆ ಎಂಬುದನ್ನು ಅಂದಾಜು ಮಾಡಿ, ಮಳೆಯಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರ ದೊರಕಿಸಬೇಕು. ತಾತ್ಕಾಲಿಕವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಯಾವುದೇ ವಿಳಂಬವಿಲ್ಲದೆ ಕೈಗೊಳ್ಳಬೇಕು. ಶಾಶ್ವತ ಕಾಮಗಾರಿ ಕೈಗೊಳ್ಳಲು ಪ್ರಸ್ತಾವ ಸಲ್ಲಿಸಬೇಕೆಂದು ತಿಳಿಸಿದರು.

ನೌಬಾದ್- ಹೈದರಾಬಾದ್ ರಿಂಗ್ ರಸ್ತೆ (ಗಡಿ ವರೆಗೆ) ಕಾಮಗಾರಿಯನ್ನು ಚರಂಡಿಯಿಂದ ಚರಂಡಿಯವರೆಗೆ ಕೈಗೊಳ್ಳಲು ಮತ್ತು ಈ ರಸ್ತೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಸ್ಥಳ ಬಿಟ್ಟು ಎಷ್ಟು ಕಿ.ಮೀ ರಸ್ತೆ ಅಭಿವೃದ್ಧಿಪಡಿಸಬೇಕಾಗುತ್ತದೆ ಎಂಬುದರ ಸಮೀಕ್ಷೆ ನಡೆಸಿ, ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು.

ಭಾಲ್ಕಿ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಶಾಲೆಗಳೂ ಜಲಾವೃತವಾಗಿವೆ. 2ರಿಂದ3 ಅಡಿ ನೀರು ನಿಂತಿದ್ದು, ಮಕ್ಕಳು ಶಾಲೆಗೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ನೀರನ್ನು ತೆರವು ಮಾಡಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ವಹಿಸಬೇಕು. ಅಗತ್ಯ ಇರುವ ಕಡೆ ಕಾಳಜಿ ಕೇಂದ್ರ ತೆರೆಯಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಹಾನಿಯಾದವರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಮನೆ ಹಾನಿ ಬಗ್ಗೆ ಅಧಿಕಾರಿಗಳು ಸರಿಯಾಗಿ ಸರ್ವೇ ಮಾಡಿಲ್ಲ. ಎರಡು ದಿನಗಳಲ್ಲಿ ಹಾನಿಯಾದ ಪ್ರದೇಶಗಳಲ್ಲಿ ಭೇಟಿ ನೀಡಿ ಸರ್ವೇ ಮಾಡಬೇಕು. ಹೆಚ್ಚಿನ ಮಾಹಿತಿಗೆ ಗ್ರಾಮ ಸಭೆ ನಡೆಸಬೇಕು ಎಂದರು.

ಮನೆ, ಬೆಳೆ, ಜಾನುವಾರು ಮತ್ತು ಇತರೆ ಹಾನಿಯಾದ ಫಲಾನುಭವಿಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ, ಪರಿಹಾರ ಒದಗಿಸಬೇಕು.

ಜಿಲ್ಲೆಯಲ್ಲಿ 37 ಜಾನುವಾರುಗಳು ಮಳೆಯಿಂದ ಸಾವನ್ನಪ್ಪಿವೆ. 20 ಜಾನುವಾರುಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಉಳಿದ 17 ಜಾನುವಾರುಗಳಿಗೆ 2 ದಿನಗಳಲ್ಲಿ ಪರಿಹಾರ ನೀಡಬೇಕು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಬಳಿ ಹೋಗಿ ಹೆಚ್ಚುವರಿ ಪರಿಹಾರ ನೀಡುವಂತೆ ಮನವಿ ಸಲ್ಲಿಸೋಣ ಎಂದರು.

‌ಸಂಸದ ಸಾಗರ್‌ ಖಂಡ್ರೆ ಮಾತನಾಡಿ, ಹವಾಮಾನ ಇಲಾಖೆ ಮೊದಲೇ ತಿಳಿಸಿದ್ದರೆ ರೈತರು ಬೇಗ ರಾಶಿ ಮಾಡಿಕೊಳ್ಳುತ್ತಿದ್ದರು. ಹವಾಮಾನದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಮಾತನಾಡಿ, ವರವಟ್ಟಿ ಸೇತುವೆ ಸಂಪೂರ್ಣ ಹದಗೆಟ್ಟಿದು, ತಕ್ಷಣ ಸರಿಪಡಿಸಬೇಕು ಎಂದು ಸಚಿವರಿಗೆ ತಿಳಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

‘ಮನೆ ವಸ್ತು ಹಾನಿಯಾದರೆ ₹7 ಸಾವಿರ ಪರಿಹಾರ’
‘ಮನೆಯ ವಸ್ತುಗಳು ಹಾನಿಯಾದರೆ ₹7 ಸಾವಿರ, ಶೇ 50ರಷ್ಟು ವರೆಗೆ ಹಾನಿಯಾದರೆ ₹30 ಸಾವಿರ, ಪೂರ್ಣ ಪ್ರಮಾಣದಲ್ಲಿ ಹಾನಿಯಾದರೆ ಎಸ್‍ಡಿಆರ್‌ಎಫ್ ಮತ್ತು ಎನ್‍ಡಿಆರ್‌ಎಫ್ ಅಡಿ ₹1.20 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ₹1.80 ಲಕ್ಷ ಪರಿಹಾರ ನೀಡಲಾಗುವುದು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

‘ಮನೆ ಹಾನಿಯಾದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ₹7 ಸಾವಿರ ಪರಿಹಾರ ಅವರಿಗೆ ಯಾವುದಕ್ಕೂ ಸಾಕಾಗುವುದಿಲ್ಲ’ ಎಂದು ಗಮನ ಸೆಳೆದ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅವರ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು.

ಮಳೆಯಿಂದ ಬೀದರ್‌ ಜಿಲ್ಲೆಯಲ್ಲಿ ಮೂಲಸೌಕರ್ಯಕ್ಕೆ ಆಗಿರುವ ಹಾನಿಯ ವಿವರ

  • 70 ಕಿ.ಮೀ ರಸ್ತೆ

  • 47 ಸೇತುವೆಗಳು

  • 1,335 ಶಾಲಾ ಕೊಠಡಿಗಳು

  • 138 ವಿದ್ಯುತ್‌ ಕಂಬಗಳು

  • 21 ಟ್ರಾನ್ಸ್‌ಫಾರ್ಮರ್‌ಗಳು

  • 11 ಕಿ.ಮೀ ವಿದ್ಯುತ್‌ ತಂತಿ

  • 38 ಸಣ್ಣ ನೀರಾವರಿ ಇಲಾಖೆಯ ಕೆರೆ

‘ದುರ್ಘಟನೆ ಸಂಭವಿಸಿದರೆ ಬಿಇಒ, ಡಿಒ, ಮುಖ್ಯಶಿಕ್ಷಕನ ಹೊಣೆ’
ಸೋರುತ್ತಿರುವ ಅಂಗನವಾಡಿ ಹಾಗೂ ಶಾಲೆಗಳ ಮಾಹಿತಿಯನ್ನು ನೀಡಬೇಕು. ಸೋರುತ್ತಿರುವ ಕೋಣೆಗಳಲ್ಲಿ ತರಗತಿ ತೆಗೆದುಕೊಳ್ಳಬಾರದು. ಒಂದುವೇಳೆ ತರಗತಿ ನಡೆಸಿ, ಯಾವುದೇ ದುರ್ಘಟನೆ ಸಂಭವಿಸಿದರೆ ಅದಕ್ಕೆ ಬಿಇಒ, ಡಿಒ ಹಾಗೂ ಸಂಬಂಧಪಟ್ಟ ಶಾಲೆ ಮುಖ್ಯಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.