ADVERTISEMENT

ಓವರ್ ಲೋಡ್ ಗಾಡಿಗಳಿಂದ ಆಗುವ ಅಪಘಾತಗಳಿಗೆ ಹೊಣೆ ಯಾರು?

ಹುಲಸೂರ: ತಾಲ್ಲೂಕಿನಲ್ಲಿ ಪ್ರಾಣಾಪಾಯಕ್ಕೆ ಇಂಬು ನೀಡುತ್ತಿರುವ ಡಬಲ್ ಟ್ರಾಲಿ ಟ್ರ್ಯಾಕ್ಟ‌ರ್ ಸಂಚಾರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:47 IST
Last Updated 2 ಡಿಸೆಂಬರ್ 2025, 6:47 IST
ಹುಲಸೂರ ಪಟ್ಟಣದ ಭಾಲ್ಕಿ - ಬಸವಕಲ್ಯಾಣ ಮುಖ್ಯ ರಸ್ತೆಯಲ್ಲಿ ಡಬಲ್ ಟ್ರಾಲಿಯಲ್ಲಿ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್
ಹುಲಸೂರ ಪಟ್ಟಣದ ಭಾಲ್ಕಿ - ಬಸವಕಲ್ಯಾಣ ಮುಖ್ಯ ರಸ್ತೆಯಲ್ಲಿ ಡಬಲ್ ಟ್ರಾಲಿಯಲ್ಲಿ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್   

ಹುಲಸೂರ: ನಿಗದಿಗಿಂತ ಹೆಚ್ಚು ಭಾರ ಹೊತ್ತ ವಾಹನಗಳಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ನಿಯಮಗಳ ಪಾಲನೆಯಾಗುತ್ತಿಲ್ಲ, ರಸ್ತೆಗಳು ಹಾಳಾಗುತ್ತಿವೆ, ಅಪಘಾತಗಳ ಸಂಖ್ಯೆಯೂ ಹಚ್ಚಿದ್ದು ಪ್ರಾಣಗಳಿಗೆ ಕಂಟಕವಾಗಿ ಪರಿಣಮಿಸಿದೆ.

ತಾಲ್ಲೂಕು ಹೆದ್ದಾರಿಗಳಲ್ಲಿ ಕಬ್ಬು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ್‌, ಮರಳು, ಅದಿರು, ಮರುಮ್‌ ಸಾಗಾಣಿಕೆ ಟಿಪ್ಪರ್‌ಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅಲ್ಲದೆ ಎಲ್ಲೆಂದಲ್ಲಿ ಪಾರ್ಕಿಂಗ್‌ ಮಾಡುವುದರಿಂದ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ.

ನಿಯಮ ಉಲ್ಲಂಘನೆಯ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಚಾಲಕರನ್ನು ಪ್ರಶ್ನಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ತಾಲ್ಲೂಕು ಸುತ್ತಲಿನ ಕೃಷಿ ಜಮೀನುಗಳಲ್ಲಿ ಕಬ್ಬು ಕಟಾವು ನಡೆದಿದ್ದು ಕಾರ್ಖಾನೆಗೆ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಅತಿಯಾಗಿ ಕಬ್ಬು ಸಾಗಾಣಿಕೆ ಆಗುತ್ತಿದೆ.

ADVERTISEMENT

ಸರ್ಕಾರದ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಸುಮಾರು 18ರಿಂದ 20 ಟನ್, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 30 ಟನ್, ರಾಜ್ಯ ಹೆದ್ದಾರಿಗಳಲ್ಲಿ 40 ಟನ್ ಭಾರದ ವಾಹನಗಳು ಸಂಚರಿಸಬೇಕು. ಆದರೆ ತಾಲ್ಲೂಕಿನಲ್ಲಿ ನಿಯಮ ಬಾಹಿರವಾಗಿ ಗ್ರಾಮೀಣ ರಸ್ತೆಗಳಲ್ಲಿ ಸುಮಾರು 25ರಿಂದ 30 ಟನ್ ಅಧಿಕ ಭಾರದ ಟಿಪ್ಪರ್‌ಗಳು ಸಂಚರಿಸುತ್ತಿವೆ. ಇದರಿಂದಾಗಿ ರಸ್ತೆಗಳು ಹದಗೆಟ್ಟಿವೆ.

ಟ್ರ್ಯಾಕ್ಟ‌ರ್ ಮತ್ತು ಟ್ರ್ಯಾಲಿ ಬಳಸಿ 6 ಟನ್ ಕಬ್ಬು ಸಾಗಣೆ ಮಾಡಬಹುದು. 6 ಚಕ್ರದ ಲಾರಿಗಳಲ್ಲಿ ನಿಯಮದ ಪ್ರಕಾರ 12.50 ಟನ್ ತುಂಬಲು ಅವಕಾಶ ಇದೆ. ಆದರೆ ಮಿತಿ ಉಲ್ಲಂಘಿಸಿ ಕಾರ್ಖಾನೆಗಳಿಗೆ ಹೆಚ್ಚುವರಿ ಕಬ್ಬು ತುಂಬಿಸಿ ಸಾಗಿಲಾಗುತ್ತದೆ. ಅತಿಯಾದ ಭಾರಕ್ಕೆ ರಸ್ತೆಗಳು ಹಾಳಾಗುತ್ತಿವೆ, ಜನ–ಜಾನುವಾರುಗಳ ಪ್ರಾಣಹಾನಿಗೂ ಕಾರಣವಾಗುತ್ತದೆ. ಹತ್ತಾರು ಕಿ.ಮೀ  ಮಾರ್ಗದಲ್ಲಿ ಟ್ರ್ಯಾಕ್ಟರ್‌ಗು ಡಬಲ್ ಟ್ರಾಲಿಗಳನ್ನು ಹೊತ್ತು ಸಾಗುತ್ತವೆ.

ಏಕಕಾಲದಲ್ಲಿ 20 ಟನ್ ಸಾಮರ್ಥ್ಯದ ಕಬ್ಬನ್ನು ಡಬಲ್‌ ಟ್ರಾಲಿಗಳಲ್ಲಿ ತುಂಬಿಸಲಾಗುತ್ತದೆ ಎಂದು ಹೇಳುತ್ತಾರೆ ಕಾರ್ಮಿಕರು.

ಶಬ್ದ ಮಾಲಿನ್ಯ ನಿಯಂತ್ರಣ ಸಾಮಾನ್ಯವಾಗಿ ತಾಲ್ಲೂಕು ಆಡಳಿತದ ವ್ಯಾಪ್ತಿಗೆ ಬಂದರೂ ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ಪೊಲೀಸರು ವಹಿಸಿಕೊಳ್ಳಬೇಕಿದೆ. ಕಬ್ಬಿನ ಸಾಗಾಟದ ಟ್ರ್ಯಾಕ್ಟರ್‌ಗಳಲ್ಲಿನ ಕರ್ಕಶ ಶಬ್ದಕ್ಕೆ ಸಾರ್ವಜನಿಕರ ತೀವ್ರ ವಿರೋಧವಿದೆ. ವಾಹನ ಚಾಲಕರನ್ನು ಒಂದೆಡೆ ಸೇರಿಸಿ ಈ ಬಗ್ಗೆ ಎಚ್ಚರಿಕೆ ನೀಡಬೇಕಿದೆ. ನಿಯಮ ಉಲ್ಲಂಘಿಸಿದರೆ ದಂಡ ಹಾಕಬೇಕು ಎಂಬುದು ಜನರ ಒತ್ತಾಯ.

ಶಾಲೆ ಆರಂಭವಾಗುವ ಬೆಳಿಗ್ಗೆ 9.30ರಿಂದ 10.30 ಮತ್ತು ಶಾಲೆ ಬಿಡುವ ಸಂಜೆ 4.15 ರಿಂದ 5.30ರವರೆಗೆ ಅವಧಿಯಲ್ಲಿ  ಟ್ರಕ್ ಮತ್ತು ಟ್ರಾಕ್ಟರ್ ಮೂಲಕ ಕಬ್ಬು ಸಾಗಣೆ ನಿಲ್ಲಿಸಬೇಕು. ಕಬ್ಬು ಸಾಗಿಸುವ ಎಲ್ಲ ವಾಹನಗಳು, ಎತ್ತಿನ ಗಾಡಿಗಳಿಗೆ ಕಡ್ಡಾಯವಾಗಿ ಕೆಂಪು ರೇಡಿಯಂ ಹಚ್ಚಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಗಣೇಶ ಸೂರ್ಯವಂಶಿ ಒತ್ತಾಯ.

ರಸ್ತೆ ಕೆಟ್ಟರೆ ಕಾರಣ ಯಾರು?: ಮಿತಿಗಿಂತ ಹೆಚ್ಚು ಕಬ್ಬು ತುಂಬಿಕೊಂಡು ಬರುವ ವಾಹನಗಳಿಂದ ರಸ್ತೆಗಳು ಕಿತ್ತುಹೋಗಿವೆ. ಆದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕಾರ್ಖಾನೆಯ ಮಾಲೀಕರಾಗಲಿ, ಅಧಿಕಾರಿಗಳಾಗಲಿ, ಚಾಲಕರಾಗಲಿ, ಪೊಲೀಸರಾಗಲಿ ಹದಗೆಟ್ಟ ರಸ್ತೆಗೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

‘ಜಿಲ್ಲೆಯಲ್ಲಿ ಗಣಿ–ಭೂ ವಿಜ್ಞಾನ ಮತ್ತು ಆರ್‌ಟಿಒ ಕಚೇರಿಗಳು ಇವೆ. ಅವುಗಳ ಎದುರು ಅಧಿಕ ಭಾರದ ವಾಹನಗಳು ಹಗಲು ಹೊತ್ತಿನಲ್ಲೇ ಮರಳು ಸಾಗಿಸುತ್ತಿವೆ. ಕೆಲವು ಟಿಪ್ಪರ್‌ಗಳಿಗೆ ವಾಹನ ಸಂಖ್ಯೆಯೇ ಇರುವುದಿಲ್ಲ. ಇಂತಹ ಟಿಪ್ಪರ್‌ಗಳು ಸಂಚರಿಸಿದರೂ ಅಧಿಕಾರಿಗಳು ಮೌನವಾಗಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

‘ಅಧಿಕ ಭಾರವನ್ನು ಹೊತ್ತುಕೊಂಡು ಸಂಚರಿಸುವ ಟಿಪ್ಪರಗಳ ವೇಗಕ್ಕೆ ರಸ್ತೆಗಳಲ್ಲಿ ಧೂಳು ಆವರಿಸಿ ಅನೇಕ ವೇಳೆ ಅಪಘಾತಗಳು ಸಂಭವಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಬೇಕು’ ಎಂಬುದು ನಾಗರಿಕರ ಆಗ್ರಹ.

ನಿಗದಿಗಿಂತ ಹೆಚ್ಚು ಕಬ್ಬು ಸಾಗಾಣಿಕೆ ಮಾಡುವಾಗ ಲೋಡ್ ಎಳೆಯದಿದ್ದರೆ ಎಂಜಿನ್ ಮೇಲೇಳುತ್ತದೆ. ಹಲವು ಬಾರಿ ಟ್ರಾಲಿ ಅಥವಾ ಎಂಜಿನ್ ಕಳಚಿ ತೆಗೆಯುವರೆಗೆ ವಾಹನಗಳು ರಸ್ತೆಯಲ್ಲಿಯೇ ನಿಲ್ಲಬೇಕಾಗುತ್ತದೆ

-ರಮೇಶ ಬಸ್ ಚಾಲಕ

ಕಬ್ಬು ತುಂಬಿಕೊಂಡು ಹೋಗುವ ವಾಹನಗಳ ಮೇಲೆ ವೇಗದ ಮತ್ತು ತೂಕದ ಬಗ್ಗೆ ನಿರ್ಬಂಧ ಹಾಕಲು ಕಾರ್ಖಾನೆಯವರು ಮುಂದಾಗಬೇಕು

-ಕಾಳಿದಾಸ ಸೂರ್ಯವಂಶಿ ಸಾಮಾಜಿಕ ಕಾರ್ಯಕರ್ತ

ಜಿದ್ದಾಜಿದ್ದಿನಿಂದ ಟ್ರ್ಯಾಕ್ಟ‌ರ್ ಚಾಲನೆ

ಕಬ್ಬು ಸಾಗಿಸುವ ವಾಹನಗಳ ಚಾಲಕರು ನಾ ಮುಂದೆ ತಾ ಮುಂದೆ ಎನ್ನುವಂತೆ ರಸ್ತೆಯಲ್ಲಿ ಜಿದ್ದಾ ಜಿದ್ದಿನಿಂದ ಟ್ರ್ಯಾಕ್ಟರ್ ಓಡಿಸುತ್ತಾರೆ. ಇದು ವಾಹನ ಸವಾರರಿಗೆ ತಲೆ ನೋವಾಗಿದೆ. ಅದರಲ್ಲೂ ಡಬಲ್ ಟ್ರಾಲಿ ಹೆಚ್ಚು ಅಪಾಯಕಾರಿ. ಮತ್ತೆ ಕೆಲವರು ಮುಂದಿನ ಎಂಜಿನ್ ಚಕ್ರಗಳನ್ನು ಗಾಳಿಯಲ್ಲಿ ತೂರಿಕೊಂಡೇ ಟ್ರ್ಯಾಕ್ಟ‌ರ್ ಓಡಿಸುತ್ತಾರೆ. ಅತಿಯಾದ ವೇಗ ಹಾಗೂ ಮಿತಿಮೀರಿದ ಭಾರದಿಂದ ಪ್ರತಿದಿನವೂ ಟ್ರ್ಯಾಕ್ಟ‌ರ್ ಪಲ್ಟಿಯಾಗುವುದು ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.